ಉರ್ದು ಭಾಷೆಯ ಅಭಿವೃದ್ಧಿಗೆ ರಚನಾತ್ಮಕ ಯೋಜನೆ: ನಾಸಿರ್ ಸಯ್ಯದ್
ಮಂಗಳೂರು, ನ.24: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಉರ್ದು ಭಾಷೆಯು ತನ್ನದೇ ಆದ ಹಿರಿಮೆಗೆ ಪಾತ್ರವಾಗಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಉರ್ದು ಭಾಷೆಯು ಈ ಭಾಗದಲ್ಲಿ ಕ್ಷೀಣಿಸುತ್ತಾ ಬಂತು. ಈ ನಿಟ್ಟಿನಲ್ಲಿ ‘ಉರ್ದು ಮೆಹಫಿಲೇ ಮುಷಾಯಿರ’ದಂತಹ ಕಾರ್ಯಕ್ರಮದ ಮೂಲಕ ಉರ್ದು ಭಾಷೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಉರ್ದು ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ರಚನಾತ್ಮಕ ಯೋಜನೆ ರೂಪಿಸುವ ಅಗತ್ಯವಿದೆ ಎಂದು ದುಬೈನ ಪ್ರತಿಷ್ಠಿತ ಸಿಎಚ್‌ಎಸ್ ಗ್ರೂಪ್‌ನ ಸ್ಥಾಪಕ ಮತ್ತು ಅಧ್ಯಕ್ಷ, ಖ್ಯಾತ ಎನ್ನಾರೈ ಉದ್ಯಮಿ ನಾಸಿರ್ ಸಯ್ಯದ್ ಹೇಳಿದರು.
ದ.ಕ. ಮತ್ತು ಉಡುಪಿ ಜಿಲ್ಲೆಯ ಅಂಜುಮನ್ ತರಕ್ಕೀ ಉರ್ದು ಸಂಘಟನೆಯ ವತಿಯಿಂದ ನಗರದ ಪುರಭವನದಲ್ಲಿ ಶುಕ್ರವಾರ ಮುಸ್ಸಂಜೆ ನಡೆದ ‘ಉರ್ದು ಮೆಹಫಿಲೇ ಮುಷಾಯಿರ’ (ಉರ್ದು ಕಾವ್ಯ ಗೋಷ್ಠಿ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಉರ್ದು ಸುಂದರ ಭಾಷೆ. ಇದರ ಅಭಿವೃದ್ಧಿಗೊಳಿಸುವ ಸದುದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮವು ಆರಂಭ ಮಾತ್ರ. ಇನ್ಮುಂದೆ ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲು ನಾವೆಲ್ಲ ಶ್ರಮಿಸಬೇಕಿದೆ. ಇಂತಹ ಕಾರ್ಯಕ್ರಮಗಳಿಗೆ ತನ್ನ ಬೆಂಬಲ ಸದಾ ಇರಲಿದೆ ಎಂದು ನಾಸಿರ್ ಸಯ್ಯದ್ ಹೇಳಿದರು.
ಈ ಸಂದರ್ಭ ಕಾರ್ಯಕ್ರಮದ ಪ್ರಾಯೋಜಕರೂ ಆಗಿರುವ ನಾಸಿರ್ ಸಯ್ಯದ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ಕಾರ್ಕಳದ ಮೌಲಾನಾ ಆಝಾದ್ ಇಂಗ್ಲಿಷ್ ಮಾಧ್ಯಮ ಶಾಲೆಯ ಶಿಕ್ಷಕಿಯರಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಅನಿಸ್ ಮೊಯ್ದಿನ್ ಕಿರಾಅತ್ ಪಠಿಸಿದರು. ಹನೀಫ್ ಮಾಸ್ಟರ್ ಸ್ವಾಗತಿಸಿದರು. ಸಂಘಟನೆಯ ಅಧ್ಯಕ್ಷ ಅಬ್ದುಲ್ ಸಲಾಂ ಮದನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಹ್ಮತುಲ್ಲಾ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
ಉರ್ದು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಆಯೋಜಿಸಲಾದ ಈ ಕಾವ್ಯ ಗೋಷ್ಠಿಯಲ್ಲಿ ಖ್ಯಾತ ಉರ್ದು ಕವಿಗಳಾದ ಬೆಂಗಳೂರಿನ ಅಝೀಝುದ್ದೀನ್ ಅಝೀಝ್ ಬೆಳಗಾಮಿ, ಭಟ್ಕಳದ ಡಾ.ಮುಹಮ್ಮದ್ ಹನೀಫ್ ಶಬಾಬ್, ಮುಂಬೈನ ಸಿರಾಜ್ ಸೋಲಾಪುರಿ, ಭಟ್ಕಳದ ಸಯ್ಯಿದ್ ಅಹ್ಮದ್ ಸಾಲಿಕ್ ನದ್ವಿ, ಮಂಗಳೂರಿನ ಅಬ್ದುಲ್ ಸಲಾಂ ಮದನಿ, ಶಿವಮೊಗ್ಗದ ರಹ್ಮತ್ ಉಲ್ಹಾ ರಹ್ಮತ್, ಗಂಗೊಳ್ಳಿಯ ಉಸಾಮ ಖಾಝಿ ಅಸದ್ ಕರ್ನಾಟಕಿ ವಿಶಿಷ್ಟ ಶೈಲಿಯ ವಾಚನ-ಗಾಯನದಿಂದ ಪ್ರೇಕ್ಷಕರ ಮನರಂಜಿಸಿದರು. ಸೈಯದ್ ಝಹೀರ್ ಅಹ್ಮದ್ ಫನಾ ಕಾವ್ಯ ಗೋಷ್ಠಿಯನ್ನು ನಿರ್ವಹಿಸಿದರು.