ರಿಕ್ಷಾ ಚಾಲಕನ ಮೃತ್ಯು ಪ್ರಕರಣ: ಕುಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆಯಾಗಬೇಕು: ಸ್ಥಳೀಯರ ಒತ್ತಾಯ

ಮುಲ್ಕಿ: ಮಂಜೇಶ್ವರದ ಕುಂಜೂರಿನಲ್ಲಿ ಕೊಲೆಗೀಡಾಗಿದ್ದ ಮುಲ್ಕಿ ಕೊಲ್ನಾಡು ನಿವಾಸಿ ಉಮ್ಮರ್ ಶರೀಫ್ ಅವರ ಮೃತದೇಹ ಶುಕ್ರವಾರ ರಾತ್ರಿ ಕೊಲ್ನಾಡಿನ ಅವರ ನಿವಾಸಕ್ಕೆ ತಲುಪಿತು.
ಕಣ್ಣೂರು ಪೆರಿಯಾರ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಸಂಜೆ 3ರ ಸುಮಾರಿಗೆ ಮರಣೋತ್ತರ ಪರೀಕ್ಷೆ ನಡೆಸಿ ರಾತ್ರಿ 7ರ ಸುಮಾರಿಗೆ ನಗರದ ಮಸ್ಜಿದುಲ್ ಇಹ್ ಸಾನ್ ಮಸೀದಿಗೆ ಕರೆತರಲಾಯಿತು. ಬಳಿಕ ಅಲ್ಲಿ ಜನಾಝ ಸ್ನಾನ ಮುಗಿಸಿ ರಾತ್ರಿ 10ಕ್ಕೆ ಮುಲ್ಕಿ ಕೊಲ್ನಾಡಿನ ಅವರ ನಿವಾಸಕ್ಕೆ ತರಲಾಯಿತು.
ಮೃತದೇಹವನ್ನು ನಿವಾಸದ ಬಳಿ ನೆರೆದಿದ್ದ ಸಾವಿರಾರು ಜನರ ದರ್ಶನಕ್ಕೆ ಇಡಲಾಯಿತು. ಬಳಿಕ ಕೊಲ್ನಾಡು ಶಾಪಿ ಜುಮಾ ಮಸೀದಿಯ ದಫನ ಭೂಮಿಯಲ್ಲಿ ದಫನ ಮಾಡಲಾಯಿತು.
"ಶರೀಫ್ ಅವರು ಎಲ್ಲರೊಂದಿಗೂ ಪ್ರೀತಿಯಿಂದಲೇ ಇದ್ದರು. ವೈರತ್ವ ಇಲ್ಲದವರು. ನಾವು ಹಲವರು ಅವರ ಪ್ರೀತಿಯಿಂದಾಗಿ ಅಷ್ಟು ದೂರದಿಂದ ಬಂದಿದ್ದೇವೆ. ಅವರ ಅಂತಿಮ ದರ್ಶನಕ್ಕೆ ಬರುವಂತೆ ಮಾಡಿದೆ. ಇಂತಹಾ ಕುಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆಯಾಗಬೇಕು. ಮುಂದೆ ಯಾವ ರಿಕ್ಷಾ ಚಾಲಕರಿಗೂ ಇಂತಹಾ ನೋವು ಬರಬಾರದು. ಅದಕ್ಕಾಗಿ ಪೊಲೀಸ್ ಇಲಾಖೆ ಮತ್ತು ಸರಕಾರ ಶೀಘ್ರ ಕ್ರಮ ವಹಿಸಬೇಕು".
- ಮಾಧವ ಮಂಗಳೂರು (ಜೊತೆಯಾಗಿ ರಿಕ್ಷಾ ಚಲಾಯಿಸುತ್ತಿದ್ದವರು)
"ಶರೀಫ್ ಅವರು ಒಳ್ಳೆಯ ಮನುಷ್ಯ, ನಾನು ಇಲ್ಲಿಗೆ ಬಂದು 20 ವರ್ಷವಾಯಿತು. ನಾವು ಒಂದೆ ಕುಟುಂಬದ ತರಹಾ ಇದ್ದೆವು. ಯಾವ ಹೊತ್ತಿಗೆ ಏನೇ ಸಮಸ್ಯೆಗಳಾದರೂ ತಕ್ಷಣ ಓಡಿ ಬಂದು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಅವರಿಗೆ ಇಂತಹಾ ಸಾವು ಬಂದಿರುವುದು ಅರಗಿಸಿಕೊಳ್ಳಲಾಗುತ್ತಿಲ್ಲ. ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆಯಾಗಬೇಕು".
- ಸುಲೋಚನಾ, ನೆರೆಹೊರೆಯ ಮಹಿಳೆ