ಕಾಂಗ್ರೆಸ್‌ನದ್ದು ಜನ ಕಲ್ಯಾಣ ಸಮಾವೇಶ ಅಲ್ಲ, ಅದೊಂದು ಸ್ವಾರ್ಥ ಸಮಾವೇಶ : ಎಚ್.ಕೆ.ಕುಮಾರಸ್ವಾಮಿ
ಹಾಸನ : ಕಳೆದ ಎರಡು ದಿನಗಳ ಹಿಂದೆ ಹಾಸನದಲ್ಲಿ ನಡೆದ ಸಮಾವೇಶವು ಸ್ವಾಭಿಮಾನಿ ಸಮಾವೇಶವು ಅಲ್ಲ, ಜನ ಕಲ್ಯಾಣ ಸಮಾವೇಶವು ಅಲ್ಲ ಅದೊಂದು ಸ್ವಾರ್ಥ ಸಮಾವೇಶ. ಕೇವಲ ನಮ್ಮ ಜೆಡಿಎಸ್ ನಾಯಕರನ್ನು ನಿಂದಿಸಲು ಮಾಡಿದ ಸಮಾವೇಶವಾಗಿದ್ದು, ಅವರಿಗೆ ಸ್ವಲ್ಪವಾದರು ಮಾನ ಮರ್ಯಾದೆ ಬೇಡವೆ? ಎಂದು ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಜಂಟಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಡಿ.5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ನಡೆದ ಹಿನ್ನೆಲೆ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ಕೈ ನಾಯಕರಿಗೆ ತಿರುಗೇಟು ನೀಡಿದರು.
ಹಾಸನದಲ್ಲಿ ನಡೆದದ್ದು ಸ್ವಾಭಿಮಾನಿ ಸಮಾವೇಶವು ಅಲ್ಲ, ಜನ ಕಲ್ಯಾಣ ಸಮಾವೇಶವು ಅಲ್ಲ ಅದೊಂದು ಸ್ವಾರ್ಥ ಸಮಾವೇಶ. ಕೇವಲ ನಮ್ಮ ನಾಯಕರನ್ನು ನಿಂದಿಸಲು ಮಾಡಿದ ಸಮಾವೇಶವಾಗಿದ್ದು, ಅವರು ಜಿಲ್ಲೆಗೆ ರಾಜ್ಯಕ್ಕೆ ಕೊಟ್ಟ ಕೊಡುಗೆ ಏನೆಂದು ಹೇಳಬೇಕಿತ್ತು. ರಾಜ್ಯದಲ್ಲಿ ಎಷ್ಟೆಲ್ಲಾ ಸಮಸ್ಯೆ ಇದ್ದರೂ ಆ ಬಗ್ಗೆ ಒಂದೆ ಒಂದು ಮಾತನಾಡಿಲ್ಲ. ಅವರಿಗೆ ಸ್ವಲ್ಪವಾದರು ಮಾನ ಮರ್ಯಾದೆ ಬೇಡವೆ? ಹಾಸನದಲ್ಲಿ ಮಹಿಳೆಯರಿಗೆ ಅನ್ಯಾಯ ಆಗಿದೆ ಅಂತಾರೆ. ಬಾಣಂತಿಯರ ಸಾವು ಆಗಿರುವುದು ಇದು ಯಾರಿಗೆ ಅನ್ಯಾಯ? ಮಹಿಳೆಯರು ಮಕ್ಕಳಿಗೆ ಮಾಡಿದ ಅನ್ಯಾಯ ಅಲ್ಲವೇ. ಈ ಸಮಾವೇಶ ಅಕ್ಷ್ಯಮ್ಯ ಎಂದು ವಾಗ್ದಾಳಿ ನಡೆಸಿದರು. ಉಪ ಚುನಾವಣೆ ಫಲಿತಾಂಶ ಆಡಳಿತ ಪಕ್ಷದ ಪರ ಬರೋದು ಸಾಮಾನ್ಯ. ವಾಲ್ಮೀಕಿ ನಿಗಮದಲ್ಲಿ ಹಗರಣ ಆಗಿರುವ ಬಗ್ಗೆ ಸಿಎಂ ಅವರೇ ಹಗರಣ ಒಪ್ಪಿಕೊಂಡಿದ್ದಾರೆ. ಓರ್ವ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೆಲ್ಲದರ ಬಗ್ಗೆ ಕ್ರಮ ಆಗಿಲ್ಲ ಎಂದು ಹೇಳಿದರು.
ಜನ ಕುರುಡರಿಲ್ಲ, 25 ವರ್ಷದಿಂದ ಇರೋ ಪಕ್ಷವನ್ನು ಕಿತ್ತೊಗೆಯೊದಾಗಿ ಹೇಳ್ತಾರೆ. ಅವರು ಆರು ಜಿಲ್ಲೆಯಿಂದ ಅಷ್ಟು ಜನ ಸೇರಿಸಿದ್ದಾರೆ. ನಾವು ಒಂದೇ ಜಿಲ್ಲೆಯಿಂದ ಅಷ್ಟು ಜನ ಸೇರಿಸುತ್ತೇವೆ. ಲೋಕಸಭಾ ಅಧಿವೇಶನ ಮುಗಿಯಲಿ. ನಮ್ಮ ಕುಮಾರಸ್ವಾಮಿ ಬರ್ತಾರೆ ನಾವೂ ರಾಜಕೀಯ ಸಮಾವೇಶ ಮಾಡ್ತೇವೆ ಎಂದು ತಿರುಗೇಟು ನೀಡಿದರು. ಇದೆಲ್ಲ ಬಿಡಿ ಇನ್ನು ಮುಂದಾದರು ಕೆಲಸ ಮಾಡಿ ಎಂದು ಸಲಹೆ ನೀಡಿದರು. ಸುಳ್ಳು ಆಪಾದನೆ ಬಿಡಲಿ, ನಮ್ಮ ನಾಯಕರನ್ನು ನಿಂದಿಸಿರುವುದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಶ್ರವಣ ಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಸಿಎಂ ಮತ್ತು ಡಿಸಿಎಂ ಮಾತುಗಳನ್ನು ನೋಡಿದರೆ ಇದು ಕೇವಲ ನಿಂದನೆಗೆ ಮಾಡಿದ ಸಮಾವೇಶವಾಗಿದೆ. ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಆಗುತ್ತಿದೆ. ತಾವು ಮಾಡಿದ ಅಭಿವೃದ್ಧಿ ಏನೆಂದು ಹೇಳಬೇಕಿತ್ತು. ಅಭಿವೃದ್ಧಿ ಇಲ್ಲದೆ ಆಡಳಿತ ಪಕ್ಷದ ನಾಯಕರೆ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಅಸಮಾಧಾನ ಹೊರ ಹಾಕಿದವರ ಬಾಯಿ ಮುಚ್ಚಿಸೊ ಕೆಲಸ ನಡೆಯುತ್ತಿದೆ. ಹಿಂದುಳಿದ ವರ್ಗಗಳಿಗೆ ನಾಮಕಾಸ್ತೆ ನಿಗಮ ಮಾಡಿದ್ದಾರೆ. ಯಾವುದೇ ನಿಯಮಗಳಿಂದ ಆ ಸಮುದಾಯಕ್ಕೆ ಉಪಯೋಗ ಆಗುತ್ತಿಲ್ಲ ಎಂದು ದೂರಿದರು.
ಸಮಾವೇಶದಲ್ಲಿ ದೇವೇಗೌಡರ ಬಗ್ಗೆ ಮಾತನಾಡೊ ನೈತಿಕತೆ ಕಾಂಗ್ರೆಸ್ ನಾಯಕರಿಗೆ ಇಲ್ಲ. ಈ ದೇಶಕ್ಕೆ ದೇವೇಗೌಡರಿಂದ ಅವರದ್ದೇ ಆದ ಕೊಡುಗೆ ಇದೆ. ಅವರು ಯಾವುದೇ ಸಮುದಾಯವನ್ನು ಕಡೆಗಣಿಸಲಿಲ್ಲ. ಎಲ್ಲಾ ಸಮುದಾಯದ ಜನರನ್ನು ಬೆಳೆಸಿದವರು ದೇವೇಗೌಡರು. ಸಾಲಾ ಮನ್ನ ಮಾಡೊ ತೀರ್ಮಾನ ಮಾಡಿದ್ದು ಕುಮಾರಸ್ವಾಮಿ. ಅವರು ಕೊಟ್ಟ ಯೋಜನೆಯಿಂದ ನಾವು ಮತ್ತೆ ಶಾಸಕರಾಗಿರುವುದು ಸಾಕ್ಷಿ ಎಂದರು.
ಜೆಡಿಎಸ್ ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಡಿ.5 ರಂದು ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಹಾಸನ ಡಿಸಿ ಕಾಣಿಸಿಕೊಂಡ ಬಗ್ಗೆ ಆಕ್ಷೇಪ ಮಾಡಿದರು. ಜಿಲ್ಲೆಯಲ್ಲಿ ಏಳಕ್ಕೆ ಏಳು ಸ್ಥಾನ ಗೆಲುತ್ತೇವೆ ಎಂದು ಕೈ ನಾಯಕರು ಹೇಳಿದ್ದಾರೆ. ಅವರ ಈ ಮಾತು ತಿರುಕನ ಕನಸು ಎಂದು ವಾಗ್ದಾಳಿ ನಡೆಸಿದರು. ಸಿಎಂ ಹಗರಣ ಮುಚ್ಚಿ ಹಾಕಲು ಈ ಸಮಾವೇಶ ಮಾಡಲಾಗಿದ್ದು, ಇದೊಂದು ರೀತಿಯಲ್ಲಿ ಹೇಳುವುದಾದರೇ ಕೊಲೆ ಮಾಡಿದವನನ್ನು ಖುಲಾಸೆ ಮಾಡಿದಂತೆ. ಈ ಇಳಿವಯಸ್ಸಿನಲ್ಲೂ ದೇವೇಗೌಡರು ಜಿಲ್ಲೆ ಮತ್ತು ರಾಜ್ಯದ ಬಗ್ಗೆ ಹೋರಾಟ ಮಾಡುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರದ ಶಾಸಕ ಎಚ್.ಪಿ.ಸ್ವರೂಪ್, ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ. ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ, ಜೆಡಿಎಸ್ ವಕ್ತಾರರಾದ ರಘು ಹೊಂಗೆರೆ ಇತರರು ಉಪಸ್ಥಿತರಿದ್ದರು.