ಮೂಡುಬಿದಿರೆ: ಪುರಾತತ್ವ ಇಲಾಖೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ

Update: 2024-10-01 16:05 GMT

ಮೂಡುಬಿದಿರೆ : ಕಳೆದ ಏಳು ವರ್ಷಗಳಿಂದ ವಿವಾದದಿಂದಾಗಿ ನನೆಗುದಿಗೆ ಬಿದಿದ್ದ ಮೂಡುಬಿದಿರೆ ಮಾರ್ಕೆಟ್ ಕಟ್ಟಡದ ಕಾಮಗಾರಿ ಮುಂದುವರಿಸಲು ಹೈಕೋರ್ಟ್‌ ಅನುಮತಿ ನೀಡಿದ್ದು, ಮುಂದಿನ ಒಂದು ತಿಂಗಳಲ್ಲಿ ಕಾಮಗಾರಿ ಪುನರ್‌ ಆರಂಭಗೊಳ್ಳಲಿದೆ.

ಮೂಡುಬಿದಿರೆ ಪುರಸಭೆಯ ಮಾರುಕಟ್ಟೆ ಕಟ್ಟಡ ಹಳೇಯದಾಗಿದ್ದ ಕಾರಣ ಸುಮಾರು 26 ಕೋಟಿ ರೂ. ಅಂದಾಜು ಮೊತ್ತದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿತ್ತು. ಈ ಸಂಬಂಧ ಹೈಟೆಕ್‌ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕಾಗಿ ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಕಾಮಗಾರಿ ನಡೆಸಲು ಕೆಯುಐಡಿಎಫ್‌ಸಿ ಮೂಲಕ ಟೆಂಡರ್‌ ಕರೆದು ಕಾಮಗಾರಿ ಆರಂಭಿಸಲಾಗಿತ್ತು. ಹಳೆಯ ಮಾರುಕಟ್ಟೆಯ ಅಂಗಡಿದಾರರಿಗೆ ಸ್ವರಾಜ್‌ ಮೈದಾನದಲ್ಲಿ ತಾತ್ಕಾಲಿಕ ನೆಲಯಲ್ಲಿ ಅಂಗಡಿಗಳನ್ನು ನಿರ್ಮಾಣ ಮಾಡಿ ನೀಡಲಾಗಿತ್ತು.

ಆದರೆ ಕಾಮಗಾರಿ ಶೇ.70 ಪೂರ್ಣಗೊಂಡ ಬಳಿಕ ಪುರಾತತ್ವ ಇಲಾಖೆಯಿಂದ ನಿರಪೇಕ್ಷಣಾ ಪತ್ರ ಪಡೆಯದೇ ಮಾರುಕಟ್ಟೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಪುರಾತತ್ವ ಇಲಾಖೆ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತ ಅರ್ಜಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ತೀರ್ಪು ಬರುವ ವರೆಗೆ ಕಾಮಗಾರಿ ನಡೆಸದೆ ಯಥಾಸ್ಥಿತಿ ಕಾಪಾಡುವಂತೆ ಹೈಕೋರ್ಟ್‌ ಆದೇಶಿಸಿತ್ತು. ಈ ಸಂಬಂಧ ಏಳು ವರ್ಷಗಳಿಂದ ಹೈಕೋರ್ಟ್‌ನಲ್ಲಿ ಪ್ರಕರಣ ನಡೆದು ಈಗ ಪುರಾತತ್ವ ಇಲಾಖೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿ ಆದೇಶ ನೀಡಿದೆ.

ನ್ಯಾಯಾಲಯದ ಆದೇಶದಂತೆ ಮೂರು ವಾರಗಳಲ್ಲಿ ನಿರಪೇಕ್ಷಣಾ ಪತ್ರ ನೀಡುವಂತೆ ಪುರಸಭೆ ಪುರಾತತ್ವ ಇಲಾಖೆ ಯನ್ನು ಆಗ್ರಹಿಸಿದ್ದು, ಅನುಮತಿ ನೀಡಲು 1ತಿಂಗಳ ಕಾಲಾವಕಾಶ ಬೇಕೆಂದು ಪುರಾತತ್ವ ಇಲಾಖೆ ಪುರಸಭೆಗೆ ಮಾಹಿತಿ ನೀಡಿದೆ ಎಂದು ತಿಳಿದು ಬಂದಿದೆ.

ಸದ್ಯ ಕಳೆದ ಏಳು ವರ್ಷಗಳಿಂದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆಯ ನೆಪದಲ್ಲಿ ನನೆಗುದಿಗೆ ಬಿದ್ದಿದ್ದ ಪುರಸಭೆಯ ಮಾರುಕಟ್ಟೆ ಕಾಮಗಾರಿ ಮುಂದಿನ ಒಂದು ತಿಂಗಳಲ್ಲಿ ಪುನರ್‌ ಆರಂಭಗೊಳ್ಳಲಿದ್ದು, ಪುರಸಭೆ, ಅಂಗಡಿದಾರರು ಸಂತಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News