ಗಲ್ಫ್ ವೈದ್ಯಕೀಯ ವಿವಿಯಲ್ಲಿ 21ನೇ ಪದವಿ ಪ್ರದಾನ ಸಮಾರಂಭ
ಯುಎಇ: ಅಜ್ಮಾನ್ ನಲ್ಲಿ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯದ 21ನೇ ಪದವಿ ಪ್ರದಾನ ಸಮಾರಂಭ ನಡೆದಿದ್ದು, ಈ ಬಾರಿ 561 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗಿದೆ.
ಯುಎಇ ಅಜ್ಮಾನ್ ನಲ್ಲಿ ನಡೆದ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭಕ್ಕೆ ಅಜ್ಮಾನ್ ನ ರಾಜಕುಮಾರ ಹಿಸ್ ಹೈನೆಸ್ ಶೇಖ್ ಅಮ್ಮಾರ್ ಬಿನ್ ಹುಮೈದ್ ಅಲ್ ನುಐಮಿ ಸಾಕ್ಷಿಯಾಗಿದ್ದಾರೆ.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಶೇಖ್ ಅಮ್ಮಾರ್ ಬಿನ್ ಹುಮೈದ್ ಅಲ್ ನುಐಮಿ, ಅತ್ಯುತ್ತಮ ಸಾಧನೆಗಳಿಗಾಗಿ ಪದವೀಧರ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ವೃತ್ತಿ ಜೀವನದಲ್ಲಿನ ಸಾಧನೆಗಾಗಿ ನಿರಂತರ ಕಲಿಕೆಯ ಮಹತ್ವವನ್ನು ವಿವರಿಸಿದ ಹಿಸ್ ಹೈನೆಸ್ ಶೇಖ್ ಅಮ್ಮಾರ್, ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯದಿಂದ ಪಡೆದ ಜ್ಞಾನವನ್ನು ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ತುಂಬೆ ಗ್ರೂಪ್ ನ ಸಂಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯ್ದಿನ್ ಮಾತನಾಡಿದ್ದು, ಅಜ್ಮಾನ್ ನ ಯುವರಾಜ ಶೇಖ್ ಅಮ್ಮಾರ್ ಬಿನ್ ಹುಮೈದ್ ಅಲ್ ನುಐಮಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯ 27ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ನಮ್ಮ ಸಂಸ್ಥೆಯು ಖಾಸಗಿ ಆರೋಗ್ಯ ವೃತ್ತಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದ್ದು, 102ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳು ಸಂಸ್ಥೆಯಲ್ಲಿದ್ದಾರೆ. ತುಂಬೆ ಅಕಾಡೆಮಿಕ್ ಆಸ್ಪತ್ರೆ ಇಂದು ದೇಶದ ಅತಿದೊಡ್ಡ ಮತ್ತು ಅತ್ಯಂತ ಪ್ರತಿಷ್ಠಿತ ಆರೋಗ್ಯ ಸೇವಾ ಸಂಸ್ಥೆಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.
ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಹೊಸಾಮ್ ಹಮ್ದಿ ಮಾತನಾಡುತ್ತಾ, ಪದವೀಧರ ವಿದ್ಯಾರ್ಥಿ ಗಳಿಗೆ ಕಠಿಣ ಪರಿಶ್ರಮಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ನಿಮ್ಮ ವೃತ್ತಿಜೀವನದ ಉದ್ದಕ್ಕೂ ಗಲ್ಫ್ ವೈದ್ಯಕೀಯ ವಿವಿಯಿಂದ ಪಡೆದ ಸಹನುಭೂತಿ, ಪರರ ಬಗೆಗಿನ ಹಿತ ಚಿಂತನೆ, ಸತ್ಯ ಸೇರಿದಂತೆ ಮೌಲ್ಯಗಳನ್ನು ಪಾಲಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ದಾರೆ.
ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯದ ಮೆಡಿಸಿನ್ ವಿಭಾಗದ 207ವಿದ್ಯಾರ್ಥಿಗಳು, ದಂತ ವೈದ್ಯಕೀಯ ವಿಭಾಗದ 78 ವಿದ್ಯಾರ್ಥಿಗಳು ಮತ್ತು 47 ಫಾರ್ಮಸಿ, ಕಾಲೇಜ್ ಆಫ್ ಹೆಲ್ತ್ ಸೈನ್ಸಸ್ ನ 151 ವಿದ್ಯಾರ್ಥಿಗಳು, ನರ್ಸಿಂಗ್ ವಿಭಾಗದ 50 ವಿಧ್ಯಾರ್ಥಿಗಳು ಸೇರಿ ಒಟ್ಟು 561 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗಿದೆ. ಇದರಿಂದಾಗಿ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಒಟ್ಟು ಸಂಖ್ಯೆಯನ್ನು 4,124ಕ್ಕೆ ಏರಿಕೆಯಾಗಿದೆ.