ಮುಲ್ಕಿಯ ರಿಕ್ಷಾ ಚಾಲಕ ಶರೀಫ್ ಕೊಲೆ ಪ್ರಕರಣ: ಆರೋಪಿ ಅಭಿಷೇಕ್ ಶೆಟ್ಟಿ ಬಂಧನ

Update: 2025-04-14 17:08 IST
ಮುಲ್ಕಿಯ ರಿಕ್ಷಾ ಚಾಲಕ ಶರೀಫ್ ಕೊಲೆ ಪ್ರಕರಣ: ಆರೋಪಿ ಅಭಿಷೇಕ್ ಶೆಟ್ಟಿ ಬಂಧನ

ಅಭಿಷೇಕ್ ಶೆಟ್ಟಿ

  • whatsapp icon

ಮಂಜೇಶ್ವರ: ದ.ಕ. ಜಿಲ್ಲೆಯ ಮುಲ್ಕಿ ಕೊಲ್ನಾಡು ನಿವಾಸಿ, ಆಟೋ ರಿಕ್ಷಾ ಚಾಲಕ ಮುಹಮ್ಮದ್ ಶರೀಫ್ (52) ಎಂಬವರನ್ನು ಹತ್ಯೆ ಮಾಡಿ ಮಂಜೇಶ್ವರ ಸಮೀಪ ಬಾವಿಗೆಸೆದ ಪ್ರಕರಣದ ಆರೋಪಿಯನ್ನು  ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.

ಸುರತ್ಕಲ್ ನಿವಾಸಿ ಅಭಿಷೇಕ್ ಶೆಟ್ಟಿ (40) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಪೂರ್ವ ದ್ವೇಷವೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದು, ಕೊಲೆ ಆರೋಪಿ ಅಭಿಷೇಕ್ ಶೆಟ್ಟಿ ಸುರತ್ಕಲ್ ನಿವಾಸಿಯಾಗಿದ್ದು, ಮಂಗಳೂರಿನ ಶಾಲೆಯೊಂದರ ಬಸ್ಸು ಚಾಲಕನಾಗಿದ್ದ ಸಂದರ್ಭ ಉಂಟಾದ ದ್ವೇಷ ಕೊಲೆಗೆ ಕಾರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 


(ಅಭಿಷೇಕ್ ಶೆಟ್ಟಿ)

ಅಭಿಷೇಕ್ ಶೆಟ್ಟಿ ಗಾಂಜಾ ಪ್ರಕರಣದ ಆರೋಪಿಯಾಗಿದ್ದು, ಈತನ ವಿರುದ್ಧ ಮೂರಕ್ಕೂ ಅಧಿಕ ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಲೆ ಕೃತ್ಯದಲ್ಲಿ ಸ್ಥಳೀಯರ ಅಥವಾ ಉಳಿದವರ ಸಹಾಯ ಲಭಿಸಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಎ.9ರಂದು ರಾತ್ರಿಯಿಂದ ನಾಪತ್ತೆಯಾಗಿದ್ದ ಮುಹಮ್ಮದ್ ಶರೀಫ್ ಅವರ ಮೃತದೇಹ ಎ.10ರಂದು ರಾತ್ರಿ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜತ್ತೂರು ಪದವು ಎಂಬಲ್ಲಿನ ನಿರ್ಜನ ಪ್ರದೇಶದ ಬಾವಿಯಲ್ಲಿ ಪತ್ತೆಯಾಗಿತ್ತು. ಅವರನ್ನು ಕೊಲೆಗೈದು ಬಾವಿಗೆ ಎಸೆದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿತ್ತು.

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಮಂಜೇಶ್ವರ ಠಾಣಾ ಪೊಲೀಸರಿಗೆ ಮಂಗಳೂರಿನಿಂದ ರಿಕ್ಷಾವನ್ನು ಬಾಡಿಗೆಗೆ ಪಡೆದು ತೆರಳಿರುವ ಮಾಹಿತಿ ಲಭಿಸಿತ್ತು. ಶರೀಫ್ ಅವರ ಆಟೋ ರಿಕ್ಷಾ ಬುಧವಾರ ರಾತ್ರಿ 12 ಗಂಟೆ ಸುಮಾರಿಗೆ ಮಂಜೇಶ್ವರ ಕಡೆಗೆ ಬರುತ್ತಿರುವುದು ತಲಪಾಡಿ ಟೋಲ್ ಗೇಟಿನ ಸಿಸಿಟಿವಿ ಕ್ಯಾಮರಾದಲ್ಲೂ ಸೆರೆಯಾಗಿತ್ತು. ಈ ಎಲ್ಲಾ ಮಾಹಿತಿಗಳನ್ನು ಕೇಂದ್ರೀಕರಿಸಿ ತನಿಖೆ ಮುಂದುವರಿಸಿರುವ ಪೊಲೀಸರು ಆರೋಪಿ ಅಭಿಷೇಕ್ ಶೆಟ್ಟಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News