ಮುಸ್ಲಿಂ ಮಹಿಳೆಯರ ವಿರುದ್ಧ ಹೇಳಿಕೆ ನೀಡಿರುವ ಪ್ರಭಾಕರ ಭಟ್ ಬಂಧನಕ್ಕೆ ʼಮುಸ್ಲಿಂ ಸೆಂಟ್ರಲ್ ಕಮಿಟಿʼ ಆಗ್ರಹ
ಮಂಗಳೂರು: ಮುಸ್ಲಿಂ ಮಹಿಳೆಯರ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿರುವ ಪ್ರಭಾಕರ ಭಟ್ಟರನ್ನು ಈ ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ದ.ಕ ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ ಹಾಜ್ ಕೆ ಎಸ್ ಮುಹಮ್ಮದ್ ಮಸೂದ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀ ರಂಗ ಪಟ್ಟಣದ ನಿಮಿಷಾಂಬ ದೇಗುಲದ ಬಳಿಯಲ್ಲಿ ನಡೆದ ಹನುಮ ಮಾಲಾಧಾರಿಗಳ ಸಂಕೀರ್ತನೆ ಯಾತ್ರೆಗೂ ಮುನ್ನ ಹನುಮ ಮಾಲಾಧಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಲ್ಲಡ್ಕ ಪ್ರಭಾಕರ ಭಟ್, ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಾಶ್ವತವಾಗಿ ಗಂಡ ಇರಲಿಲ್ಲ. ತ್ರಿವಳಿ ತಲಾಖ್ ರದ್ದು ಪಡಿಸುವ ಮೂಲಕ ಅವರಿಗೆ ಪರ್ಮನೆಂಟ್ ಗಂಡ ಕೊಟ್ಟಿರುವುದು ಮೋದಿ. ಅದರ ಮೊದಲು ಅವರಿಗೆ ದಿನಕ್ಕೊಬ್ಬ ಗಂಡ ಇರುತ್ತಿದ್ದ ಎಂಬ ಮುಸ್ಲಿಂ ಮಹಿಳೆಯರ ವಿರುದ್ಧದ ಹೇಳಿಕೆಗೆ ಖಂಡನೀಯವಾಗಿದೆ.
ಈ ಹಿಂದೆ ಮಂಡ್ಯ ಕಾಲೇಜಿನ ವಿದ್ಯಾರ್ಥಿನಿ ಮುಸ್ಕಾನ್ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದು, ಹಿಂದುಗಳ ನಾಡಾದ ಈ ದೇಶದಲ್ಲಿ ರಾಮ ರಾಮ ಎಂದು ಹೇಳಬೇಕು. ಮುಸ್ಕಾನ್ ಗೆ ಅಲ್ ಖೈದಾ ಸಂಘಟನೆಯೊಡನೆ ಸಂಪರ್ಕವಿದೆ ಎಂದು ಹೇಳಿದ್ದನ್ನು ಸಾಕ್ಷಿ ಸಮೇತ ರುಜುವಾತು ಪಡಿಸಬೇಕು ಇಲ್ಲವಾದಲ್ಲಿ ಹೇಳಿಕೆಯನ್ನು ಹಿಂಪಡೆದು ಅವಳೊಡನೆ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ದ.ಕ ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಪದಾಧಿಕಾರಿಗಳ ಸಭೆಯಲ್ಲಿ ಆಗ್ರಹಿಸಲಾಯಿತು ಎಂದು ಪ್ರಕಟನೆ ತಿಳಿಸಿದೆ.