ವಿಟ್ಲ | ಭಾರೀ ಸ್ಫೋಟದ ಶಬ್ದ; ಬೆಚ್ಚಿಬಿದ್ದ ಜನತೆ

Update: 2025-03-04 16:24 IST
ವಿಟ್ಲ | ಭಾರೀ ಸ್ಫೋಟದ ಶಬ್ದ; ಬೆಚ್ಚಿಬಿದ್ದ ಜನತೆ
  • whatsapp icon

ವಿಟ್ಲ: ಮಂಗಳವಾರ ಮಧ್ಯಾಹ್ನದ ವೇಳೆಗೆ ವಿಟ್ಲ ಸುತ್ತಮುತ್ತಲಿನಲ್ಲಿ ಭಾರೀ ಪ್ರಮಾಣದ ಸದ್ದು ಕೇಳಿಬಂದಿತ್ತು. ಇದರಿಂದ ಜನರು ಆತಂಕಕ್ಕೆ ಒಳಗಾದ ಘಟನೆ ನಡೆದಿದೆ.

ಭೂಕಂಪನ ಸಂಭವಿಸಿದೆ ಎಂದೇ ಆ ಪ್ರದೇಶದ ಜನರು ಭಾವಿಸಿದ್ದರು. ಬಳಿಕ ವಿಟ್ಲಮುಡ್ನೂರು ಗ್ರಾಮದ ಮಾಡತ್ತಡ್ಕದ ಕ್ವಾರಿಯಲ್ಲಿ ಶೇಖರಿಸಿದ್ದ ಸ್ಫೋಟಕ ವಸ್ತುಗಳು ಸ್ಫೋಟಗೊಂಡಿರುವುದು ಬೆಳಕಿಗೆ ಬಂದಿದೆ.

ವಿಟ್ಲ ಮುಡ್ನೂರು ಗ್ರಾಮದ ಮಾಡತ್ತಡ್ಕ ಎಂಬಲ್ಲಿರುವ ಎನ್ ಎಸ್ ಕ್ವಾರೆಯಲ್ಲಿ ಕಲ್ಲು ಒಡೆಯುವುದಕ್ಕಾಗಿ ತಂದ ಸ್ಪೋಟಕಗಳು ಬಿಸಿಲಿನ ತೀವ್ರತೆಗೆ ಏಕಾಏಕಿ ಸ್ಪೋಟಗೊಂಡಿದೆ.

ಈ ಘಟನೆ ವಿಟ್ಲ ಪೇಟೆ ಸೇರಿ ಆಸುಪಾಸಿನ ಜನರನ್ನು ಬೆಚ್ಚಿಬೀಳಿಸಿದೆ. ಸುಮಾರು 4 ಕಿ.ಮೀ. ವ್ಯಾಪ್ತಿಯ ಮನೆಗಳಿಗೆ ಹಾನಿಯಾಗಿದ್ದು, ನೂರು ಮೀಟರು ದೂರದಲ್ಲಿರುವ ಎರಡು ಮನೆಗಳ ಛಾವಣಿ, ಕಿಟಕಿ ಸೇರಿ ಹಲವು ವಸ್ತುಗಳು ಜಖಂಗೊಂಡಿದೆ.

ಸಮೀಪದಲ್ಲೇ ಘಟನೆ ನಡೆದಿದ್ದು, ಕಲ್ಲಿನ ರಾಶಿಯ ನಡುವಿನಲ್ಲಿ ಒಂದು ಬಾಕ್ಸ್ ಡೆಟೋನೇಟರ್ಸ್ ಹಾಗೂ 200 ಜೆಲಿಟಿನ್ ಕಡ್ಡಿಗಳನ್ನು ಒಟ್ಟಿಗೇ ಇಡಲಾಗಿತ್ತೆನ್ನಲಾಗಿದೆ. ಸುಮಾರ್ 1:30ರ ಸುಮಾರಿಗೆ ಏಕಾಏಕಿ ಸ್ಪೋಟಗೊಂಡಿದೆ. ಸ್ಪೋಟ ನಡೆದ ಸ್ಥಳದಿಂದ ಸುಮಾರು ನೂರು ಮೀಟರ್ ದೂರದಲ್ಲಿದ್ದ ಈಶ್ವರ ನಾಯ್ಕ ಹಾಗೂ ಅವರ ಪುತ್ರ ವಸಂತ ಮೋಹನ್ ಅವರಿಗೆ ಸೇರಿದ ಮನೆಗಳಿಗೆ ಹಾನಿಯಾಗಿದೆ. 1ಕಿ. ಮೀ. ಆಸುಪಾಸಿನ ಸುಮಾರು 15ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ.

ಮನೆಗಳಲ್ಲಿನ ವಸ್ತುಗಳು ಎಲ್ಲೆಂದರಲ್ಲಿ ಬಿದ್ದು, ಹೆಂಚಿನ ಚಾವಣಿಯ ಕಟ್ಟಡಗಳಲ್ಲಿ ಹೆಂಚು ಸ್ಥಾನಪಲ್ಲಟವಾಗಿದೆ. ಕಿಟಕಿಯ ಗಾಜು ಪುಡಿಯಾಗಿದ್ದು, ಛಾವಣಿಗೆ ಹಾಸಿದ ಸಿಮೆಂಟ್ ಶೀಟ್ ಚೆಲ್ಲಾಪಿಲ್ಲಿಯಾಗಿದೆ. ಸೀಲಿಂಗ್ ಗೆ ಹಾಸು ತುಂಡಾಗಿ ಕೇಳಗೆ ಬಿದ್ದಿದೆ. ಕೆಲವು ಮನೆಯ ಟಿವಿ ಕೆಲಸ ಮಾಡುತ್ತಿಲ್ಲ. ಮನೆಗಳ ಕಿಟಕಿ ಪ್ರೇಮ್ ತುಂಡಾಗಿ ಬಿದ್ದಿದೆ. ವಿಟ್ಲ ಪೇಟೆಯ ಹಲವು ಕಡೆಯಲ್ಲಿ ವಸ್ತುಗಳು ಕಪಾಟುಗಳಿಂದ ನೆಲಕ್ಕುರುಳಿದೆ. ಮನೆಯ ಪಿಲ್ಲರ್ ಗಳು ಬಿರುಕು ಬಿಟ್ಟಿದೆ.

ಕೋರೆ ಸಮೀಪದ ನಿರ್ಜನ ಪ್ರದೇಶದಲ್ಲಿ ಕಲ್ಲಿನ ರಾಶಿಯಿದ್ದು, ಇದರ ತಪ್ಪಲು ಪ್ರದೇಶದಲ್ಲಿ ಯಾರಿಗೂ ಕಾಣದ ರೀತಿಯಲ್ಲಿ ದಾಸ್ತಾನು ಇರಿಸಲಾಗಿದ್ದು, ಇದರ ಸ್ಪೋಟಕ್ಕೆ ಅಕ್ಕಪಕ್ಕದ ಬಯಲು ಪ್ರದೇಶದಲ್ಲಿದ್ದ ಮುಳಿ ಹುಲ್ಲು ಬೆಂಕಿಗೆ ಆಹುತಿಯಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸ್ ಅಧೀಕ್ಷಕ ಯತೀಶ್ ಎನ್., ಬಂಟ್ವಾಳ ತಹಸೀಲ್ದಾರ್ ಅರ್ಚನಾ ಭಟ್, ಕಂದಾಯ ನಿರೀಕ್ಷಕ ರವಿ ಎಂ.ಎನ್., ಸಹಾಯಕ ಗಿರೀಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಜಯ ಕೆ., ಗಣಿ ಇಲಾಖೆಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಮನೆಯಿಂದ 20 ಮೀಟರ್ ನಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ. ಹಲವು ಬಾರಿ ದೂರು ನೀಡಿದರೂ, ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ . ದೂರು ನೀಡಿದರೆ ನಮಗೆ ಸೇರಿದ್ದಲ್ಲ ಎಂದು ಪೊಲೀಸರು ಜಾರಿಕೊಳ್ಳುತ್ತಾರೆ ಎಂದು ಸ್ಥಳೀಯರು ಆರೋಪಿಸಿದರು.

ಈ ಸಂದರ್ಭ ಪೊಲೀಸ್ ಅಧೀಕ್ಷಕ ಯತೀಶ್ ಅವರು 20 ಮೀಟರ್ ದೂರದಲ್ಲಿರುವ ಗಣಿಯ ಮಾಹಿತಿಯನ್ನು ಪಡೆದುಕೊಂಡು ವರದಿಯನ್ನು ನೀಡಿ ಎಂದು ವಿಟ್ಲ ಪೊಲೀಸ್ ನಿರೀಕ್ಷಕರಿಗೆ ಆದೇಶಿದ್ದಾರೆ. ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಅಗತ್ಯ ಕ್ರಮಕ್ಕೆ ಶಿಫಾರಸು ಮಾಡುತ್ತೇವೆ ಎಂದರು.

ಕ್ವಾರಿಯಲ್ಲಿ ಕಲ್ಲು ಸ್ಪೋಟಿಸುವುದಕ್ಕೆ ತಂದಿದ್ದ ಸ್ಪೋಟಕಗಳನ್ನು ಇಟ್ಟು ಊಟಕ್ಕೆ ತೆರಳಿದ ಸಂದರ್ಭದಲ್ಲಿ ಬಿಸಿಲಿನ ತೀವ್ರತೆಗೆ ಸ್ಪೋಟಗೊಂಡಿದೆ. ಅಕ್ಕಮಕ್ಕದ ಮನೆಗಳಿಗೆ ಹಾನಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಪೋಟಗಳನ್ನು ತಂದು ಬೇಜವಾಬ್ದಾರಿ ತನದಿಂದ ಇಟ್ಟು ಹೋದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರಗಿಸುತ್ತೇವೆ ಎಂದು ಜಿಲ್ಲಾ ಎಸ್ಪಿ ಯತೀಶ್ ಎನ್ ತಿಳಿಸಿದ್ದಾರೆ.

ಈ ಘಟನೆಯ ತೀವ್ರತೆ ವಿಟ್ಲ ಪೇಟೆ, ಕೊಳಂಬೆ, ಕಂಬಳಬೆಟ್ಟು, ಚಂದಳಿಕೆ, ಮೊದಲಾದ ವ್ಯಾಪ್ತಿಯ ವರೆಗೆ ಭೂಮಿ ಕಂಪಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News