ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಘಟಕ ರಾಷ್ಟ್ರ ಮಟ್ಟದಲ್ಲಿ ಅಗ್ರಸ್ಥಾನ: ಪಿ.ಜಿ.ಆರ್. ಸಿಂಧಿಯಾ
ಮೂಡುಬಿದಿರೆ: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಘಟಕ ರಾಷ್ಟ್ರ ಮಟ್ಟದಲ್ಲಿ ಅಗ್ರಸ್ಥಾನ ಪಡೆದಿದೆ. ದಿಲ್ಲಿಯಲ್ಲಿ ನಡೆದ 74ನೆ ಅಧಿವೇಶನದಲ್ಲಿ ಘೋಷಣೆಯಾಗಿದೆ. 2023ನೆ ವರ್ಷದ ಮೆಸೆಂಜರ್ ಆಫ್ ಪೀಸ್ ಸ್ಟಾರ್ ರಾಷ್ಟ್ರಮಟ್ಟದ ಪ್ರಶಸ್ತಿಗೆ ಕರ್ನಾಟಕದ 8ಮಂದಿ ಆಯ್ಕೆಯಾಗಿದ್ದಾರೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ 3 ಪ್ರತಿನಿಧಿಗಳು ಆಯ್ಕೆಯಾಗಿದ್ದಾರೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ಪಿ.ಜಿ ಆರ್ ಸಿಂಧಿಯಾ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೋಶಾಧಿಕಾರಿ ನವೀನ ಚಂದ್ರ ಅಂಬೂರಿ, ರೋವರ್ ಸ್ಕೌಟ್ಸ್ ಲೀಡರ್ ಚಂದ್ರಾಕ್ಷ, ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಸೇರಿದಂತೆ ಮೂವರು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಯಾಗಿದ್ದಾರೆ ಎಂದವರು ತಿಳಿಸಿದ್ದಾರೆ.
ಸ್ಕೌಟ್ಸ್ ಮತ್ತು ಗೈಡ್ಸ್ ಎರಡೂ ವಿಭಾಗದಲ್ಲಿ ರಾಜ್ಯ ಘಟಕ ಎರಡನೇ ಪ್ರಶಸ್ತಿ ಪಡೆದಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೀ ಸ್ಕೌಟಿಂಗ್ ಘಟಕ ಆರಂಭಿಸಲಾಗುವುದು. ಇದರಿಂದಾಗಿ ಮುಂದಿನ ಹಂತದಲ್ಲಿ ಭಾರತದ ನೌಕಾದಳಕ್ಕೆ ಸೇರಲು ಈ ತರಬೇತಿ ಅನುಕೂಲವಾಗಲಿದೆ. ರೈಲ್ವೆ ನೇಮಕಾತಿಯಲ್ಲಿ ಶೇ 2 ಮೀಸಲಾತಿ ಸ್ಕೌಟ್ಸ್ ಮತ್ತು,ಗೈಡ್ಸ್ ಅಭ್ಯರ್ಥಿ ಗಳಿಗೆ ಕೃಪಾಂಕ ನೀಡಲಾಗುತ್ತದೆ ಇದನ್ನು ಹೆಚ್ಚಿಸಲು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಪಿ.ಜಿ.ಆರ್ .ಸಿಂಧಿಯ ತಿಳಿಸಿದ್ದಾರೆ.
ರಾಜ್ಯದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ 6.5ಲಕ್ಷ ಸದಸ್ಯರಿದ್ದಾರೆ. ಮೂಡುಬಿದಿರೆಯಲ್ಲಿ ಮೋಹನ್ ಆಳ್ವಾರ ನೇತೃತ್ವದಲ್ಲಿ ನಡೆದ ಜಾಂಬೂರಿ ಸಂಸ್ಥೆಯ ಚಟುವಟಿಕೆಗೆ ಹೊಸ ಆಯಾಮ ನೀಡಿದೆ ಎಂದವರು ತಿಳಿಸಿದ್ದಾರೆ.
ಪಿಲಿಕುಳದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಪರಿಷತ್ತಿನ 106ನೆ ಸಭೆ ನಡೆಯಲಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲೆಯ ಮುಖ್ಯ ಆಯುಕ್ತ ಡಾ. ಎಂ ಮೋಹನ್ ಆಳ್ವ ತಿಳಿಸಿದ್ದಾರೆ.
ಪಿಲಿಕುಳದಲ್ಲಿ ಸುಮಾರು 12ಕೋಟಿ ವೆಚ್ಚದಲ್ಲಿ ಸುಮಾರು 1000 ಮಂದಿಗೆ ತರಬೇತಿ ನೀಡಲು ಸಾಧ್ಯವಿರುವ Clothing ಮತ್ತು ಗೈಡ್ಸ್ ಸುಸಜ್ಜಿತ ತರಬೇತಿ ಕೇಂದ್ರ ಬಹುತೇಕ ಪೂರ್ಣ ಗೊಂಡಿದೆ. ಸ್ಕೌಟ್ಸ್ ಗೈಡ್ಸ್ ಸಂಸ್ಥೆಯಿಂದ 2 ಕೋಟಿ ಅನುದಾನ ಉಳಿದಂತೆ 25 ಲಕ್ಷ ರೂಪಾಯಿ ಸಾರ್ವಜನಿಕರಿಂದ ದೇಣಿಗೆ ದೊರೆತಿದೆ. ಎಂಆರ್ ಪಿಎಲ್ ,ಅದಾನಿ,ಇನ್ಫೋಸೀಸ್ ಸೇರಿದಂತೆ ಕೆಲವು ಸಂಸ್ಥೆಗಳಿಂದ ದೇಣಿಗೆ ನಿರೀಕ್ಷಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಕೌಟ್ಸ್ ಗೈಡ್ಸ್ ನಲ್ಲಿ 48,000 ಸದಸ್ಯರಿದ್ದಾರೆ. ಸದಸ್ಯರನ್ನು60,000 ಕ್ಕೆ ಏರಿಸುವ ಗುರಿ ಹೊಂದಲಾಗಿದೆ. 1450 ವಿದ್ಯಾರ್ಥಿಗಳು 120 ಶಿಕ್ಷಕರು ಸೇರಿದಂತೆ 1570 ಪ್ರತಿನಿಧಿಗಳ ರಾಜ್ಯ ಮಟ್ಟದ 5 ದಿನಗಳ ಸ್ಕೌಟ್ಸ್ ,ಗೈಡ್ಸ್ ಶಿಬಿರ ಮೂಡಬಿದಿರೆಯಲ್ಲಿ ನಡೆಯುತ್ತಿದೆ ಎಂದು ಮೋಹನ್ ಆಳ್ವ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲೆಯ ಮುಖ್ಯ ಆಯುಕ್ತ ಡಾ. ಎಂ ಮೋಹನ್ ಆಳ್ವ,ರಾಜ್ಯ ಕಾರ್ಯದರ್ಶಿ ಗಂಗಪ್ಪಗೌಡ,ಸಂಘಟನಾ ಆಯುಕ್ತ ಪ್ರಭಾಕರ್, ರೇಂಜರ್ಸ್ ಮುಖ್ಯಸ್ಥೆ ಮಲ್ಲೇಶ್ವರಿ,ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ,ದ.ಕ ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೋಶಾಧಿಕಾರಿ ನವೀನ್ ಚಂದ್ರ ಮೊದಲಾದವರು ಉಪಸ್ಥಿತರಿದ್ದರು.