ಉಕ್ರೇನ್ | ರಶ್ಯದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 21 ಮೃತ್ಯು; 83 ಮಂದಿಗೆ ಗಾಯ

Photo Credit : Ukrainian Emergency Services via AP
ಕೀವ್: ಉತ್ತರ ಉಕ್ರೇನ್ ನ ಸುಮಿ ನಗರದ ಮೇಲೆ ರವಿವಾರ ಬೆಳಿಗ್ಗೆ ರಶ್ಯ ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 21 ಮಂದಿ ಸಾವನ್ನಪ್ಪಿದ್ದು ಇತರ 83 ಮಂದಿ ಗಾಯಗೊಂಡಿರುವುದಾಗಿ ಉಕ್ರೇನ್‍ನ ಆಂತರಿಕ ಸಚಿವ ಇಹೊರ್ ಕ್ಲಿಮೆಂಕೊ ಹೇಳಿದ್ದಾರೆ.
ರಸ್ತೆಗಳು, ವಾಹನಗಳು, ಸಾರ್ವಜನಿಕ ಸಾರಿಗೆಗಳು ಹಾಗೂ ವಸತಿ ಕಟ್ಟಡಗಳನ್ನು ಗುರಿಯಾಗಿಸಿ ಉದ್ದೇಶಪೂರ್ವಕ ದಾಳಿ ನಡೆಸಲಾಗಿದೆ ಎಂದವರು ಹೇಳಿದ್ದಾರೆ.
ದಾಳಿಯನ್ನು ಖಂಡಿಸಿರುವ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ `ದುಷ್ಟರು ಮಾತ್ರ ಈ ರೀತಿ ಮಾಡಬಹುದು. `ಪಾಮ್ ಸಂಡೆ'ಯ ದಿನದಂದು ಚರ್ಚ್‍ಗೆ ಹೋಗುವ ಜನರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ' ಎಂದು ಹೇಳಿದ್ದು ನಗರದ ಪ್ರಮುಖ ರಸ್ತೆಯಲ್ಲಿ ಕಾರುಗಳು, ಬಸ್ಸುಗಳು ಬೆಂಕಿಯಿಂದ ಸುಟ್ಟುಹೋಗಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ರಶ್ಯವು ಇಂತಹ ಭಯೋತ್ಪಾದಕ ಕೃತ್ಯಗಳನ್ನು ಮುಂದುವರಿಸಲು ಬಯಸಿದ್ದು ಈ ಯುದ್ಧವನ್ನು ಆದಷ್ಟು ಸಮಯ ಮುಂದುವರಿಸುವ ಉದ್ದೇಶ ಹೊಂದಿದೆ. ಅವರ ಮೇಲೆ ಹೆಚ್ಚಿನ ಒತ್ತಡ ಹೇರದಿದ್ದರೆ ಶಾಂತಿ ಸಾಧ್ಯವಿಲ್ಲ. ಮಾತುಕತೆಯ ಮೂಲಕ ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ ವೈಮಾನಿಕ ಬಾಂಬ್ ದಾಳಿಗಳನ್ನು ತಡೆಯಲು ಸಾಧ್ಯವಿಲ್ಲ' ಎಂದು ಝೆಲೆನ್‍ಸ್ಕಿ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಮಧ್ಯೆ, ಉಕ್ರೇನ್ ಶನಿವಾರ ರಶ್ಯದ ಇಂಧನ ಮೂಲಸೌಕರ್ಯಗಳ ಮೇಲೆ ಐದು ದಾಳಿಗಳನ್ನು ನಡೆಸಿದ್ದು ಇದು ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಬಾರದು ಎಂದು ಅಮೆರಿಕ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಹೇಳಿದೆ.
► ಉಕ್ರೇನ್: ಭಾರತೀಯ ಔಷಧ ಕಂಪೆನಿಯ ಉಗ್ರಾಣಕ್ಕೆ ಅಪ್ಪಳಿಸಿದ ರಶ್ಯನ್ ಕ್ಷಿಪಣಿ
ಉಕ್ರೇನ್ ರಾಜಧಾನಿ ಕೀವ್ ನಲ್ಲಿರುವ ಭಾರತೀಯ ಔಷಧ ಸಂಸ್ಥೆ `ಕುಸುಮ್'ನ ಉಗ್ರಾಣಕ್ಕೆ ರಶ್ಯದ ಕ್ಷಿಪಣಿಯೊಂದು ಅಪ್ಪಳಿಸಿದೆ. ಇದು ಉದ್ದೇಶಪೂರ್ವಕ ದಾಳಿ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.
ಭಾರತದೊಂದಿಗೆ ವಿಶೇಷ ಸ್ನೇಹ ಎಂದು ಪ್ರತಿಪಾದಿಸುವ ರಶ್ಯವು ಭಾರತೀಯ ವ್ಯವಹಾರಗಳ ಮೇಲೆ ಉದ್ದೇಶಪೂರ್ವಕ ದಾಳಿ ನಡೆಸುತ್ತಿದೆ. ಕೀವ್ ನಲ್ಲಿ ಭಾರತೀಯ ಔಷಧ ಸಂಸ್ಥೆಯ ಉಗ್ರಾಣದ ಮೇಲೆ ದಾಳಿ ನಡೆಸಿದ ರಶ್ಯ, ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ಉದ್ದೇಶಿಸಿರುವ ಔಷಧಗಳನ್ನು ನಾಶಗೊಳಿಸಿದೆ ಎಂದು ಉಕ್ರೇನ್ ಅಧಿಕಾರಿಗಳು ಖಂಡಿಸಿದ್ದಾರೆ.
ಅಂಟೊನೊವ್ ನ ಫ್ಯಾಕ್ಟರಿ ರಶ್ಯದ ಕ್ಷಿಪಣಿಯ ಗುರಿಯಾಗಿತ್ತು ಭಾರತೀಯ ಔಷಧ ಸಂಸ್ಥೆಯ ಉಗ್ರಾಣವಲ್ಲ ಎಂದು ರಶ್ಯದ ಉನ್ನತ ಮೂಲಗಳನ್ನು ಉಲ್ಲೇಖಿಸಿ ಸಿಎನ್‍ಎನ್-ನ್ಯೂಸ್18 ವರದಿ ಮಾಡಿದೆ.