ಪೊಳಲಿ ಸೇತುವೆಯಲ್ಲಿ ವಾಹನ ಸಂಚಾರ ನಿರ್ಬಂಧ: ಸಾರ್ವಜನಿಕರಿಗೆ ತೊಂದರೆ

Update: 2024-08-18 14:19 GMT

ಮಂಗಳೂರು,ಆ.18: ಸುರತ್ಕಲ್-ಬಜ್ಪೆ-ಬಿ.ಸಿ.ರೋಡ್-ಕಬಕ ರಾಜ್ಯ ಹೆದ್ದಾರಿಯ ಅಡ್ಡೂರಿನ ಬಳಿಯ ಪೊಳಲಿ ಸೇತುವೆ ಯಲ್ಲಿ ಜಿಲ್ಲಾಧಿಕಾರಿಯ ಆದೇಶದಂತೆ ಘನ ವಾಹನಗಳ ಸಂಚಾರ ನಿಷೇಧಿಸಿದ ಕಾರಣ ಶಾಲಾ ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಇತರ ಪ್ರಯಾಣಿಕರು ನಾನಾ ರೀತಿಯ ತೊದರೆ ಅನುಭವಿಸುವಂತಾಗಿದೆ ಎಂಬ ದೂರು ಕೇಳಿ ಬಂದಿವೆ.

ಸುಮಾರು 50-60 ವರ್ಷ ಹಳೆಯದಾದ ಈ ಸೇತುವೆ ಶಿಥಿಲಗೊಂಡಿದೆ. ಜಿಲ್ಲಾ ಮಟ್ಟದ ತಜ್ಞರ ಸಮಿತಿ ನೀಡಿರುವ ವರದಿ ಯಂತೆ ಪೊಳಲಿಯಲ್ಲಿ ಹೊಸ ಸೇತುವೆ ನಿರ್ಮಿಸವ ಅನಿವಾರ್ಯತೆ ಇದೆ. ಈ ಮಧ್ಯೆ ಆ.19ರಂದು ಸೇತುವೆ ಪರಿಶೀಲನೆ ನಡೆಸಲಿರುವ ರಾಜ್ಯ ಮಟ್ಟದ ಉನ್ನತ ತಜ್ಞರ ಸಮಿತಿಯು ಅಡ್ಡೂರಿಗೆ ಭೇಟಿ ನೀಡಿ ಪರಿಶೀಲಿಸಲಿದೆ ಎಂದು ತಿಳಿದು ಬಂದಿದೆ.

ಪೊಳಲಿ ಸೇತುವೆಯ ಪಿಲ್ಲರ್‌ಗಳು ಹಲವು ವರ್ಷಗಳ ಬಾಳಿಕೆ ಬರುವಂತೆ ಕಂಡು ಬರುತ್ತಿವೆ. ಆದರೆ ಪಿಲ್ಲರ್‌ಗಳ ಮೇಲಿ ರುವ ಗರ್ಡರ್‌ಗಳು ಸಂಪೂರ್ಣ ಶಿಥಿಲಗೊಂಡಿವೆ. ಹಾಗಾಗಿ ತುಕ್ಕು ಹಿಡಿದಿರುವ ಗರ್ಡರ್‌ಗಳ ಬದಲಾವಣೆ ನಡೆಯಬೇಕೇ ಹೊರತು ಹೊಸ ಸೇತುವೆ ಅನಿವಾರ್ಯವಲ್ಲ. ಸೇತುವೆಯ ಪಿಲ್ಲರ್‌ಗಳು ಸಾಕಷ್ಟು ಶಕ್ತಿಶಾಲಿಯಾಗಿವೆ ಎಂದು ಅಡ್ಡೂರು ಮತ್ತು ಪೊಳಲಿಯ ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.

ಘನ ವಾಹನಗಳಲ್ಲಿ ಸರಕು ಸಾಗಾಟ: ಸೇತುವೆ ಶಿಥಿಲಗೊಳ್ಳಲು ಅವ್ಯಾಹತ ಮರಳುಗಾರಿಕೆ ಕಾರಣ ಎಂದು ಆರೋಪಿಸಿ ತ್ತಿರುವ ಸಾರ್ವಜನಿಕರು ಸೇತುವೆಯಲ್ಲಿ ಸುಮಾರು 2 ವರ್ಷದಿಂದ ಕೆಎನ್‌ಆರ್ ಸಂಸ್ಥೆಯ 10 ಚಕ್ರಗಳ ಲಾರಿಗಳಲ್ಲಿ ನಿರಂತರ 40-50 ಟನ್ ಸಾಮರ್ಥ್ಯದ ಸರಕು ಸಾಗಾಟ ಮಾಡುತ್ತಿದ್ದ ಹಾಗೂ 12 ಚಕ್ರದ ಲಾರಿಗಳಲ್ಲಿ 60 ಟನ್ ಕೆಂಪು ಮಣ್ಣು ಸಾಗಾಟ ಮಾಡುತ್ತಿದ್ದ ಬಗ್ಗೆ ಯಾರೂ ಧ್ವನಿ ಎತ್ತಿಲ್ಲ. ಈ ಬಗ್ಗೆ ಬಜ್ಪೆಪೊಲೀಸರಿಗೆ ದೂರು ನೀಡಿದ್ದರೂ ಕ್ರಮ ಕೈಗೊ ಳ್ಳದೆ ನಿರ್ಲಕ್ಷ್ಯ ವಹಿಸಲಾಗಿದೆ. ಸೇತುವೆ ಪಿಲ್ಲರ್‌ಗಳ ಪಕ್ಕದಲ್ಲೇ ತುಂಬೆಯಿಂದ ಎಂಆರ್‌ಪಿಎಲ್‌ಗೆ ನೀರು ಸರಬರಾಜು ಮಾಡುವ ಭಾರೀ ಗಾತ್ರದ ಪೈಪ್ ಅಳವಡಿಸಲಾಗಿದೆ. ಇದರಿಂದ ಸೇತುವೆಗೆ ಹಾನಿ ಉಂಟಾಗಿದೆ ಎಂದು ಅಡ್ಡೂರು ಮತ್ತು ಪೊಳಲಿ ಭಾಗದ ನಾಗರಿಕರು ದೂರಿದ್ದಾರೆ.

*ಪೊಳಲಿ ಸೇತುವೆಯ ಎರಡೂ ಕಡೆ 2.75 ಮೀಟರ್ ಎತ್ತರದ ಕಮಾನ್ ಅಳವಡಿಸಲಾಗಿದೆ. ಘನ ವಾಹನಗಳ ಹೊರತುಪಡಿಸಿ ಲಘು ವಾಹನಗಳು ಸೇತುವೆ ಮೇಲೆ ಸಂಚರಿಸಲು ಅವಕಾಶವಿದೆ. ಪೊಳಲಿ ದ್ವಾರದ ಮೂಲಕ ಅಡ್ಡೂರಿಗೆ ಬರುವ ಬಸ್‌ಗಳು ಪ್ರಯಾಣಿಕರನ್ನು ಇಳಿಸುತ್ತದೆ. ಅಲ್ಲಿಂದ ಪ್ರಯಾಣಿಕರು ಸೇತುವೆಯಲ್ಲಿ ನಡೆದುಕೊಂಡು ಪೊಳಲಿಯತ್ತ ಸಾಗಬೇಕು. ಪೊಳಲಿ ದ್ವಾರದತ್ತ ಬಸ್‌ಗಳಲ್ಲಿ ಪ್ರಯಾಣಿಸುವವರೂ ಕೂಡ ಈ ಕಷ್ಟ ಅನುಭವಿಸಬೇಕು. ಇದರಿಂದ ವಿದ್ಯಾರ್ಥಿ ಗಳಿಗೆ ಸಾಕಷ್ಟು ತೊಂದರೆಯಾಗಲಿದೆ. ಎರಡೆರಡು ಟಿಕೆಟ್ ಪಡೆಯಬೇಕಾಗುತ್ತದೆ. ಈ ವ್ಯವಸ್ಥೆ ಎಷ್ಟು ಸಮಯ ಮುಂದುವರಿಯಲಿದೆ ಎಂಬುದು ಗೊತ್ತಿಲ್ಲ.ಆದರೆ ಜಿಲ್ಲಾಡಳಿತ ಈಗ ತೆಗೆದುಕೊಂಡಿರುವ ನಿರ್ಧಾರ ಗಮನಿಸಿದಾಗ ಈ ವ್ಯವಸ್ಥೆ ಸುಮಾರು ಐದಾರು ವರ್ಷ ಮುಂದುವರಿಯುವ ಲಕ್ಷಣ ಕಂಡು ಬರುತ್ತಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.




 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News