ಪ್ಲಾಸ್ಟಿಕ್ ಬಾಟಲಿಗಳಿಂದ ಪರಿಸರ ಸ್ನೇಹಿ ಆಸನಗಳು!

Update: 2024-05-27 06:21 GMT

ಉಡುಪಿ: ಇಂದು ಪ್ಲಾಸ್ಟಿಕ್ ಕವರ್, ಬಾಟಲಿಗಳನ್ನು ವಿಲೇವಾರಿ ಮಾಡುವುದೇ ಬಹಳ ದೊಡ್ಡ ಸಮಸ್ಯೆಯಾಗಿದೆ. ಮನೆ ಪರಿಸರದಲ್ಲಿ ಪ್ರತಿದಿನ ಕೆಜಿ ಗಟ್ಟಲೆ ಪ್ಲಾಸ್ಟಿಕ್‌ಗಳು ಸಂಗ್ರಹವಾಗುತ್ತಿವೆ. ಇದನ್ನು ಸುಡುವುದು ಮಾನವ ಜೀವಕ್ಕೆ ಅಪಾಯಕಾರಿಯಾದರೆ, ಮಣ್ಣಿನಲ್ಲಿ ಹೂಳುವುದು ಪರಿಸರಕ್ಕೆ ಮಾರಕವಾಗಿದೆ. ಇದಕ್ಕೆಲ್ಲ ಪರಿಹಾರ ಎಂಬಂತೆ ಇಲ್ಲೊಂದು ಸಂಘಟನೆ ಪ್ಲಾಸ್ಟಿಕ್ ಕವರ್, ತಂಪುಪಾನೀಯ, ನೀರಿನ ಬಾಟಲಿಗಳನ್ನು ಪರಿಸರ ಸ್ನೇಹಿಯಾಗಿ ಬಳಕೆ ಮಾಡುತ್ತಿದೆ.

ಮಂಗಳೂರಿನ ಕೆನರಾ ಆರ್ಗನೈಝೆಶನ್ ಆಫ್ ಡೆವಲಪ್‌ಮೆಂಟ್ ಆ್ಯಂಡ್ ಪೀಸ್(ಸಿಒಡಿಪಿ) ಎಂಬ ಸಂಘಟನೆಯು ಮನೆಗಳಲ್ಲಿ ಸಂಗ್ರಹವಾದ ಪ್ಲಾಸ್ಟಿಕ್ ಗಳನ್ನು ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡುವ ಕಾರ್ಯದಲ್ಲಿ ತೊಡಗಿಸಿ ಕೊಂಡಿದೆ. ಪ್ಲಾಸ್ಟಿಕ್ ಬಾಟಲಿಗಳು ಹಾಗೂ ಕವರ್‌ಗಳನ್ನು ಬಳಸಿಕೊಂಡು ಪರಿಸರ ಸ್ನೇಹಿ ಬೆಂಚ್‌ಗಳನ್ನು ನಿರ್ಮಿಸುವ ಕೆಲಸ ಮಾಡಲಾಗುತ್ತಿದೆ. ಇದರಿಂದ ಪ್ಲಾಸ್ಟಿಕ್‌ಗಳನ್ನು ಪರಿಸರಕ್ಕೆ ಪೂರಕವಾಗಿ ಹಾಗೂ ಯಾವುದೇ ಅಪಾಯ ಇಲ್ಲದ ರೀತಿಯಲ್ಲಿ ವಿಲೇವಾರಿ ಮಾಡಿದಂತಾಗುತ್ತಿದೆ.

ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆ ಆವರಣ, ಫಜೀರ್ ಚರ್ಚ್ ಆವರಣಗಳಲ್ಲಿ ಅತ್ಯಂತ ಸುಂದರವಾಗಿ ಬೆಂಚ್‌ಗಳನ್ನು ನಿರ್ಮಿಸಿ ಜನರ ಬಳಕೆಗೆ ಅನುಕೂಲ ಮಾಡಿಕೊಡಲಾಗಿದೆ. ಮುಂದೆ ಇನ್ನಷ್ಟು ಕಡೆ ಇಂತಹ ಬೆಂಚ್‌ಗಳನ್ನು ನಿರ್ಮಿಸುವುದು ಕೆನರಾ ಆರ್ಗನೈಝೆಶನ್ ಆಫ್ ಡೆವಲಪ್‌ಮೆಂಟ್ ಆ್ಯಂಡ್ ಪೀಸ್ ಸಂಘಟನೆಯ ಉದ್ದೇಶವಾಗಿದೆ.

400 ವರ್ಷಗಳಷ್ಟು ಬಾಳಿಕೆ: ‘ಮೊದಲು ಪ್ಲಾಸ್ಟಿಕ್ ಕವರ್‌ಗಳನ್ನು ಕಸದ ಬುಟ್ಟಿಗೆ ಹಾಕಿ, ಬಳಿಕ ಒಟ್ಟು ಸೇರಿಸಿ ಬೆಂಕಿ ಹಾಕಿ ಸುಡುತ್ತಿದ್ದೆ. ಮುಂದೆ ನನಗೆ ಸಿಒಡಿಪಿ ಸಂಘಟನೆಯಿಂದ ಹೀಗೆ ಪ್ಲಾಸ್ಟಿಕ್ ಸುಡುವುದರಿಂದ ಅದರ ಕಾರ್ಬನ್ ಡೈ ಆಕ್ಸೈಡ್ ನಮ್ಮ ದೇಹಕ್ಕೆ ಬಹಳಷ್ಟು ಹಾನಿಕಾರಕ ಎಂಬುದು ಗೊತ್ತಾಯಿತು. ಜರ್ಮನಿಯಿಂದ ಬಂದಿದ್ದ ಮೂವರು ವಿದ್ಯಾರ್ಥಿಗಳು ಪ್ಲಾಸ್ಟಿಕ್‌ಗಳನ್ನು ಈ ರೀತಿಯಾಗಿ ಬಳಕೆ ಮಾಡುವುದನ್ನು ತೋರಿಕೊಟ್ಟರು. ಅದರಂತೆ ನಾನು ಕೂಡ ತರಬೇತಿ ಪಡೆದು ಕೊಂಡಿದ್ದೇನೆ. ಇದರಿಂದ ನಮ್ಮ ಮನೆಯ ಫ್ಲಾಸ್ಟಿಕ್‌ಗಳನ್ನು ಸಮಪರ್ಕವಾಗಿ ಬಳಸಿಕೊಳ್ಳಬಹುದಾಗಿದೆ’ ಎನ್ನುತ್ತಾರೆ ಸಹ ಜೀವನ ಜಿಲ್ಲಾ ಒಕ್ಕೂಟದ ಮಾಜಿ ಕಾರ್ಯದರ್ಶಿ ಲವಿನಾ ದಾಂತಿ.

‘ಮನೆಗೆ ತರುವ ತಂಪು ಪಾನೀಯದ ಬಾಟಲಿಗಳನ್ನು ಬಳಸಿಕದ ಬಳಿಕ ಹೊರಗಡೆ ಬಿಸಾಡುವ ಬದಲು, ಅದರೊಳಗೆ ಪ್ಲಾಸ್ಟಿಕ್ ಕಸಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ಕಟ್ ಮಾಡಿ ಹಾಕಬೇಕು. ಅದನ್ನು ಬಾಟಲಿಯೊಳಗೆ ಕೋಲು ಹಾಕಿ ಜಡಿಯಬೇಕು. ತುಂಬಾ ಟೈಟ್ ಆಗಿ ಒಳಗಡೆ ಪ್ಲಾಸ್ಟಿಕ್‌ಗಳು ತುಂಬಿಸ ಬೇಕು. ಹೀಗೆ ತುಂಬಿದ ಬಾಟಲಿಗಳು ಕಲ್ಲಿನಂತೆ ಗಟ್ಟೆಯಾಗುತ್ತದೆ. ಅದನ್ನು ಬೆಂಚ್ ನಿರ್ಮಿಸಲು ಬಳಸಿಕೊಳ್ಳಬಹುದು’ ಎಂದು ಅವರು ತಿಳಿಸಿದರು.

‘ಸುಮಾರು ಎರಡು ಲೀಟರ್ ಬಾಟಲಿಯಲ್ಲಿ ಆರು ತಿಂಗಳ ಕಾಲ ಬಳಕೆ ಮಾಡಿದ ಪ್ಲಾಸ್ಟಿಕ್ ತ್ಯಾಜ್ಯಗಳು ತುಂಬಿಸಬಹುದಾಗಿದೆ. ಇದರಿಂದ ಮನೆ ವಠಾರ ಕೂಡ ಕ್ಲೀನ್ ಆಗುತ್ತದೆ. ಇತಂಹ ಬಾಟಲಿಗಳಿಂದ ನಿರ್ಮಿಸಿದ ಬೆಂಚ್‌ಗಳು ಸುಮಾರು 400 ವರ್ಷಗಳಷ್ಟು ಬಾಳಿಕೆ ಬರುತ್ತದೆ ಎಂಬುದು ಆಶ್ಟರ್ಯಕರ. ನನ್ನ ವಠಾರದವರಿಗೆ ನಾನು ಮಾಹಿತಿ ನೀಡಿ, ಎಲ್ಲರೂ ಸವಾಲಾಗಿ ಸ್ವೀಕರಿಸಿ, ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದರು.

ಒಂದು ಬಾಟಲಿಯಲ್ಲಿ 800ಗ್ರಾಂ ಪ್ಲಾಸ್ಟಿಕ್!

‘ಫಜೀರ್ ಚರ್ಚ್‌ನ ಆವರಣದಲ್ಲಿ ಈ ಬಾಟಲಿಗಳಿಂದ ನಾಲ್ಕು ಬೆಂಚ್ ಗಳನ್ನು ನಿರ್ಮಿಸಲಾಗಿದೆ. ಇವುಗಳಿಗೆ ಒಟ್ಟು 400ಕ್ಕೂ ಅಧಿಕ ಬಾಟಲಿಗಳನ್ನು ಉಪಯೋಗಿಸಲಾಗಿದೆ. ಒಂದು ಬಾಟಲಿಯೊಳಗೆ 800 ಗ್ರಾಂನಷ್ಟು ಪ್ಲಾಸ್ಟಿಕ್‌ಗಳಿವೆ ಎಂದು ಸುರತ್ಕಲ್‌ನ ಸೇಕ್ರೆಡ್ ಹಾರ್ಟ್ ಚರ್ಚ್‌ನ ಧರ್ಮಗುರು ಫಾ.ರಿಚರ್ಡ್ ಡಿಸೋಜ ಮಾಹಿತಿ ನೀಡಿದರು. ‘ಈ ರೀತಿಯ ಬಾಟಲಿ ಗಳಿಂದ ಜಪಾನ್‌ನಲ್ಲಿ ಮನೆ ಕೂಡ ನಿರ್ಮಿಸಿದ್ದಾರೆ. ತಡೆಗೋಡೆಗಳನ್ನು ಕೂಡ ನಿರ್ಮಿಸಬಹುದಾಗಿದೆ. ಗಾರ್ಡನ್‌ಗಳನ್ನು ಕೂಡ ಸುಂದರಗೊಳಿಸಬಹುದು. ಹೀಗೆ ಅನೇಕ ಪ್ರಯೋಜನಗಳು ಇದರಿಂದ ಆಗುತ್ತದೆ’ ಎಂದು ಅವರು ತಿಳಿಸಿದರು.

ಸಿಒಡಿಪಿ ಸಂಸ್ಥೆಯಲ್ಲಿ ದುಡಿಯುವ ಧರ್ಮಗುರುಗಳು, ವಿದ್ಯಾರ್ಥಿಗಳು ಸ್ವಯಂ ಸೇವಕರು, ಸಿಬ್ಬಂದಿ ಸೇರಿದಂತೆ ಎಲ್ಲರು ತೆರಳಿ ಈ ರೀತಿಯ ಬಾಟಲಿ ಗಳಿಂದ ಪರಿಸರ ಪೂರಕವಾದ 33 ಬೆಂಚ್‌ಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಮಂಗಳೂರಿನ ಶಾಲೆ, ಪಾರ್ಕ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಇಂತಹ ಪರಿಸರ ಸ್ನೇಹಿ ಬೆಂಚ್‌ಗಳನ್ನು ನಿರ್ಮಿಸಿಕೊಟ್ಟಿದ್ದೇವೆ.

-ಫಾ.ವಿನ್ಸೆಂಟ್ ಡಿಸೋಜ, ನಿರ್ದೇಶಕರು, ಸಿಒಡಿಪಿ

ನಮ್ಮ ವಠಾರದಲ್ಲಿ 4 ಬೆಂಚ್‌ಗಳನ್ನು ನಿರ್ಮಿಸಲಾಗಿದೆ. ಒಂದು ಬೆಂಚ್‌ಗೆ 120 ಬಾಟಲಿಗಳನ್ನು ಬಳಸಿದ್ದೇನೆ. ಆಟದ ಮೈದಾನದಲ್ಲೂ ಬೆಂಚ್ ಮಾಡಿದ್ದೇವೆ. ಬೆಂಚ್ ಹತ್ತಿರವೇ ಗಿಡಗಳನ್ನು ಕೂಡ ನೆಟ್ಟಿದ್ದೇವೆ. ಮುಂದೆ ಬೆಂಚ್‌ನಲ್ಲಿ ಕುಳಿತು ಕೊಳ್ಳುವವರಿಗೆ ನೆರಳು ಆಗಬಹುದು ಎಂಬ ಉದ್ದೇಶದಿಂದ. ನಮ್ಮ ಕಾರ್ಯ ನೋಡಿ ಆಸಕ್ತರು ಮುಂದೆ ಬರುತ್ತಿದ್ದಾರೆ.

-ಲವೀನಾ ದಾಂತಿ, ಮಾಜಿ ಕಾರ್ಯದರ್ಶಿ, ಸಹ ಜೀವನ ಜಿಲ್ಲಾ ಒಕ್ಕೂಟ

Writer - ವಾರ್ತಾಭಾರತಿ

contributor

Editor - jafar sadik

contributor

Byline - ನಝೀರ್ ಪೊಲ್ಯ

contributor

Similar News