ಯುನಿವೆಫ್ ಕರ್ನಾಟಕ - ಮುಸ್ಲಿಮ್ ಜಸ್ಟಿಸ್ ಫೋರಂ ನೇತೃತ್ವದಲ್ಲಿ ವಕ್ಫ್ ಕಾಯ್ದೆ ತಿದ್ದುಪಡಿ ವಿರುದ್ಧ ಪ್ರತಿಭಟನೆ

ಮಂಗಳೂರು: ಯುನಿವೆಫ್ ಕರ್ನಾಟಕ ಹಾಗೂ ಮುಸ್ಲಿಮ್ ಜಸ್ಟಿಸ್ ಫೋರಂ ಇವುಗಳ ಜಂಟಿ ಸಹಯೋಗ ದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ನಗರದ ಕ್ಲಾಕ್ ಟವರ್ ಬಳಿ ಶನಿವಾರ ಪ್ರತಿಭಟನೆ ನಡೆಯಿತು.
ವಕ್ಫ್ ತಿದ್ದುಪಡಿ ಕಾಯ್ದೆ 2025 ಮೂಲಕ ಸಂವಿಧಾನದ ಫೆಡರಲ್ ರಚನೆಯನ್ನು ಉಲ್ಲಂಘಿಸಿದಂತಾ ಗುತ್ತದೆ ಮತ್ತು ಸ್ಥಳೀಯ ಮುಸ್ಲಿಮ್ ಸಮುದಾಯವನ್ನು ಅವರ ಧಾರ್ಮಿಕ ದತ್ತಿಗಳ ನಿರ್ವಹಣೆಯಲ್ಲಿ ಅಧಿಕಾರಹೀನಗೊಳಿಸುತ್ತದೆ . ಶತಮಾನಗಳಷ್ಟು ಹಳೆಯದಾದ ದತ್ತಿ ,ಟ್ರಸ್ಟ್‌ಗಳನ್ನು ಅಪಾಯಕ್ಕೆ ಸಿಲುಕಿಸಿದಂತಾಗುತ್ತದೆ. ತಿದ್ದುಪಡಿಯಿಂದ ವಕ್ಫ್ ಭೂಮಿಯ ದುರುಪಯೋಗ ಸಾಧ್ಯತೆ ಇದೆ ಮತ್ತು ಅಲ್ಪ ಸಂಖ್ಯಾತರ ಹಕ್ಕುಗಳ ಉಲ್ಲಂಘನೆ ಮಾಡಿದಂತಾಗುತ್ತದೆ .ಆದುದರಿಂದ ವಕ್ಫ್ ತಿದ್ದುಪಡಿ ಮಸೂದೆ 2025ನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಬಳಿಕ ರಾಷ್ಟ್ರಪತಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು.
ಒಂದು ಇಂಚು ಭೂಮಿ ಕೊಡೊಲ್ಲ: ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫಿಉದ್ದೀನ್ ಕುದ್ರೋಳಿ ಅವರು ‘ ಮುಸ್ಲಿಂ ಸಮುದಾಯದವರು ಯಾವತ್ತೂ ಸೋಲು ಕಂಡವರಲ್ಲ. ಹೋರಾಟದಿಂದ ಹಿಂದೆ ಸರಿದವರಲ್ಲ. ದೇಶದಲ್ಲಿ 22 ಕೋಟಿ ಯಷ್ಟು ಮುಸ್ಲಿಮರು ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಇದ್ದಾರೆ. ಕೇವಲ ಬೆರಳೆಣಿಕೆಯವರು ಕೇಂದ್ರ ಸರಕಾರವನ್ನು ಬೆಂಬಲಿಸಿ ದ್ದಾರೆ. ವಕ್ಫ್ ಸೊತ್ತಿಗಾಗಿ ಹೋರಾಡುತ್ತೇವೆ. ಒಂದು ಇಂಚು ಭೂಮಿ ಬಿಟ್ಟು ಕೊಡಲು ನಾವು ಸಿದ್ದರಿಲ್ಲ ಎಂದು ಎಚ್ಚರಿಸಿದರು.
ಮಾಜಿ ಶಾಸಕ ಮೊಯ್ದಿನ್ ಬಾವ ಮಾತನಾಡಿ ವಕ್ಫ್ ತಿದ್ದುಪಡಿ ಕೇಂದ್ರ ಸರಕಾರವು ಒಂದು ಸಮುದಾಯದ ಮೇಲೆ ಮಾಡಿರುವ ಸವಾರಿ ಆಗಿದೆ. ಮುಸ್ಲಿಂ ಸಮುದಾಯದ ಹಿತಕ್ಕಾಗಿ ಇರುವ ಜಮೀನನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ. ಮುಸ್ಲಿಂ ಸಮುದಾಯಕ್ಕೆ ತೊಂದರೆಯಾಗುವ ಕೆಲಸ ಮಾಡಿಬೇಡಿ, ಆ ಕರಾಳ ಶಾಸನವನ್ನು ನಮ್ಮ ಮೇಲೆ ಹೇರಬೇಡಿ ಎಂದು ಮನವಿ ಮಾಡಿದರು.
ರಾಜ್ಯ ಯುವ ಕಾಂಗ್ರೆಸ್ ಪ್ರಧಾನಿ ಕಾರ್ಯದರ್ಶಿ ಸುಹೈಲ್ ಕಂದಕ್ ಕೇಂದ್ರ ಸರಕಾರ ತಂದಿರುವ ವಕ್ಫ್ ತಿದ್ದುಪಡಿ ಕರಾಳ ಮಾತ್ರವಲ್ಲ ಇತರ ಸಮುದಾಯಗಳ ನಡುವೆ ಬಿರುಕು ಉಂಟು ಮಾಡುವುದಾಗಿದೆ ಎಂದು ಅಭಿಪ್ರಾಯಪಟ್ಟರು.
ದ.ಕ. ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಹೈದರ್ ಪರ್ತಿಪ್ಪಾಡಿ ಮಾತನಾಡಿ ವಕ್ಫ್ ತಿದ್ದುಪಡಿ ವಿಚಾರದಲ್ಲಿ ನಮಗೆ ನ್ಯಾಯ ದೊರೆಯಬಹುದೆಂಬ ನಂಬಿಕೆ ಈ ದೇಶದ ಸುಪ್ರೀಂ ಕೋರ್ಟ್ ಮೇಲೆ ಇದೆ. ಅದು ಅಲ್ಲದಿದ್ದರೆ ದೇವರು ನಮಗೆ ನ್ಯಾಯ ಕೊಡುತ್ತಾರೆ. ವಕ್ಫ್ ಆಸ್ತಿ ಅಲ್ಲಾ ಹನ ಆಸ್ತಿ ಯಾಗಿದೆ ಎಂದರು.
ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಮಾತನಾಡಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಸ್ವಂತ ಬಲ ಇದೆ ಎಂಬ ಧೈರ್ಯದಲ್ಲಿ ದುರುದ್ದೇಶ ಇಟ್ಟು ಕೊಂಡು ವಕ್ಫ್ ಕಾಯ್ದೆಗೆ ತಿದ್ದುಪಡಿ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಮೇಯರ್ ಕೆ.ಅಶ್ರಫ್, ಎಸ್‌ಡಿಪಿಐ ಮಂಗಳೂರು ಗ್ರಾಮಿಣ ಅಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರ್, ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ವಿಭಾಗದ ಅಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.
ಯುನಿವೆಫ್ ಕಾರ್ಯದರ್ಶಿ ಯು.ಕೆ.ಖಾಲಿದ್ ಕಾರ್ಯಕ್ರಮ ನಿರೂಪಿಸಿದರು.