ಬೆಲೆ ಏರಿಕೆ: ರಾಜ್ಯ, ಕೇಂದ್ರ ಸರಕಾರಗಳ ವಿರುದ್ಧ ಸಿಪಿಎಂ ಪ್ರತಿಭಟನೆ

ಮಂಗಳೂರು, ಎ.16: ಪೆಟ್ರೋಲ್, ಡೀಸೆಲ್, ಹಾಲು, ಆಹಾರ ಧಾನ್ಯ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ಏರಿಕೆ ವಿರುದ್ಧ ಸಿಪಿಎಂ ಪಕ್ಷದ ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಸಮಿತಿಗಳ ನೇತೃತ್ವದಲ್ಲಿ ಮಿನಿ ವಿಧಾನಸೌಧದ ಮುಂದೆ ಬುಧವಾರ ಪ್ರತಿಭಟನೆ ನಡೆಯಿತು.
ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮಾತನಾಡುತ್ತಾ ಕೇಂದ್ರದ ನರೇಂದ್ರ ಮೋದಿ ಸರಕಾರ ಅಚ್ಛೇ ದಿನ ತರುತ್ತೇವೆ ಭ್ರಮೆ ಹುಟ್ಟಿಸಿ ಮೂರನೇ ಅವಧಿಗೆ ಅಧಿಕಾರಕ್ಕೇರಿದರೂ ದೇಶದ ಆರ್ಥಿಕತೆಯನ್ನು ಸರಿಪಡಿಸಲು ಹೆಣಗಾಡುತ್ತಿದೆ. ಜನತೆಯ ಮೇಲೆ ಬೆಲೆ ಏರಿಕೆ ಮತ್ತು ತೆರಿಗೆಯ ಹೊರೆಯನ್ನು ಹಾಕಿದೆ. ಇದರ ಪರಿಣಾಮ ದೇಶದಲ್ಲಿ ಹಸಿವು ಮತ್ತು ನಿರುದ್ಯೋಗದ ಸಮಸ್ಯೆ ಗಂಭೀರ ಹಂತವನ್ನು ತಲುಪಿದೆ. ಉಪ್ಪಿನಿಂದ ಕರ್ಪೂರದವರೆಗೆ ಎಲ್ಲಾ ರೀತಿಯ ಬೆಲೆ ಏರಿಕೆಗಳು ಜನರ ಹಿಂಡಿ ಹಿಪ್ಪೆಮಾಡಿದಂತಾಗಿದೆ ಎಂದರು.
ಇನ್ನೊಂದೆಡೆ ರಾಜ್ಯದ ಕಾಂಗ್ರೆಸ್ ಸರಕಾರ ಒಂದು ಕೈಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಕೊಟ್ಟು ಮತ್ತೊಂದು ಕೈಯಿಂದ ಕಿತ್ತು ಕೊಳ್ಳುತ್ತಿದೆ. ಹಾಲು, ತರಕಾರಿ ಬೆಲೆಗಳು ಗಗನಕ್ಕೇರಿದೆ. ಮುದ್ರಾಂಕ ಶುಲ್ಕಗಳು ವಿಪರೀತ ಏರಿಕೆ ಮಾಡಿದೆ. ಬೆಲೆ ಏರಿಕೆಗೆ ಕಾರಣರಾಗಿರುವ ಬಿಜೆಪಿ, ಕಾಂಗ್ರೆಸ್ ಸರಕಾರಗಳು ಪರಸ್ಪರ ರಾಜಕೀಯ ಕೆಸೆರೆರೆಚಾಟದಲ್ಲಿ ತೊಡಗಿದೆಯೇ ಹೊರತು ಏರಿದ ಬೆಲೆ ಇಳಿಕೆ ಮಾಡಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿ.ಕೆ. ಇಮ್ತಿಯಾಝ್ ಆಪಾದಿಸಿದರು.
ಮಾಜಿ ಕಾಪೋರೇಟರ್ ದಯಾನಂದ ಶೆಟ್ಟಿ, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಶ್ರೀನಾಥ್ ಕುಲಾಲ್ ಮಾತನಾಡಿದರು.
ಪ್ರತಿಭಟನೆಯ ನೇತೃತ್ವವನ್ನು ಡಾ. ಕೃಷ್ಣಪ್ಪಕೊಂಚಾಡಿ, ರವಿಚಂದ್ರ ಕೊಂಚಾಡಿ, ದಿನೇಶ್ ಜಪ್ಪಿನಮೊಗರು, ಉದಯಚಂದ್ರ ರೈ, ಭಾರತಿ ಬೋಳಾರ, ಪಿ.ಜಿ. ರಫೀಕ್, ಲೋಕೇಶ್ ಎಂ, ದೀಪಕ್ ಬಜಾಲ್, ಜಯಲಕ್ಷ್ಮಿ ಜಪ್ಪಿನಮೊಗರು, ನಾಗೇಶ್ ಬೋಳಾರ, ಜಗದೀಶ್ ಬಜಾಲ್, ಅಶೋಕ್ ಶ್ರೀಯಾನ್, ಶಶಿಧರ ಶಕ್ತಿನಗರ, ಬಿ.ಕೆ. ಮಸೂದ್, ಆಶಾ ಬೋಳೂರು, ತಯ್ಯುಬ್ ಬೆಂಗ್ರೆ ವಹಿಸಿದ್ದರು.
ಸಿಪಿಎಂ ದಕ್ಷಿಣ ಸಮಿತಿ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಸ್ವಾಗತಿಸಿದರು. ಉತ್ತರ ಸಮಿತಿ ಕಾರ್ಯದರ್ಶಿ ಪ್ರಮೀಳಾ ಕೆ. ವಂದಿಸಿದರು.