ಕುಂಜತ್ತೂರಿನಲ್ಲಿ ಮುಲ್ಕಿಯ ರಿಕ್ಷಾ ಚಾಲಕನ ಶಂಕಾಸ್ಪದ ಮೃತ್ಯು: ಬಾವಿಯಿಂದ ಮೃತದೇಹ ಮೇಲಕ್ಕೆತ್ತಿದ ರಕ್ಷಣಾ ತಂಡ

ಮಂಗಳೂರು, ಎ.11: ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸಮೀಪದ ಕುಂಜತ್ತೂರು ಪದವು ಎಂಬಲ್ಲಿನ ನಿರ್ಜನ ಪ್ರದೇಶದ ಬಾವಿಯಲ್ಲಿ ಶಂಕಾಸ್ಪದವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಮುಲ್ಕಿ ಕೊಳ್ನಾಡಿನ ರಿಕ್ಷಾ ಚಾಲಕ ಮುಹಮ್ಮದ್ ಶರೀಫ್ (52) ಅವರ ಮೃತದೇಹವನ್ನು ಅಗ್ನಿಶಾಮಕ ದಳ ಹಾಗೂ ರಕ್ಷಣಾ ತಂಡ ಶುಕ್ರವಾರ ಬೆಳಗ್ಗೆ ಮೇಲಕ್ಕೆತ್ತಿದೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.
ಶುಕ್ರವಾರ ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಲಾಗಿದ್ದು, ಪೊಲೀಸರು ಮಹಜರು ನಡೆಸಿದ್ದಾರೆ. ದೇಹದಲ್ಲಿ ಹಲವಾರು ಇರಿತದ ಗಾಯಗಳು ಕಂಡು ಬಂದಿದ್ದು ಇದರಿಂದ ಕೊಲೆಗೈದು ಬಾವಿಗೆಸೆದಿರಬಹುದು ಎಂದು ಸಂಶಯ ಉಂಟುಮಾಡಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಶ್ವಾನ ದಳ , ಫಾರೆನ್ಸಿಕ್ ತಜ್ಞರು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹ ಮೇಲಕ್ಕೆತ್ತಿ ಮಹಜರು ನಡೆಸಿದರು .
ಮೃತರ ದೇಹದಲ್ಲಿ ಗಾಯದ ಗುರುತುಗಳು ಕಂಡುಬಂದಿರುವುದಾಗಿಯೂ ಅವರ ರಿಕ್ಷಾ ಹಾಗೂ ಮೃತದೇಹ ಪತ್ತೆಯಾದ ಬಾವಿಯ ಬಳಿ ರಕ್ತದ ಕಲೆಗಳು ಕಂಡು ಬಂದಿವೆ ಮೃತರ ಕುಟುಂಬಸ್ಥರು ತಿಳಿಸಿದ್ದಾರೆ.

ಬುಧವಾರದಿಂದ ನಾಪತ್ತೆಯಾಗಿದ್ದ ಮುಹಮ್ಮದ್ ಶರೀಫ್ (52) ಅವರ ಮೃತದೇಹವು ಗುರುವಾರ ಕುಂಜತ್ತೂರು ಪದವಿನ ನಿರ್ಜನ ಪ್ರದೇಶದ ಬಾವಿಯಲ್ಲಿ ಪತ್ತೆಯಾಗಿತ್ತು. ಅವರನ್ನು ಮಾದಕ ವ್ಯಸನಿಗಳು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.
ಶರೀಫ್ ತನ್ನ ರಿಕ್ಷಾವನ್ನು ಮಂಗಳೂರು ನಗರದ ಕೊಟ್ಟಾರ ಚೌಕಿಯಲ್ಲಿ ಪಾರ್ಕಿಂಗ್ ಮಾಡುತ್ತಿದ್ದು, ಬುಧವಾರ ಎಂದಿನಂತೆ ತನ್ನ ಮನೆಯಿಂದ ಕೊಟ್ಟಾರ ಚೌಕಿಗೆ ಬಂದಿದ್ದರು. ಆದರೆ ಅಂದು ರಾತ್ರಿಯಾದರೂ ಅವರು ಮನೆಗೆ ಹಿಂದಿರುಗದ ಕಾರಣ ಮತ್ತು ಮೊಬೈಲ್ ಫೋನ್ ಕೂಡ ಸಂಪರ್ಕಕ್ಕೆ ಸಿಗದ ಕಾರಣ ಮನೆ ಮಂದಿ ಆತಂಕಗೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ನಾಪತ್ತೆಯಾಗಿರುವ ಬಗ್ಗೆ ಸಂದೇಶ ರವಾನಿಸಲಾಗಿತ್ತು. ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದರು.
ಗುರುವಾರ ರಾತ್ರಿ ಶರೀಫ್ ರ ಮೃತದೇಹವು ಕರ್ನಾಟಕ- ಕೇರಳ ಗಡಿಭಾಗದ ಕುಂಜತ್ತೂರು ಪದವು ಎಂಬಲ್ಲಿನ ಬಾವಿಯಲ್ಲಿ ಪತ್ತೆಯಾಗಿತ್ತು.

ಗಾಂಜಾ ವ್ಯಸನಿಗಳು ಮುಹಮ್ಮದ್ ಶರೀಫ್ ರ ರಿಕ್ಷಾವನ್ನು ಬಾಡಿಗೆಗೆ ಗೊತ್ತು ಮಾಡಿಕೊಂಡು ಹೋಗಿ ಬಳಿಕ ಅದ್ಯಾವುದೋ ಕಾರಣಕ್ಕೆ ಅವರನ್ನು ಕೊಲೆಗೈದಿರಬಹುದು ಎಂದು ಮೃತರ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.