ಡಿ.19ಕ್ಕೆ ಇಂಡಿಯಾ ಮೈತ್ರಿಕೂಟ ಸಭೆ: ಕಾಂಗ್ರೆಸ್

Update: 2023-12-11 02:34 GMT

Photo: twitter

ಹೊಸದಿಲ್ಲಿ: ಇಂಡಿಯಾ ಮೈತ್ರಿಕೂಟದ ನಾಲ್ಕನೇ ಸಭೆಯನ್ನು ರಾಷ್ಟ್ರ ರಾಜಧಾನಿಯಲ್ಲಿ ಡಿಸೆಂಬರ್ 19ಕ್ಕೆ ಆಯೋಜಿಸಲಾಗಿದೆ. ಡಿಸೆಂಬರ್ 6ಕ್ಕೆ ನಡೆಯಬೇಕಿದ್ದ ಸಭೆಯಲ್ಲಿ ಭಾಗವಹಿಸಲು ಅಸಾಧ್ಯ ಎಂದು ಕನಿಷ್ಠ ಮೂವರು ಹಿರಿಯ ಮುಖಂಡರು ಹೇಳಿದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಗಿತ್ತು.

ಕಾಂಗ್ರೆಸ್ ಪಕ್ಷದ ಸಂಪರ್ಕ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಮಾಹಿತಿ ನೀಡಿ, "ಇಂಡಿಯಾ ಮೈತ್ರಿಕೂಟದ ನಾಲ್ಕನೇ ಸಭೆಯನ್ನು 2023ನೇ ಡಿಸೆಂಬರ್ 19ರಂದು ಮಂಗಳವಾರ ಹೊಸದಿಲ್ಲಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಆಯೋಜಿಸಲಾಗಿದೆ" ಎಂದು ಹೇಳಿದ್ದಾರೆ.

ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢ ಹೀಗೆ ಪ್ರಮುಖ ಹಿಂದಿ ಭಾಷಿಕ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಅನುಭವಿಸಿದ ಬಳಿಕ ನಡೆಯುತ್ತಿರುವ ಈ ಮೊದಲ ಸಭೆಯಲ್ಲಿ, ಕಾಂಗ್ರೆಸ್ ಪಕ್ಷ "ಪ್ರಮುಖ ಧನಾತ್ಮಕ ಕಾರ್ಯಸೂಚಿ" ರೂಪಿಸುವ ಬಗ್ಗೆ ಗಮನ ಹರಿಸಲಿದೆ. ಸ್ಥಾನ ಹೊಂದಾಣಿಕೆ ಮತ್ತು ಎಲ್ಲ ಪಾಲುದಾರ ಪಕ್ಷಗಳಿಗೆ ಜಂಟಿ ಕಾರ್ಯಯೋಜನೆಯನ್ನು ರೂಪಿಸುವ ಬಗ್ಗೆಯೂ ಚರ್ಚೆ ನಡೆಯುವ ನಿರೀಕ್ಷೆ ಇದೆ.

ಡಿಸೆಂಬರ್ 17 ರಿಂದ 19ರ ವರೆಗೆ ದೆಹಲಿ ಭೇಟಿಯಲ್ಲಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಹಾರ ಸಿಎಂ ನಿತೀಶ್ ಕುಮಾರ್, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಸೇರಿದಂತೆ 26 ಪಕ್ಷಗಳ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.

"ನಾನಲ್ಲ, ನಾವು" ಎಂಬ ಏಕತೆಯ ಧ್ಯೇಯವಾಕ್ಯದಲ್ಲಿ ಮುನ್ನಡೆಯುವ ಬಗ್ಗೆ ಪಕ್ಷಗಳ ಮುಖಂಡರು ಒಮ್ಮತಕ್ಕೆ ಬರುವ ಸಾಧ್ಯತೆ ಇದೆ. ಕೇವಲ ನರೇಂದ್ರ ಮೋದಿಯವರನ್ನು ಬಿಂಬಿಸಿ ನಡೆಸುವ ಬಿಜೆಪಿ ಪ್ರಚಾರಕ್ಕೆ ಪ್ರತಿತಂತ್ರ ರೂಪಿಸುವುದು ಮಾತ್ರವಲ್ಲದೇ, ಕಾಂಗ್ರೆಸ್ ನ ಏಕಪಕ್ಷೀಯ ದೃಷ್ಟಿಕೋನದ ವಿರುದ್ಧವೂ ಕಾರ್ಯತಂತ್ರ ರೂಪಿಸಲು ಕೆಲ ಪಕ್ಷಗಳು ಮುಂದಾಗಿವೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News