ದುಬೈ ಕಠಿಣ ನಿಯಮ ಜಾರಿಗೊಳಿಸಿದ ಬಳಿಕ ಭಾರತೀಯರಿಗೆ ಪ್ರವಾಸಿ ವೀಸಾ ನಿರಾಕರಣೆಯಲ್ಲಿ ಹೆಚ್ಚಳ: ವರದಿ

Update: 2024-12-09 08:12 GMT

ಸಾಂದರ್ಭಿಕ ಚಿತ್ರ (Image by diana.grytsku on Freepik)

ಯುಎಇ: ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ದುಬೈ ಪ್ರವಾಸಿ ವೀಸಾ ನೀಡಲು ಕಠಿಣ ನಿಯಮಗಳನ್ನು ಜಾರಿಗೊಳಿಸಿದ ನಂತರ, ದುಬೈಗೆ ಭೇಟಿ ನೀಡಲು ಬಯಸುವ ಭಾರತೀಯರ ವೀಸಾ ನಿರಾಕರಣೆಗಳಲ್ಲಿ ಭಾರೀ ಏರಿಕೆಯಾಗಿದೆ ಎಂದು Times of India ವರದಿ ಮಾಡಿದೆ.

ದುಬೈನ ವಲಸೆ ವಿಭಾಗ (emigration department) ಪ್ರವಾಸಿ ವೀಸಾಗಳಿಗೆ ಕಟ್ಟುನಿಟ್ಟಾದ ನಿಯಮಾವವಳಿಗಳನ್ನು ಜಾರಿಗೆ ತಂದಿದೆ. ಇದರ ಪ್ರಕಾರ, ದುಬೈಗೆ ಪ್ರವಾಸಿ ವೀಸಾಕ್ಕೆ ಅರ್ಜಿ ಸಲ್ಲಿಸುವವರು ಹೋಟೆಲ್ ಬುಕಿಂಗ್ ದಾಖಲೆಗಳನ್ನು QR ಕೋಡ್ಗಳ ಮೂಲಕ ಸಲ್ಲಿಸಬೇಕು, ರಿಟರ್ನ್ ಟಿಕೆಟ್ ಗಳ ಪ್ರತಿಯನ್ನು ಕೂಡ ಒದಗಿಸಬೇಕಿತ್ತು. ಪ್ರವಾಸಿಗರು ತಮ್ಮ ಸಂಬಂಧಿಕರೊಂದಿಗೆ ವಾಸಿಸುವುದಿದ್ದರೆ ವಸತಿ ಸೌಕರ್ಯದ ಬಗ್ಗೆ ಹೆಚ್ಚುವರಿ ದಾಖಲೆ ನೀಡಬೇಕಾಗಿದೆ. ವರದಿಯ ಪ್ರಕಾರ, ದುಬೈ ಈ ಹೊಸ ವೀಸಾ ನಿಯಮಗಳನ್ನು ಜಾರಿಗೆ ತಂದ ನಂತರ, ಪ್ರತಿದಿನ 100ರಲ್ಲಿ ಕನಿಷ್ಠ 5-6 ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ.

ಹೊಸ ನಿಯಮಗಳನ್ನು ಜಾರಿಗೊಳಿಸುವ ಮೊದಲು ದುಬೈ ವೀಸಾಗಳ ನಿರಾಕರಣೆ ದರವು ಕೇವಲ 1 ರಿಂದ 2% ಆಗಿತ್ತು. ನಾವು ಈಗ ಪ್ರತಿದಿನ ಸುಮಾರು 100 ಅರ್ಜಿಗಳಲ್ಲಿ ಕನಿಷ್ಠ 5 ರಿಂದ 6 ಅರ್ಜಿಗಳನ್ನು ತಿರಸ್ಕರಿಸುವುದನ್ನು ನೋಡುತ್ತಿದ್ದೇವೆ. ದೃಢೀಕೃತ ವಿಮಾನ ಟಿಕೆಟ್ಗಳು ಮತ್ತು ಹೋಟೆಲ್ ವಾಸ್ತವ್ಯದ ವಿವರಗಳನ್ನು ಲಗತ್ತಿಸಿದರೂ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಪ್ಯಾಸಿಯೋ ಟ್ರಾವೆಲ್ಸ್ ಪ್ರೈವೇಟ್ ಲಿಮಿಟೆಡ್ (Passio Travels Pvt Ltd) ನ ನಿರ್ದೇಶಕ ನಿಖಿಲ್ ಕುಮಾರ್ ತಿಳಿಸಿದ್ದಾರೆ.

ಈ ಬೆಳವಣಿಗೆಯು ಪ್ರಯಾಣಿಕರಲ್ಲಿ ಗೊಂದಲವನ್ನುಂಟುಮಾಡುತ್ತದೆ. ವೀಸಾ ಶುಲ್ಕಗಳು ಮಾತ್ರವಲ್ಲದೆ ಮುಂಗಡ ಬುಕ್ ಮಾಡಿದ ವಿಮಾನ ಟಿಕೆಟ್ ಗಳು ಮತ್ತು ಹೋಟೆಲ್ ಕಾಯ್ದಿರಿಸುವಿಕೆಗಳಿಂದ ಪ್ರಯಾಣಿಕರಿಗೆ ನಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.

ನಾವು ಈಗ ದುಬೈಗೆ ಪ್ರವಾಸಿ ವೀಸಾ ಅರ್ಜಿಗಳ ತಿರಸ್ಕರಣೆಯಲ್ಲಿ ಹೆಚ್ಚಳವನ್ನು ನೋಡುತ್ತಿದ್ದೇವೆ. ಈ ಹಿಂದೆ ಸುಮಾರು 99% ದುಬೈ ವೀಸಾ ಅರ್ಜಿಗಳನ್ನು ಅನುಮೋದಿಸಲಾಗುತ್ತಿತ್ತು. ಆದರೆ ಈಗ ಹೆಚ್ಚಿನ ಸಂಖ್ಯೆಯಲ್ಲಿ ವೀಸಾ ತಿರಸ್ಕರಣೆಯಾಗುತ್ತಿದೆ ಎಂದು ವಿಹಾರ್ ನಿರ್ದೇಶಕ ರಿಷಿಕೇಶ್ ಪೂಜಾರಿ ಹೇಳಿದ್ದಾರೆ.

ಹಸ್ಮುಖ್ ಟ್ರಾವೆಲ್ಸ್ ನ ನಿರ್ದೇಶಕ ವಿಜಯ್ ಠಕ್ಕರ್ ಮಾತನಾಡುತ್ತಾ, ದುಬೈನಲ್ಲಿ ತಮ್ಮ ಸಂಬಂಧಿಕರೊಂದಿಗೆ ಇರಲು ಯೋಜಿಸುತ್ತಿದ್ದ ಇಬ್ಬರು ಪ್ರಯಾಣಿಕರ ವೀಸಾ ಅರ್ಜಿಗಳನ್ನು ಇತ್ತೀಚೆಗೆ ತಿರಸ್ಕರಿಸಲಾಗಿದೆ ಎಂದು ಹೇಳಿದ್ದಾರೆ.

ಯುಎಇ ಇತ್ತೀಚೆಗೆ ಹೊಸ ನೀತಿಯನ್ನು ಪರಿಚಯಿಸಿದೆ. ಈ ಮೂಲಕ ಪ್ರಯಾಣಿಕರು ವೀಸಾಗೆ ಅರ್ಜಿ ಸಲ್ಲಿಸುವಾಗ ಎಮಿಗ್ರೇಷನ್ ವಿಭಾಗದ ವೆಬ್ ಸೈಟ್‌ ನಲ್ಲಿ ಹೋಟೆಲ್ ಬುಕಿಂಗ್ ದಾಖಲೆಗಳು ಮತ್ತು ರಿಟರ್ನ್ ಟಿಕೆಟ್ಗಳನ್ನು ಸಲ್ಲಿಸಬೇಕಾಗುತ್ತದೆ. ಇದಲ್ಲದೆ ಪ್ರವಾಸಿಗರು ನಗರದಲ್ಲಿ ಉಳಿಯಲು ಬೇಕಾದಷ್ಟು ಹಣಕಾಸು ಹೊಂದಿದ್ದಾರೆ ಎಂಬುದಕ್ಕೆ ಪುರಾವೆಗಳನ್ನು ಒದಗಿಸಬೇಕಾಗುತ್ತದೆ. ಅರ್ಜಿದಾರರು ಎರಡು ತಿಂಗಳ ವೀಸಾಕ್ಕಾಗಿ ತಮ್ಮ ಕ್ರೆಡಿಟ್ ಅಥವಾ ಡೆಬಿಟ್ ಖಾತೆಗಳಲ್ಲಿ ಕನಿಷ್ಠ AED 5,000 (ಅಂದಾಜು 1.15 ಲಕ್ಷ ರೂ.) ಮತ್ತು ಮೂರು ತಿಂಗಳ ವೀಸಾಕ್ಕಾಗಿ AED 3,000 ( ಅಂದಾಜು 69,205ರೂ.) ಹಣವನ್ನು ಹೊಂದಿರಬೇಕು ಎಂದು ನಿಯಮವು ಹೇಳುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News