ಹಾಸನ | ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ : ದಲಿತ ಸಂಘಟನೆಗಳ ಪ್ರತಿಭಟನೆ
ಹಾಸನ/ಅರಕಲಗೂಡು : ತಾಲೂಕಿನ ಕೊಣನೂರು ಹೋಬಳಿಯ ಬಿದರೂರು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸೆಗಣಿ ಎರಚಿ ಅವಮಾನ ಮಾಡಿರುವ ಕಿಡಿಗೇಡಿಗಳ ಕೃತ್ಯ ಖಂಡಿಸಿ ದಲಿತ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಬಿದರೂರು ಬಸ್ ನಿಲ್ದಾಣದ ಬಳಿ ಸ್ಥಾಪಿಸಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಬ್ಯಾನರ್‌ಗೆ ಕಿಡಿಗೇಡಿಗಳು ಶುಕ್ರವಾರ ರಾತ್ರಿ ಸೆಗಣಿ ಎರಚಿರುವ ವಿಷಯ ತಿಳಿದು ಬಿಎಸ್ಪಿ ಸೇರಿದಂತೆ ವಿವಿಧ ದಲಿತ ಪರ ಸಂಘಟನೆಗಳು ಸ್ಥಳಕ್ಕೆ ಆಗಮಿಸಿ ಅಂಬೇಡ್ಕರ್‌ಗೆ ಅಪಮಾನ ಮಾಡಿರುವ ಕಿಡಿಗೇಡಿ ಗಳನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಹುಜನ ಸಮಾಜ ಪಾರ್ಟಿ ಮುಖಂಡ ಅತ್ನಿ ಹರೀಶ್, ಡಿಎಸ್ಎಸ್ ಮುಖಂಡರಾದ ಚಂದ್ರು, ರಮೇಶ್ ಮರಲಕ್ಕಿ, ಗಣೇಶ್, ದಲಿತ ಮುಖಂಡರು, ಗ್ರಾಮಸ್ಥರು, ಹಾಜರಿದ್ದರು.
ಪ್ರಕರಣದ ಹಿನ್ನೆಲೆ
ಪರಿಶಿಷ್ಟ ಜಾತಿಗೆ ಸೇರಿದ ಕಮಲಮ್ಮ ಮತ್ತು ಅವರ ಪುತ್ರ ಗಣೇಶ್ ಎಂಬವರು ನ.5ರಂದು ಗ್ರಾಮ ದೇವರು ಬಸವೇಶ್ವರ ಸ್ವಾಮಿ ಉತ್ಸವದ ಸಂದರ್ಭದಲ್ಲಿ ದೇವಸ್ಥಾನದ ಒಳಗೆ ಹೋಗಿ ದೇವರಿಗೆ ಪೂಜೆ ಸಲ್ಲಿಸಿದ್ದರು ಎನ್ನಲಾಗಿದೆ. ಈ ವೇಳೆ ದೇವಸ್ಥಾನದ ಪೂಜಾರಿ ಕಾಂತರಾಜು ಎಂಬಾತ ದಲಿತರು ದೇವಸ್ಥಾನದ ಒಳಗೆ ಬರುವ ಹಾಗಿಲ್ಲ ಎಂದು ತಾಯಿ ಮತ್ತು ಮಗನ ಮೇಲೆ ಆಕ್ರೋಶಗೊಂಡು ತಡೆದು ಅಸಭ್ಯವಾಗಿ ವರ್ತಿಸಿದರು ಎನ್ನಲಾಗಿದೆ. ಇದರಿಂದಾಗಿ ಗಣೇಶ್ ಎದುರು ಮಾತನಾಡಿದ್ದರಿಂದ ಕೋಪಗೊಂಡ ಕಾಂತರಾಜು ಮತ್ತು ಇತರರು ದೊಣ್ಣೆಯಿಂದ ಹಲ್ಲೆ ಮಾಡಲು ಯತ್ನಿಸಿದ್ದರು ಎನ್ನಲಾಗಿದೆ.
ನ.6ರಂದು ಗ್ರಾಮದ ಮುಖಂಡ ಅಣ್ಣಯ್ಯ ಎಂಬವರ ಮುಖಾಂತರ ದೇವಸ್ಥಾನದ ಬಳಿಗೆ ಕಮಲಮ್ಮ ಮತ್ತು ಗಣೇಶನನ್ನು ಪಂಚಾಯಿತಿ ನಡೆಸಲು ಕರೆಸಿಕೊಂಡ ಮುಖಂಡರಾದ ಮಾದೇಶ, ರಾಮೇಗೌಡ, ರಾಜೇಗೌಡ, ಕಾಂತರಾಜು ಜಾತಿ ದೌರ್ಜನ್ಯ ನಡೆಸಿ ಕೊಲೆ ಬೆದರಿಕೆ ಹಾಕಿರುವ ಕುರಿತು ಕೊಣನೂರು ಪೊಲೀಸ್ ಠಾಣೆಗೆ ಕಮಲಮ್ಮ ದೂರು ನೀಡಿದ್ದಾರೆ.
ನ.8ರಂದು ದೇವಸ್ಥಾನಕ್ಕೆ ಮೈಲಿಗೆಯಾಗಿದೆ ಎಂದು ದೇವಸ್ಥಾನಕ್ಕೆ ವಿಶೇಷ ಪೂಜೆ ಸಲ್ಲಿಸಿದರು ಎನ್ನಲಾಗಿದೆ. ಅದೇ ದಿನ ಮಧ್ಯರಾತ್ರಿ ಯಾರೊ ಕಿಡಿಗೇಡಿಗಳು ಅಂಬೇಡ್ಕರ್ ಭಾವಚಿತ್ರಕ್ಕೆ ಸೆಗಣಿಯನ್ನು ಎರಚಿ ಅವಮಾನ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.