ಧಾರವಾಡದಲ್ಲಿ ಪ್ರಹ್ಲಾದ್ ಜೋಶಿ ಬದಲಾಯಿಸಬೇಕೆಂಬ ನಿಲುವಿನಿಂದ ಪ್ರಾಣ ಹೋದರೂ ಹಿಂದೆ ಸರಿಯೊಲ್ಲ: ದಿಂಗಾಲೇಶ್ವರ ಸ್ವಾಮೀಜಿ

Update: 2024-03-31 08:43 GMT

ಹುಬ್ಬಳ್ಳಿ, ಮಾ.31: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ದಮನಕಾರಿ ನೀತಿಯಿಂದ ಕ್ಷೇತ್ರದ ಹಲವು ಸಮುದಾಯಗಳು ನೊಂದಿವೆ. ನೊಂದವರಿಗೆ ನ್ಯಾಯ ಕೊಡಿಸಬೇಕಿದೆ. ಆದ್ದರಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಜೋಶಿಯವರನ್ನು ಬದಲಾಯಿಸಬೇಕೆಂಬ ನಿಲುವಿನಿಂದ ಮಾನ, ಪ್ರಾಣ ಹೋದರೂ ಹಿಂದೆ ಸರಿಯುವುದಿಲ್ಲ. ಜೋಶಿಯನ್ನು ಸೋಲಿಸುವುದು ಅನಿವಾರ್ಯವಾಗಿದೆ ಎಂದು ಶಿರಹಟ್ಟಿ ಭಾವೈಕ್ಯ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಜೋಶಿ ಅನಿವಾರ್ಯವಾದರೆ, ನಮಗೆ ಜನರ ಹಿತ, ನೆಮ್ಮದಿ ಅನಿವಾರ್ಯ. ಇದಕ್ಕಾಗಿ ಹೋರಾಟವೂ ಅನಿವಾರ್ಯವಾಗಿದೆ. ನನ್ನ ಜೀವ ಇರುವವರೆಗೆ ಈ ಹೋರಾಟ ಮುಂದುವರಿಯಲಿದೆ. ಮುಂದಿಟ್ಟ ಹೆಜ್ಜೆ ಹಿಂದೆ ಇಡಲ್ಲ. ಆಮಿಷ, ಬೆದರಿಕೆಗೆ ಬಗ್ಗುವ ಮನಸ್ಥಿತಿಯ, ಪರಿಸ್ಥಿತಿಯ ಸ್ವಾಮಿ ನಾನಲ್ಲ ಎಂದರು.

ಅಭ್ಯರ್ಥಿ ಬದಲಾವಣೆಗೆ ಮಾರ್ಚ್ 31ರವರೆಗೆ ಗಡುವು ವಿಧಿಸಿದ್ದೆವು. ಆದರೆ ಬಿಜೆಪಿ ಈ ಬಗ್ಗೆ ಕ್ರಮ ವಹಿಸದ ಕಾರಣ ಎಪ್ರಿಲ್ 2ರಂದು ಬೆಳಗ್ಗೆ 10:30ಕ್ಕೆ ಧಾರವಾಡದಲ್ಲಿ ಲೋಕಸಭಾ ಕ್ಷೇತ್ರದ ಭಕ್ತರ ಸಭೆ ನಡೆಸಿ, ಮುಂದಿನ ನಿರ್ಧಾರ ಪ್ರಕಟಿಸಲಾಗುವುದು ಎಂದರು.

ಚುನಾವಣೆಗೆ ಸ್ಪರ್ಧಿಸುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ನೊಂದವರಿಗೆ ಸಾಂತ್ವನ ನೀಡುವುದು ನಮ್ಮ ಉದ್ದೇಶ. ಚುನಾವಣೆಗೆ ಸ್ಪರ್ಧಿಸುವ, ಬೇರೊಬ್ಬರನ್ನು ಸ್ಪರ್ಧಿಸುವಂತೆ ಮಾಡುವ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯ ಹಲವು ನಾಯಕರು ದೂರವಾಣಿ ಮೂಲಕ ಹಾಗೂ ಪ್ರತ್ಯಕ್ಷವಾಗಿ ನನ್ನ ಮನವೊಲಿಸಲು ಯತ್ನಿಸಿದರು. ಮಾನಹಾನಿ, ಪ್ರಾಣಹಾನಿಯ ಬೆದರಿಕೆಗಳೂ ಬಂದವು. ಆದರೆ ನಾನು ಒಂದು ಬಾರಿ ತೆಗೆದುಕೊಂಡ ತೀರ್ಮಾನವನ್ನು ಎಷ್ಟೇ ದೊಡ್ಡ ವ್ಯಕ್ತಿ, ಎಷ್ಟೇ ಒತ್ತಡ ಹೇರಿದರೂ ಬದಲಾಯಿಸಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News