ಪಶ್ಚಿಮ ದಂಡೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ 10 ಭಾರತೀಯ ಕಾರ್ಮಿಕರ ರಕ್ಷಣೆ

Update: 2025-03-07 08:00 IST
ಪಶ್ಚಿಮ ದಂಡೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ 10 ಭಾರತೀಯ ಕಾರ್ಮಿಕರ ರಕ್ಷಣೆ

PC: x.com/AgenciaAJN

  • whatsapp icon

ಗಾಝಾ: ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿಕೊಂಡಿದ್ದ ಕಾರಣದಿಂದ ಕಳೆದ ಒಂದು ತಿಂಗಳಿಂದ ಪಶ್ಚಿಮ ದಂಡೆಯಲ್ಲಿ ಸಿಲುಕಿಕೊಂಡಿದ್ದ 10 ಮಂದಿ ಭಾರತೀಯರನ್ನು ರಕ್ಷಿಸುವಲ್ಲಿ ಇಸ್ರೇಲ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಈ ಹತ್ತು ಮಂದಿ ಭಾರತೀಯ ಕಟ್ಟಡ ಕಾರ್ಮಿಕರು ನಾಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿತ್ತು.

ಕಾರ್ಮಿಕರ ಪತ್ತೆಯಾಗಿರುವುದನ್ನು ಇಸ್ರೇಲ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ದೃಢಪಡಿಸಿದೆ. "ಈ ಪ್ರಕರಣದ ಬಗ್ಗೆ ತನಿಖೆ ಇನ್ನೂ ನಡೆಯುತ್ತಿದ್ದು, ರಾಯಭಾರ ಕಚೇರಿ ಇಸ್ರೇಲ್ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದೆ. ಅವರ ಸುರಕ್ಷೆ ಮತ್ತು ಕ್ಷೇಮವನ್ನು ಖಾತರಿಪಡಿಸಲು ಮನವಿ ಮಾಡಿಕೊಳ್ಳಲಾಗಿದೆ" ಎಂದು ಕಚೇರಿ ಮೂಲಗಳು ತಿಳಿಸಿವೆ.

ಇಸ್ರೇಲ್ ನ ಜನಸಂಖ್ಯೆ ಮತ್ತು ವಲಸೆ ಪ್ರಾಧಿಕಾರದ ಪ್ರಕಾರ, ಫೆಲಸ್ತೀನಿಯರು ಉದ್ಯೋಗದ ಸುಳ್ಳು ಆಮಿಷ ಒಡ್ಡಿ ಅವರನ್ನು ಪಶ್ಚಿಮ ದಂಡೆಯ ಅಲ್-ಝಾಯೆಮ್ ಗ್ರಾಮಕ್ಕೆ ಕರೆದೊಯ್ದಿದ್ದರು. ಅವರ ಪಾಸ್ ಪೋರ್ಟ್ಗಳನ್ನು ಮುಟ್ಟುಗೋಲು ಹಾಕಿಕೊಂಡು ಇಸ್ರೇಲ್ ಗೆ ಅಕ್ರಮವಾಗಿ ನುಸುಳಿಸುವ ಪ್ರಯತ್ನ ಮಾಡಿದ್ದರು.

ಇಸ್ರೇಲ್ ನ ಜನಸಂಖ್ಯೆ ಮತ್ತು ವಲಸೆ ಪ್ರಾಧಿಕಾರದ ಅಧಿಕಾರಿಗಳು ರಾತ್ರೋರಾತ್ರಿ ಇಸ್ರೇಲ್ ರಕ್ಷಣಾ ಪಡೆ ಮತ್ತು ನ್ಯಾಯಾಂಗ ಸಚಿವಾಲಯದ ಜತೆ ಸೇರಿ ಕಾರ್ಯಾಚರಣೆ ನಡೆಸಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕಾರ್ಮಿಕರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದ್ದು, ಅವರ ಉದ್ಯೋಗ ಸ್ಥಿತಿಗತಿಯ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.

ಭಾರತೀಯ ಪಾಸ್ ಪೋರ್ಟ್ಗಳನ್ನು ವಂಚನೆ ಮಾರ್ಗದಿಂದ ಬಳಕೆ ಮಾಡುವ ಪ್ರಯತ್ನವನ್ನು ಐಡಿಎಫ್ ಪತ್ತೆ ಮಾಡಿದ್ದು, ಅವುಗಳನ್ನು ಆಯಾ ಮಾಲೀಕರಿಗೆ ಹಿಂದಿರುಗಿಸಿದೆ. ಇಸ್ರೇಲಿ ಚೆಕ್ ಪೋಸ್ಟ್ ಗಳಲ್ಲಿ ವಂಚನೆ ಮಾರ್ಗದಿಂದ ಒಳ ಪ್ರವೇಶಿಸಲು ಈ ಪಾಸ್ ಪೋರ್ಟ್ ಗಳನ್ನು ಬಳಕೆ ಮಾಡಲು ಫೆಲಸ್ತೀನ್ ಯೋಜನೆ ರೂಪಿಸಿತ್ತು ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News