ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೊಳಿಸಲ್ಲ ಎಂದು ಮುಖ್ಯಮಂತ್ರಿಗಳು ಘೋಷಿಸಲಿ : ಹಾಜಿ ಅಬ್ದುಲ್ ರಶೀದ್

ಉಳ್ಳಾಲ : ಕೇಂದ್ರ ಸರ್ಕಾರ ಹಲವಾರು ಮುಸ್ಲಿಂ ವಿರೋಧಿ ಕಾಯಿದೆಗಳನ್ನು ಜಾರಿಗೆ ತಂದು ಮುಸ್ಲಿಮರ ಮನಸನ್ನು ಘಾಸಿಗೊಳಿಸುವ ಕೆಲಸ ನಡೆಸುತ್ತಿದೆ. ಇತ್ತೀಚೆಗೆ ವಕ್ಫ್ ತಿದ್ದುಪಡಿ ಮಸೂದೆ ಜಾರಿ ಮಾಡಿ ಕೇಂದ್ರ ಸರ್ಕಾರ ಮುಸ್ಲಿಮರ ಮನಸನ್ನು ಘಾಸಿಗೊಳಿಸಿ ಅಲ್ಪಸಂಖ್ಯಾತರ ಸೊತ್ತುಗಳನ್ನು ಕಬಳಿಸುವ ಕೆಲಸ ಮಾಡುತ್ತಿದೆ ಎಂದು ದರ್ಗಾ ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಹೇಳಿದರು.
ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಮರ ಸೊತ್ತುಗಳನ್ನು ಒಳಗೊಂಡಿರುವ ವಕ್ಫ್ ಮಂಡಳಿಗೆ ಮುಸ್ಲಿಮರನ್ನು ನೇಮಕ ಮಾಡುವ ಬದಲು ಮುಸ್ಲಿಮೇತರರನ್ನು ಸದಸ್ಯರನ್ನಾಗಿ ನೇಮಿಸಿ ಕಲಹ ಬರುವ ರೀತಿಯಲ್ಲಿ ಮಾಡಿ ಮುಸ್ಲಿಮರನ್ನು ಕಡೆಗಣಿಸಲಾಗುತ್ತಿದೆ. ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ವಿವಿಧೆಡೆ ಹೋರಾಟ ನಡೆಯುತ್ತಿದೆ. ಎ.18 ರಂದು ಶುಕ್ರವಾರ ಸಂಜೆ ಅಡ್ಯಾರ್ ಕಣ್ಣೂರು ಶಾ ಗಾರ್ಡನ್ ನಲ್ಲಿ ಬೃಹತ್ ಪ್ರತಿಭಟನಾ ಸಭೆಯು ಕರ್ನಾಟಕ ಉಲಮಾ ಒಕ್ಕೂಟದ ವತಿಯಿಂದ ನಡೆಯಲಿದೆ. ಇದರಲ್ಲಿ ಎಲ್ಲಾ ಮುಸ್ಲಿಂ ಸಮುದಾಯದ ಜನರು ಭಾಗವಹಿಸುವ ಮೂಲಕ ಕೇಂದ್ರ ಸರ್ಕಾರವನ್ನು ಎಚ್ಚರಗೊಳಿಸಬೇಕು ಎಂದು ಕರೆ ನೀಡಿದರು .
ವಕ್ಫ್ ಎನ್ನುವುದು ಪ್ರವಾದಿಯವರ ಕಾಲದಲ್ಲೇ ಇತ್ತು. ವಕ್ಫ್ ಸೊತ್ತುಗಳು ಸರ್ಕಾರದಲ್ಲ, ಅಲ್ಲಾಹನದ್ದಾಗಿದೆ. ಕರ್ನಾಟಕದಲ್ಲಿ ವಕ್ಫ್ ಸೊತ್ತುಗಳು ಬಹಳಷ್ಟಿವೆ. ಆದರೆ ಅದರ ಯಜಮಾನರು ಕಾಳಜಿ ವಹಿಸದ ಕಾರಣ ಪಾಳು ಭೂಮಿ ಆಗಿ ಬಿಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯ ಮಂತ್ರಿ ಸಿದ್ದರಾಮಯ್ಯ ವಕ್ಫ್ ತಿದ್ದುಪಡಿ ಕಾಯ್ದೆ ಸಂಬಂಧಿಸಿದಂತೆ ವಿರೋಧ ವ್ಯಕ್ತಪಡಿಸಿ ನಿರ್ಣಯ ಕೈಗೊಂಡರೆ ಸಾಕಾಗದು. ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಘೋಷಣೆ ಮಾಡಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ವಕ್ಫ್ ತಿದ್ದುಪಡಿ ಕಾಯ್ದೆ ತಿರಸ್ಕರಿಸುವುದಾಗಿ ಟಗರು ಧ್ವನಿಯಲ್ಲಿ ಘೋಷಣೆ ಮಾಡಬೇಕು ಎಂದು ತಿಳಿಸಿದರು.
ವಕ್ಫ್ ಆಸ್ತಿಯಾರಿಂದ ಕಸಿದಿರುವಂತಹದಲ್ಲ. ಇದು ಪೂರ್ವಜರು ಸಮುದಾಯದ ಅಭಿವೃದ್ಧಿಗಾಗಿ ನೀಡಿದ ಕೊಡುಗೆ. ಕಸಿದ ಆಸ್ತಿ ವಕ್ಫ್ ಆಗುವುದಿಲ್ಲ. ಇದಕ್ಕೆ ಇಸ್ಲಾಮಿನಲ್ಲಿ ಅವಕಾಶ ಇಲ್ಲ ಎಂದರು.
ಆರಂಭದಿಂದಲೂ ಮುಸ್ಲಿಂ ವಿರುದ್ಧ ಕಾನೂನು ಜಾರಿಗೆ ತರುವಲ್ಲಿ ಅತ್ಯುತ್ಸಾಹ ತೋರುತ್ತಾ ಬಂದಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎನ್ ಆರ್ ಸಿ, ಸಿಎಎ ಜಾರಿಗೆ ತರಲು ಮುಂದಾಗಿತ್ತು. ಬಳಿಕ ತ್ರಿಬಲ್ ತಲಾಕ್ ಕಾನೂನು ಜಾರಿ ಮಾಡಿತು. ಈಗ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದ್ದು, ಇದನ್ನು ಪ್ರತಿಯೊಬ್ಬ ನಾಗರಿಕನೂ ಕೂಡ ವಿರೋಧಿಸಬೇಕು ಎಂದು ಹೇಳಿದರು.
ಉಳ್ಳಾಲ ಉರೂಸ್ ಬಗ್ಗೆ ಪರ್ತಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಉಳ್ಳಾಲ ದರ್ಗಾ ಉರೂಸ್ ಎ.24 ರಿಂದ ಆರಂಭವಾಗಲಿದ್ದು. ಈ ಬಾರಿ ಮೂರು ವರ್ಷದಲ್ಲೇ ನಡೆಯುತ್ತಿದೆ. ಈಗಿನ ಆಡಳಿತ ಮಂಡಳಿ ಗೆ ವಕ್ಫ್ ನಿಯಮ ಪ್ರಕಾರ ಮೂರು ವರ್ಷಗಳ ಅಧಿಕಾರಾವಧಿ ಇದೆ. ಈ ಅವಧಿಯಲ್ಲಿ ಅವರು ಉತ್ಸಾಹ ದಿಂದ ಉರೂಸ್ ನಡೆಸಲು ಮುಂದಾಗಿದ್ದಾರೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಸುದ್ದಿಗೋಷ್ಠಿ ಯಲ್ಲಿ ದರ್ಗಾ ಮಾಜಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹ ಹಾಜಿ, ಸದಸ್ಯ ಫಾರೂಕ್ ಉಳ್ಳಾಲ್ ಉಪಸ್ಥಿತರಿದ್ದರು.