ಅರಣ್ಯ ನಂಟಿನಿಂದ ಹೊರಬಾರದ ಮಲೆಕುಡಿಯರು
ಮಂಗಳೂರು: ದ.ಕ. ಜಿಲ್ಲೆಯ ಮೂಲನಿವಾಸಿಗಳಾದ ಮಲೆಕುಡಿಯ ಜನಾಂಗ ಅರಣ್ಯದ ನಂಟಿನಿಂದ ಹೊರಬಾರದೆ ಮೂಲ ಭೂತ ಸೌಕರ್ಯ, ಶಿಕ್ಷಣ, ಸರಕಾರಿ ಸೌಲಭ್ಯಗಳಿಂದ ವಂಚಿತವಾಗಿದೆ. ಜಿಲ್ಲೆಯ ಬೆಳ್ತಂಗಡಿ, ಮಂಗಳೂರು, ಬಂಟ್ವಾಳ, ಕಡಬ, ಸುಳ್ಯ ಹಾಗೂ ಪುತ್ತೂರು ತಾಲೂಕಿನ ವಿವಿಧೆಡೆ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಮಲೆಕುಡಿಯರು ಉಳಿದ ಬುಡಕಟ್ಟು ಜನಾಂಗಗಳಂತೆ ಬಡವರಾಗಿಯೇ ಬದುಕುತ್ತಿದ್ದಾರೆ.
ಜಿಲ್ಲೆಯ ಬೆಳ್ತಂಗಡಿಯಲ್ಲಿ ಅತೀ ಹೆಚ್ಚು ಮಲೆಕುಡಿಯ ಕುಟುಂಬಗಳು ವಾಸಿಸುತ್ತಿವೆ. ತಾಲೂಕಿನ ನೆರಿಯ, ದಿಡುಪೆ, ಮಲವಂತಿಗೆ, ಪುದುಬೆಟ್ಟು, ಪಟ್ರಮೆ, ಶಿಶಿಲ, ನಿಡ್ಲೆ, ಕುತ್ಲೂರು, ನಾವೂರುಗಳಲ್ಲಿ ಈ ಸಮುದಾಯದ ಜನರು ಹರಡಿಕೊಂಡಿದ್ದಾರೆ. ನಾರಾವಿ ಗ್ರಾಮದ ಕುತ್ಲೂರುವಿನ 25ಕ್ಕೂ ಅಧಿಕ ಹಾಗೂ ನೆರಿಯಾ ಗ್ರಾಮದ ಚಾರ್ಮಾಡಿ ಘಾಟಿಯ 9ನೇ ತಿರುವಿನಲ್ಲಿರುವ ಬಾಂಜಾರುಮಲೆಯ 50ಕ್ಕೂ ಅಧಿಕ ಕುಟುಂಬಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ಸಮರ್ಪಕವಾದ ರಸ್ತೆ ವ್ಯವಸ್ಥೆ, ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರದ ಸೌಲಭ್ಯಗಳಿಲ್ಲದೆ ಇಲ್ಲಿನ ನಿವಾಸಿಗಳು ನಿರಂತರ ಸಂಕಷ್ಟ ಎದುರಿಸುತ್ತಿದ್ದಾರೆ.
ಇಲ್ಲಿನ ನಿವಾಸಿಗಳು ಅಗತ್ಯ ವಸ್ತುಗಳ ಖರೀದಿಗೆ ಸುಮಾರು 6ರಿಂದ 7 ಕಿ.ಮೀ.ನಷ್ಟು ನಡೆದುಕೊಂಡೇ ಹೋಗಬೇಕಿದೆ. ಸಮರ್ಪಕವಾದ ರಸ್ತೆ ನಿರ್ಮಾಣವಾದಲ್ಲಿ ಕುತ್ಲೂರಿನ ಹಲವು ಸಮಸ್ಯೆಗಳು ಬಗೆಹರಿಯ ಬಹುದು ಎಂದು ಹೇಳುತ್ತಾರೆ ಇಲ್ಲಿನ ಮಲೆಕುಡಿಯರು.
ಬಾಂಜಾರುಮಲೆ ಪ್ರದೇಶದಲ್ಲಿ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ ಗಳಿಲ್ಲ. ಇಲ್ಲಿನ ಪುಟಾಣಿ ಮಕ್ಕಳು ಶಾಲೆಗೆ 15ಕ್ಕೂ ಅಧಿಕ ಕಿ.ಮೀ. ದೂರದ ಕಕ್ಕಿಂಜೆಗೆ ತೆರಳಬೇಕಾಗುತ್ತದೆ. ಆಸ್ಪತ್ರೆ ಕೂಡಾ ಹತ್ತಿರದಲ್ಲಿಲ್ಲದ ಕಾರಣ ರೋಗಿಗಳಿಗೂ ತ್ರಾಸದಾಯಕವಾಗಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ಮಲವಂತಿಗೆ ಗ್ರಾಮದ ಎಲೆನೀರು ಎಂಬಲ್ಲಿ 20ಕ್ಕೂ ಅಧಿಕ ಮಲೆಕುಡಿಯ ಕುಟುಂಬಗಳು ವಾಸಿಸುತ್ತಿವೆ. ಇಲ್ಲಿನ ಪ್ರಮುಖ ಸಮಸ್ಯೆ ರಸ್ತೆ ಸಂಪರ್ಕವಾಗಿದೆ. ಎಲೆನೀರು ಅರಣ್ಯ ಪ್ರದೇಶವಾಗಿರುವುದರಿಂದ ಇಲ್ಲಿಗೆ ರಸ್ತೆ ನಿರ್ಮಾಣ ಮಾಡಲು ಅರಣ್ಯ ಇಲಾಖೆಯಿಂದ ವಿರೋಧ ವಿದೆ. ಇದರಿಂದ ಕೇವಲ 10 ಕಿ.ಮೀ.ನಷ್ಟು ಹತ್ತಿರವಿರುವ ಮಲವಂತಿಗೆ ಗ್ರಾಮ ಪಂಚಾಯತ್ ಕಚೇರಿ ಹಾಗೂ ಇಲ್ಲಿನ ಜನರಿಗೆ ದಿನಬಳಕೆಯ ಸಾಮಗ್ರಿಗಳ ಖರೀದಿಗೆ ಬರಬೇಕಾದರೆ 120ಕ್ಕೂ ಅಧಿಕ ಕಿ.ಮೀ. ಸುತ್ತಿಬಳಸಿ ಬರಬೇಕಾಗುತ್ತದೆ.
ಸುಬ್ರಹ್ಮಣ್ಯದಲ್ಲಿ 100ಕ್ಕೂ ಅಧಿಕ ಮಲೆಕುಡಿಯ ಕುಟುಂಬಗಳು ನೆಲೆಸಿವೆ. ರಾಜ್ಯದ ಇತಿಹಾಸ ಪ್ರಸಿದ್ಧವಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾದಲ್ಲಿ ಚಂಪಾಷಷ್ಠಿ ದಿನಗಳಲ್ಲಿ ನಿರ್ಮಾಣವಾಗುವ ಬ್ರಹ್ಮರಥ ಸೇರಿದಂತೆ ಇತರ ರಥಗಳ ಅಲಂಕಾರಿಕ ಕೆಲಸಗಳ ಹಿಂದೆ ಮಲೆಕುಡಿಯ ಜನಾಂಗದ ಅವಿರತ ಶ್ರಮವಿದೆ. ಕ್ಷೇತ್ರದಲ್ಲಿ ಪಂಚ ಪರ್ವ ವಿಭಾಗದಲ್ಲಿ ಇಲ್ಲಿನ ಮಲೆಕುಡಿಯರು ಕೆಲಸ ನಿರ್ವಹಿಸುತ್ತಾರೆ.
ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಮಲೆಕುಡಿಯ ಸಮುದಾಯದ ಕೆಲವು ಕುಟುಂಬಗಳಿಗೆ ಈಗಾಲೂ ಹಕ್ಕುಪತ್ರ ಸಮಸ್ಯೆ ಇದೆ. ಅರಣ್ಯ ಇಲಾಖೆಯ ವಿರೋಧದಿಂದ ಹಕ್ಕುಪತ್ರಗಳ ಸಮಸ್ಯೆ ಉಂಟಾಗಿದೆ. ನೂರಾರು ವರ್ಷಗಳಿಂದ ಈ ಬುಡಕಟ್ಟು ಜನಾಂಗ ಅದೇ ಅರಣ್ಯದೊಳಗೆ ಬದುಕಿ ಬಂದಿದ್ದರೂ ಅಲ್ಲಿಯ ಭೂಮಾಲಕತ್ವದ ಒಡೆತನ ಅವರಿಗಿಲ್ಲ.
ಕಳಪೆ ಮಟ್ಟದ ಪೌಷ್ಟಿಕ ಆಹಾರ: ಮಲೆಕುಡಿಯರಿಗೆ ತಿಂಗಳಿಗೊಮ್ಮೆ ಸರಕಾರದಿಂದ ಪೌಷ್ಟಿಕ ಆಹಾರ ವಿತರಣೆಯಾಗುತ್ತಿದೆ. ಮಲೆಕುಡಿಯರು ಹೇಳುವ ಪ್ರಕಾರ ಈ ಆಹಾರ ಕಳಪೆ ಮಟ್ಟದ್ದಾಗಿದೆ. ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಈ ಸಮಸ್ಯೆ ಬಗೆಹರಿಸಬೇಕು ಎಂದು ಅವರ ಒತ್ತಾಯ.
ತೀರಾ ಹಿಂದುಳಿದ ವರ್ಗವಾಗಿರುವ ಮಲೆಕುಡಿಯರು ಸಂಕಷ್ಟದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಆದರೆ ಜನಪ್ರತಿನಿಧಿಗಳು, ಸರಕಾರ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಸರಕಾರ ಇನ್ನಾದರೂ ಅರಣ್ಯ ಪ್ರದೇಶದಲ್ಲಿ ಬದುಕು ಕಟ್ಟಿಕೊಂಡಿರುವ ಮಲೆಕುಡಿಯರಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡಬೇಕಿದೆ. ಅವರಿಗೆ ಸ್ವಾಭಿಮಾನಿ ಬದುಕು ಕಟ್ಟಿಕೊಡುವ ಬಗ್ಗೆ ಸರಕಾರ ಮತ್ತು ಜನಪ್ರತಿನಿಧಿಗಳು ಆಸಕ್ತಿ ತೋರಿಸಬೇಕಿದೆ.
ಜಾತಿ ಪ್ರಮಾಣ ಪತ್ರದಲ್ಲಿ ಗೊಂದಲ
ಮಲೆಕುಡಿಯ ಸಮುದಾಯಲ್ಲಿ ಕೆಲವರು ಮಲೆಕುಡಿಯ, ಕುಡಿಯ, ಗೌಡ್ರು ಎಂಬಿತ್ಯಾದಿ ಹೆಸರಿನಿಂದ ಜಾತಿಯನ್ನು ಗುರುತಿಸುತ್ತಿದ್ದು, ಇದರಿಂದ ಜಾತಿ ಪ್ರಮಾಣ ಪತ್ರದಲ್ಲಿ ಗೊಂದಲ ಉಂಟಾಗಿದೆ. ಅಲ್ಲದೆ ಸರಕಾರಿ ಗೆಜೆಟ್‌ನಲ್ಲಿ ಮಲೆಕುಡಿಯ ಎಂಬ ಜಾತಿಯೇ ಇಲ್ಲ. ಬದಲಾಗಿ ಮಲೈಕುಡಿ ಎಂದು ನಮೂದಿಸಲಾಗಿದೆ. ಸರಕಾರಿ ವೆಬ್‌ಸೈಟ್‌ನಲ್ಲೂ ಮಲೆಕುಡಿಯ ಬದಲಾಗಿ ಮಲೈ ಕುಡಿ ಎಂದೇ ದಾಖಲಾಗಿದೆ. ಇದರಿಂದ ಮಲೆಕುಡಿಯರು ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರಿಸುತ್ತಾರೆ ದ.ಕ. ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀನಿವಾಸ ಉಜಿರೆ.
ಮಲೆಕುಡಿಯ ಸಮುದಾಯದ ಹೆಚ್ಚಿನ ವಿದ್ಯಾರ್ಥಿ ಗಳು ಈಗಾಗಲೇ ಪದವಿ, ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆದರೆ ಕೆಲಸವಿಲ್ಲದೆ ಮನೆಯಲ್ಲೇ ಉಳಿಯುವಂತಾಗಿದೆ. ಸರಕಾರ ಮೀಸಲಾತಿಯ ಆದ್ಯತೆ ಮೇರೆಗೆ ಇಂತಹ ವಿದ್ಯಾರ್ಥಿಗಳಿಗೆ ಸರಕಾರಿ ಕೆಲಸ ನೀಡಿದಲ್ಲಿ ಮಲೆಕುಡಿಯರು ಮುಖ್ಯವಾಹಿನಿಗೆ ಬರಲು ಹಾಗೂ ಸಮುದಾಯ ಹೆಚ್ಚು ಸಬಲವಾಗಲು ಸಹಕಾರಿಯಾದೀತು.
| ಶ್ರೀನಿವಾಸ ಉಜಿರೆ, ಅಧ್ಯಕ್ಷರು, ಮಲೆಕುಡಿಯ ಸಂಘ ದ.ಕ. ಜಿಲ್ಲೆ
2022, ಆ.28 ರಂದು ಪತ್ರಿಕೆಯಲ್ಲಿ ಪ್ರಕಟವಾದ ವರದಿ