ದೆಹಲಿ ಸಾರಿಗೆ ನಿಗಮದ ನಷ್ಟ 60 ಸಾವಿರ ಕೋಟಿಗೆ ಏರಿಕೆ: ಸಿಎಜಿ ವರದಿ

Update: 2025-02-25 08:29 IST
ದೆಹಲಿ ಸಾರಿಗೆ ನಿಗಮದ ನಷ್ಟ 60 ಸಾವಿರ ಕೋಟಿಗೆ ಏರಿಕೆ: ಸಿಎಜಿ ವರದಿ

PC: PTI

  • whatsapp icon

ಹೊಸದಿಲ್ಲಿ: ದೆಹಲಿ ಸಾರಿಗೆ ನಿಗಮದ ಕ್ರೋಢೀಕೃತ ಸಾಲ ಕಳೆದ ಆರು ವರ್ಷಗಳಲ್ಲಿ 25,300 ಕೋಟಿ ರೂಪಾಯಿಯಿಂದ 60,750 ಕೋಟಿಗೆ ಹೆಚ್ಚಿರುವುದನ್ನು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿ ಬಹಿರಂಗಪಡಿಸಿದೆ. ಶೇಕಡ 45ರಷ್ಟು ಬಸ್ಸುಗಳು ಹಳೆಯದಾಗಿದ್ದು, ಹಾಳಾಗುವ ಸಂದರ್ಭಗಳು ಅತ್ಯಧಿಕವಾಗಿದ್ದರಿಂದ ಸಾರಿಗೆ ವ್ಯವಸ್ಥೆ ಸಮರ್ಪಕ ಬಳಕೆ ಸಾಧ್ಯವಾಗದಿರುವುದು ಮುಖ್ಯ ಕಾರಣ ಎಂದು ಅಭಿಪ್ರಾಯಪಟ್ಟಿದೆ.

ಬಿಜೆಪಿ ಸರ್ಕಾರ ಮಂಗಳವಾರ ವಿಧಾನಸಭೆಯಲ್ಲಿ ಈ ವರದಿಯನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ. ನಿಗಮ ತನ್ನ ವಾಹನಗಳನ್ನು ಸಮರ್ಪಕವಾಗಿ ಬಳಸಲು ವಿಫಲವಾಗಿರುವುದು ಸೇರಿದಂತೆ ಪರಿಶೋಧಕರು ಹಲವು ಲೋಪಗಳನ್ನು ಗಮನಿಸಿದ್ದಾರೆ. ಆಪ್ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಲು ನಿರಾಕರಿಸಿದ ಹದಿನಾಲ್ಕು ವರದಿಗಳ ಪೈಕಿ ಇದೂ ಒಂದು.

ದೆಹಲಿ ಸಾರಿಗೆ ನಿಗಮ 2009ರಿಂದಲೂ ನಷ್ಟದಲ್ಲಿದ್ದು, ಹಲವು ಬಾರಿ ಮನವಿ ಮಾಡಿಕೊಂಡರೂ ಈ ಬಗ್ಗೆ ಗಮನ ಹರಿಸಲು ದೆಹಲಿ ಸರ್ಕಾರ ನಿರಾಕರಿಸಿತ್ತು. ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿದ ಬಳಿಕ ಸಾರಿಗೆ ಸಂಸ್ಥೆಯ ಮೇಲಿನ ಹೊರೆ ಮತ್ತಷ್ಟು ಹೆಚ್ಚಳವಾಗಿದೆ. ಯಾವುದೇ ವ್ಯವಹಾರ ಯೋಜನೆ ಇಲ್ಲದಿರುವುದು ಹಾಗೂ ಸೋರಿಕೆ ತಡೆಗೆ ಯಾವುದೇ ಮಾರ್ಗಸೂಚಿ ಇಲ್ಲದಿರುವುದು ನಷ್ಟ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ಸಿಎಜಿ ವರದಿ ವಿಶ್ಲೇಷಿಸಿದೆ.

ಅಸ್ಥಿಪಂಜರದಂತಿರುವ ದೆಹಲಿ ಬಸ್ಸುಗಳು ಸಾಮಾನ್ಯವಾಗಿ ದಾರಿಮಧ್ಯದಲ್ಲಿ ಹಾಳಾಗುವುದು ಪ್ರಯಾಣಿಕರಿಗೆ ಪ್ರತಿದಿನದ ಅನುಭವವಾಗಿದೆ. ಸಾರಿಗೆ ನಿಗಮದ ವಾಹನಗಳ ಸಂಖ್ಯೆಯನ್ನು 10000ಕ್ಕೆ ಹೆಚ್ಚಿಸುವುದಾಗಿ 2015ರಲ್ಲಿ ಭರವಸೆ ನೀಡಿದ್ದ ಅರವಿಂದ್ ಕೇಜ್ರಿವಾಲ್ ಅವರನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಟೀಕಿಸುತ್ತಲೇ ಬಂದಿದ್ದವು.

ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್‌ ಮಾಡಿ ►https://whatsapp.com/channel/0029VaA8ju86LwHn9OQpEq28

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News