ಕುವೈತ್ | ಕೇರಳದ ನರ್ಸ್‌ಗಳಿಂದ ಗಲ್ಫ್ ಬ್ಯಾಂಕ್‌ಗೆ 700 ಕೋಟಿ ರೂ. ವಂಚನೆ!
ಕೊಚ್ಚಿ: ಕೇರಳದ ನೂರಾರು ನರ್ಸ್‌ಗಳು ಕುವೈತ್ ನ ಗಲ್ಫ್ ಬ್ಯಾಂಕ್‌ಗೆ 700 ಕೋಟಿ ರೂ. ವಂಚನೆ ಮಾಡಿದ್ದಾರೆನ್ನಲಾದ ಘಟನೆ ಬೆಳಕಿಗೆ ಬಂದಿದೆ.
ಗಲ್ಫ್ ದೇಶವನ್ನು ತೊರೆಯುವ ಮೊದಲು ಕುವೈತ್‌ನ ಬ್ಯಾಂಕ್‌ಗೆ ನರ್ಸ್ ಗಳು ಸುಮಾರು 700 ಕೋಟಿ ರೂಪಾಯಿ ವಂಚಿಸಿದ್ದಾರೆ ಎನ್ನಲಾಗಿದೆ. ಕೇರಳದ ಸುಮಾರು 1,425 ನರ್ಸ್ ಗಳು ಗಲ್ಫ್ ಬ್ಯಾಂಕ್‌ನಿಂದ ದೊಡ್ಡ ಸಾಲವನ್ನು ಪಡೆದು, ಉದ್ದೇಶಪೂರ್ವಕವಾಗಿ ಮರುಪಾವತಿಯನ್ನು ಮಾಡದೇ ಕೆನಡಾ, ಆಸ್ಟ್ರೇಲಿಯಾ ಮತ್ತು ಯುರೋಪಿಯನ್ ದೇಶಗಳಿಗೆ ವಲಸೆ ಹೋಗಿದ್ದಾರೆ ಎಂದು The New Indian Express ವರದಿ ಮಾಡಿದೆ.
ಕುವೈತ್‌ನ ಆರೋಗ್ಯ ಸಚಿವಾಲಯದಲ್ಲಿ (MoH) ಕೆಲಸ ಮಾಡುವಾಗ ಸಾಲ ಪಡೆದು ಮರುಪಾವತಿ ಮಾಡದೆ ದೇಶದಿಂದ ನಿರ್ಗಮಿಸಿದ 10 ಜನರ ವಿರುದ್ಧ ಗಲ್ಫ್ ಬ್ಯಾಂಕ್‌ನ ಡೆಪ್ಯುಟಿ ಜನರಲ್ ಮ್ಯಾನೇಜರ್ ಕುವೈತ್ ಪ್ರಜೆ ಮುಹಮ್ಮದ್ ಅಬ್ದುಲ್ ವಾಸ್ಸಿ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಕೇರಳದಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.
“ಮೊದಲು ಈ ನರ್ಸ್ ಗಳು ಸಾಲವನ್ನು ಪಡೆದು ತ್ವರಿತವಾಗಿ ಮರುಪಾವತಿಸಿ ವಿಶ್ವಾಸಾರ್ಹತೆ ಗಳಿಸಿದ್ದರು. ಯುರೋಪ್, ಆಸ್ಟ್ರೇಲಿಯಾ ಮತ್ತು ಕೆನಡಾದಲ್ಲಿ ವೈದ್ಯಕೀಯ ವೃತ್ತಿಪರರಿಗೆ ಬೇಡಿಕೆ ಹೆಚ್ಚಾದಾಗ, ಅವರು ಬ್ಯಾಂಕಿನಿಂದ ಭಾರಿ ಸಾಲವನ್ನು ಪಡೆದು ವಲಸೆ ಹೋದರು. ನಂತರ ಅವರು ಸಾಲ ಮರುಪಾವತಿಯನ್ನು ನಿಲ್ಲಿಸಿದರು. ಈ ರೀತಿಯ ವಂಚನೆಯಲ್ಲಿ ಭಾಗಿಯಾಗಿರುವ ಕೇರಳದ 1,425 ನರ್ಸ್‌ಗಳನ್ನು ಬ್ಯಾಂಕ್ ಗುರುತಿಸಿದೆ. ಅವರು ಕುವೈತ್‌ನಲ್ಲಿ ಇಲ್ಲದ ಕಾರಣ, ಬ್ಯಾಂಕ್ ಯಾವುದೇ ಮುಂದಿನ ಕ್ರಮವನ್ನು ಪ್ರಾರಂಭಿಸಲು ಸಾಧ್ಯವಿಲ್ಲ", ಎಂದು ಕೇರಳದಲ್ಲಿ ಕುವೈತ್‌ನ ಗಲ್ಫ್ ಬ್ಯಾಂಕ್ ಅನ್ನು ಪ್ರತಿನಿಧಿಸುವ ವಕೀಲ ಥಾಮಸ್ ಜೆ ಅನಕ್ಕಲ್ಲುಮ್ಕಲ್ ಹೇಳಿದರು.
ಗಲ್ಫ್ ಬ್ಯಾಂಕ್‌ನ ಡೆಪ್ಯುಟಿ ಜನರಲ್ ಮ್ಯಾನೇಜರ್ ಮುಹಮ್ಮದ್ ಅಬ್ದುಲ್ ವಾಸ್ಸಿ , ಕಳೆದ ತಿಂಗಳು ಕೇರಳಕ್ಕೆ ಆಗಮಿಸಿ ದೂರು ದಾಖಲಿಸುವ ಮುನ್ನ ರಾಜ್ಯ ಪೊಲೀಸ್ ಮುಖ್ಯಸ್ಥರನ್ನು ಭೇಟಿಯಾಗಿದ್ದರು. ವಂಚನೆ ಪ್ರಕರಣವನ್ನು ಪೊಲೀಸರ ಗಮನಕ್ಕೆ ತಂದರು.
"ಈಗ ಕೇರಳದಲ್ಲಿ ನೆಲೆಸಿರುವ 10 ಮಂದಿ ಸಾಲ ಮರುಪಾವತಿ ಮಾಡದವರನ್ನು ಬ್ಯಾಂಕ್ ಗುರುತಿಸಿದೆ. ಅವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ವಂಚಿಸಿರುವ ನರ್ಸ್‌ಗಳಲ್ಲಿ ಒಬ್ಬರು ಕೇರಳಕ್ಕೆ ಮರಳಿ ಕೊಚ್ಚಿಯಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ. ಅವರು ಇಲ್ಲಿನ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನ ನರ್ಸ್‌ಗಳನ್ನು ಗುರುತಿಸುವ ಪ್ರಕ್ರಿಯೆಯಲ್ಲಿದ್ದೇವೆ. ಹೆಚ್ಚಿನ ಎಫ್‌ಐಆರ್‌ಗಳು ದಾಖಲಾಗಲಿದೆ,” ಎಂದು ವಕೀಲ ಥಾಮಸ್ ಹೇಳಿದರು.
ಬ್ಯಾಂಕ್ ಗುರುತಿಸಿರುವ ವಂಚಕರು :
1.25 ಕೋಟಿ ರೂ. ಸಾಲ ಪಡೆದಿರುವ ಕಲಮಶ್ಶೇರಿಯ ಶಫೀಕ್ ಅಲಿ, ವಡೆಯಂಪಾಡಿಯ ಡೆಲ್ನಾ ತಂಕಚನ್ (93.10 ಲಕ್ಷ ರೂ.), ಆನಪ್ಪಾರದ ಬಿಜು ಮೂಂಜೆಲಿ (98.40 ಲಕ್ಷ ರೂಹ), ಐಮೂರಿಯ ರೀಟಾ ಶಿಬು (1.22 ಕೋಟಿ ರೂ.), ರಘುಲ್ ರೆಥೆಶನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುವಾಟ್ಟುಪುಝದ (1.21 ಕೋಟಿ ರೂ.), ನೆಲ್ಲಿಮಟ್ಟಂನ ರಾಬಿನ್ ಮ್ಯಾಥ್ಯೂ (63.24 ಲಕ್ಷ ರೂ.), ವರಪುಳದ ಸಿಂಧ್ಯಾ ಅಲೆಕ್ಸ್ (70.07 ಲಕ್ಷ ರೂ.), ನಾಯರಂಬಲಂನ ದೀಪಕ್ ಗೋಪಿ (1.16 ಕೋಟಿ ರೂ.) ಮತ್ತು ಕುಮರಕೊಂನ ಕೀರ್ತಿಮೋನ್ (1.10 ಕೋಟಿ ರೂ.) ಸಾಲ ಪಡೆದು ವಂಚಿಸಿದ್ದಾರೆ.
ತನಿಖೆ ಪ್ರಾರಂಭಿಸಿದ ಕೇರಳ ಪೊಲೀಸರು
ಕಲಮಸ್ಸೆರಿ, ನ್ಜಾರಕಲ್, ವರಪೌಳ, ಕಾಲಡೆ, ಮುವಾಟ್ಟುಪುಝ, ಒನ್ನುಕಲ್, ಕೊಡನಾಡ್ ಮತ್ತು ಕುಮರಕೊಂ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಆರೋಪಿಗಳ ವಿರುದ್ಧದ ಐಪಿಸಿ ಸೆಕ್ಷನ್ 420 (ವಂಚನೆ) ಮತ್ತು ಸೆಕ್ಷನ್ 406 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ವಂಚನೆ ಪ್ರಕರಣದ ಆರೋಪಿಗಳು ಕುವೈತ್‌ನಲ್ಲಿ ಇಲ್ಲದ ಕಾರಣ, ಭಾರತದಲ್ಲಿ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಹುದೇ ಎಂದು ಬ್ಯಾಂಕ್ ಮೊದಲು ಕಾನೂನು ತಜ್ಞರೊಡನೆ ಸಮಾಲೋಚನೆ ನಡೆಸಿದೆ.
"ವಂಚನೆಗಳು ಕುವೈತ್‌ನಲ್ಲಿ ನಡೆದಿದ್ದರೂ, ಭಾರತೀಯ ಕಾನೂನಿನ ಅಡಿಯಲ್ಲಿ ಭಾರತದಲ್ಲಿ ಅವರನ್ನು ಕಾನೂನು ಕ್ರಮ ಜರುಗಿಸಲು ಅವಕಾಶಗಳಿವೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ನಡುವೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೆಲವು ಪ್ರಕರಣಗಳಲ್ಲಿ ಆರೋಪಿಗಳ ಹೇಳಿಕೆಗಳನ್ನು ಈಗಾಗಲೇ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಬ್ಯಾಂಕ್ ಇತರ ವಿವರಗಳನ್ನು ಶೀಘ್ರದಲ್ಲೇ ಪೊಲೀಸರಿಗೆ ಹಸ್ತಾಂತರಿಸಲಿದೆ.