ಮಂಗಳೂರಿನ ಇಂದಿನ ದುಸ್ಥಿತಿಗೆ ಅತಿಥಿ ಸಚಿವರಂತೆ ವರ್ತಿಸುವ ಉಸ್ತುವಾರಿ ಸಚಿವರೂ ಹೊಣೆ : ದಿನೇಶ್ ಗುಂಡೂರಾವ್ ವಿರುದ್ಧ ಮುನೀರ್ ಕಾಟಿಪಳ್ಳ ಆಕ್ರೋಶ

ಮುನೀರ್ ಕಾಟಿಪಳ್ಳ/ದಿನೇಶ್ ಗುಂಡೂರಾವ್
ಮಂಗಳೂರು : "ದ.ಕ.ಉಸ್ತುವಾರಿ ಸಚಿವರು ಈಗ ಎಚ್ಚರಗೊಂಡರು. ಮುಸ್ಲಿಂ ವಲಸೆ ಕಾರ್ಮಿಕನ ಮೇಲಿನ ಗುಂಪು ಹಲ್ಲೆ, ಹತ್ಯೆಯ ಕುರಿತು ಎಕ್ಸ್ ನಲ್ಲಿ ಘಟನೆ ನಡೆದು ಎರಡು ದಿನಗಳ ತರುವಾಯ ಪೋಸ್ಟ್ ಹಾಕಿದ್ದಾರೆ. ಅದೂ ಅರಬರೆ ಮಾಹಿತಿ" ಎಂದು ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಇಂದಿನ ದುಸ್ಥಿತಿಗೆ ಅತಿಥಿ ಸಚಿವರಂತೆ ವರ್ತಿಸುವ ಉಸ್ತುವಾರಿ ಸಚಿವರೂ ಹೊಣೆ. ದಂಧೆಕೋರರ ಜೊತೆ, ಕೋಮುವಾದಿಗಳ ಜೊತೆ ಸಾಫ್ಟ್ ಕಾರ್ನರ್ ಹೊಂದಿರುವ ಪೊಲೀಸ್ ಕಮೀಷನರ್ ರನ್ನು ಎಲ್ಲಾ ಆರೋಪಗಳ ಹೊರತಾಗಿಯು ಮಂಗಳೂರಿನಲ್ಲಿ ಉಳಿಸಿಕೊಂಡು ಈ ಸ್ಥಿತಿಗೆ ಉಸ್ತುವಾರಿ ಸಚಿವರು ತಂದಿಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಚಿವರ ಪ್ರಕಾರ ವಲಸೆ ಕಾರ್ಮಿಕ ಕೋಮುವಾದಿ ಗೂಂಡಾ ಗುಂಪುಗಳ ಜೊತೆ ಮಾತಿನ ಚಕಮಕಿ ಮಾಡಿದನಂತೆ, ಈ ಮಾಹಿತಿ ಇವರಿಗೆ ಯಾರು ನೀಡಿದರೊ ! ಇನ್ನು, ಹೊಡೆದವರು ಕ್ರಿಕೆಟ್ ಆಟಗಾರರಂತೆ, ದಾರುಣವಾಗಿ ಹತ್ಯೆಗೀಡಾದ ವಲಸೆ ಕಾರ್ಮಿಕ ಅನ್ಯಕೋಮಿನವನಂತೆ. ಮುಸ್ಲಿಮರು ಸಚಿವ ದಿನೇಶ್ ಗುಂಡೂರಾವ್ ಅವರಿಗೆ "ಅನ್ಯ ಕೋಮಿನವರು" ಆದದ್ದು ಯಾವಾಗಾ ! ಎಂದು ಅವರು ಪ್ರಶ್ನಿಸಿದ್ದಾರೆ.
ವಿಷಯವನ್ನು ಸರಿಯಾಗಿ ಗ್ರಹಿಸದೆ ಟ್ವೀಟ್ ಮಾಡುವ ಬದಲು ಸಚಿವ ಗುಂಡೂರಾವ್ ಸುಮ್ಮನಿರಬಹುದಿತ್ತು. ಜನರೂ ಅವರನ್ನು ಮರೆತು ಬಿಟ್ಟಿದ್ದರು. ಸಚಿವರಿಗೆ ಏನಾದರೂ ಕಾಳಜಿ ಇದ್ದರೆ ಈ ಗುಂಪು ಹಲ್ಲೆ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಲು ಮುಖ್ಯಮಂತ್ರಿ ಜೊತೆ ಮಾತಾಡಲಿ. ಪ್ರಕರಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನೂ ಜೈಲಿಗಟ್ಟುವುದನ್ನು ಖಾತರಿ ಪಡಿಸಲಿ, ಶಿಕ್ಷೆಯಾಗುವಂತೆ ನೋಡಿ ಕೊಳ್ಳಲಿ. ಮಂಗಳೂರಿಗೊಬ್ಬ ದಕ್ಷ ಪೊಲೀಸ್ ಕಮೀಷನರ್ ರನ್ನು ನೇಮಿಸಲಿ. ಅದು ಬಿಟ್ಟು ತಪ್ಪು ತಪ್ಪಾದ ಸಂದೇಶ ನೀಡುವ ಟ್ವೀಟ್ ಮೂಲಕ ತಿಪ್ಪೆ ಸಾರಿಸುವುದು ಬೇಡ. ಸಚಿವರ ನಡೆ ಇದೇ ರೀತಿ ಮುಂದುವರಿದರೆ ಮುಖ್ಯಮಂತ್ರಿಯ ಮಂಗಳೂರು ಭೇಟಿಯ ವೇಳೆ ಕಪ್ಪು ಬಾವುಟ ಹಿಡಿದು ಘೆರಾವ್ ಮಾಡಬೇಕಾಗುತ್ತದೆ ಎಂದು ಅವರು ಪ್ರಕಟನೆ ತಿಳಿಸಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ : ದಿನೇಶ್ ಗುಂಡೂರಾವ್
ಮಂಗಳೂರಿನ ಹೊರವಲಯದ ಕುಡುಪು ಬಳಿ ಯುವಕನನ್ನ ಕಲ್ಲಿನಿಂದ ಹೊಡೆದು ಬರ್ಬರ ಹತ್ಯೆ ಮಾಡಿರುವ ಘಟನೆ ಅಂತ್ಯಂತ ಖಂಡನೀಯ. ಕ್ರಿಕೆಟ್ ಆಟ ಆಡುವ ವೇಳೆ ಆಟಗಾರರ ಗುಂಪು ಹಾಗೂ ಅನ್ಯ ಕೋಮಿನ ಯುವಕನ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು, ಯುವಕನ ಮೇಲೆ ಹಲ್ಲೆಮಾಡಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಈ ರೀತಿಯ ಘಟನೆಗಳು ಕೋಮು ವೈಷಮ್ಯವನ್ನ ಬೀರುತ್ತವೆ. ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ನಾನು ಸೂಚನೆ ನೀಡಿದ್ದೇನೆ. ಈಗಾಗಲೇ ಪ್ರಕರಣ ಕುರಿತು ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಸೂಕ್ತ ತನಿಖೆ ನಡೆಸಲಾಗುತ್ತಿದೆ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೇ ಕೋಮುಸೌಹಾರ್ಧತೆ ಹಾಗೂ ಶಾಂತಿ ಕಾಪಾಡುಬೇಕು ಎಂದು ಅವರು ಮನವಿ ಮಾಡಿದ್ದಾರೆ.