ಹುಬ್ಬಳ್ಳಿ | ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಬ್ಯಾನರ್‌ ಹಾಕಿ ಸ್ವಾಗತಿಸಿದ ಬೆಂಬಲಿಗರು

Update: 2025-02-02 18:17 IST
ಹುಬ್ಬಳ್ಳಿ | ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಬ್ಯಾನರ್‌ ಹಾಕಿ ಸ್ವಾಗತಿಸಿದ ಬೆಂಬಲಿಗರು
  • whatsapp icon

ಹುಬ್ಬಳ್ಳಿ : ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಆರೋಪಿಗಳಾದ ಅಮಿತ್ ಬದ್ಧಿ ಮತ್ತು ಗಣೇಶ್‌ ಮಿಸ್ಕಿನ್ ಗೆ ಬ್ಯಾನರ್ ಹಾಕಿ ಸ್ವಾಗತಿಸಿದ ಘಟನೆ ಹುಬ್ಬ‍ಳ್ಳಿಯಲ್ಲಿ ನಡೆದಿದೆ.

ಈ ಹಿನ್ನಲೆಯಲ್ಲಿ ನಗರದ ಕೆಲವೆಡೆ ಸ್ವಾಗತ ಕೋರಿ ಆರೋಪಿಗಳ ಬೆಂಬಲಿಗರು ಬ್ಯಾನರ್ ಹಾಕಿದ್ದು, 7 ವರ್ಷಗಳ ನಂತರ ಬಿಡುಗಡೆಗೊಂಡ ಹಿಂದೂ ಹುಲಿಗಳು ಎಂದು ಬ್ಯಾನರ್‌ನಲ್ಲಿ ಉಲ್ಲೇಖಿಸಿದ್ದಾರೆ

ಹುಬ್ಬಳ್ಳಿಯ ಇಬ್ಬರು ಆರೋಪಿಗಳು ಜಾಮೀನಿನ ಮೇಲೆ ಹೊರಬಂದು ತವರಿಗೆ ಆಗಮಿಸಿದ್ದಾರೆ. ಈ ವೇಳೆ ಆರೋಪಿಗಳ ಬೆಂಬಲಿಗರು ಇಬ್ಬರನ್ನೂ ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ. ಕುಂಬಳಕಾಯಿ ಒಡೆದು, ಮೆರವಣಿಗೆ ಮೂಲಕ ಸ್ವಾಗತ ಕೋರಿದ್ದಾರೆ.

ಇದೇ ವೇಳೆ ನಗರದ ತುಳುಜಾ ಭವಾನಿ ಮಂದಿರದ ಬಳಿಯೂ ಹತ್ಯೆ ಆರೋಪಿಗಳನ್ನು ಸ್ವಾಗತಿಸಿ ಬ್ಯಾನರ್ ಹಾಕಲಾಗಿತ್ತು, ಆದರೆ ಇದನ್ನು ದೇವಸ್ಥಾನದ ಆಡಳಿತ ಮಂಡಳಿಯವರು ತೆಗೆದು ಹಾಕಿದ್ದಾರೆ.

ಹತ್ಯೆ ಆರೋಪಿಗಳಿಗೆ ವಿಜಯಪುರದಲ್ಲೂ ನಡೆದಿತ್ತು ಸನ್ಮಾನ :

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ವಿಜಯಪುರದ ಇಬ್ಬರು ಆರೋಪಿಗಳು ಜಾಮೀನಿನ ಮೇಲೆ ಹೊರಬಂದು ತವರಿಗೆ ಆಗಮಿಸಿದ್ದಾಗ ಸಂಘಪರಿವಾರದ ಕಾರ್ಯಕರ್ತರು ಅವರಿಬ್ಬರನ್ನೂ ಸನ್ಮಾನಿಸಿ ಅದ್ದೂರಿ ಸ್ವಾಗತವನ್ನು ನೀಡಿದ್ದರು. ಹತ್ಯೆ ಆರೋಪಿಗಳಾದ ಪರಶುರಾಮ ವಾಗ್ಮೋರೆ ಹಾಗೂ ಮನೋಹರ್ ಯಡವೆಗೆ ವಿಜಯಪುರ ಜಿಲ್ಲೆಯ ಸಂಘಪರಿವಾರ ಹಾಗೂ ಶ್ರೀರಾಮ ಸೇನೆಯ ಮುಖಂಡರು, ಕಾರ್ಯಕರ್ತರು ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಿದ್ದರು. ಇದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಕಾರಣವಾಗಿತ್ತು.

ಏನಿದು ಪ್ರಕರಣ :

2017ರ ಸಪ್ಟೆಂಬರ್ 5 ರಂದು ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಬಳಿಕ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡ(ಎಸ್‌ಐಟಿ) ಒಟ್ಟು 25 ಜನ ಆರೋಪಿಗಳನ್ನು ಬಂಧಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News