ರಶ್ಯದಾಲ್ಲಿ ಉತ್ತರ ಕೊರಿಯಾದ 30 ಯೋಧರು ಸಾವು: ವರದಿ
ಕೀವ್: ರಶ್ಯವು ತನ್ನ ಪಶ್ಚಿಮ ಕಸ್ರ್ಕ್ ಪ್ರಾಂತದಲ್ಲಿ ನಿಯೋಜಿಸಿದ್ದ ಉತ್ತರ ಕೊರಿಯಾದ ಕನಿಷ್ಟ 30 ಯೋಧರು ಉಕ್ರೇನ್ ಪಡೆಗಳ ದಾಳಿಯಲ್ಲಿ ಮೃತಪಟ್ಟಿದ್ದಾರೆ ಅಥವಾ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಸುಮಾರು ಎರಡು ತಿಂಗಳ ಹಿಂದೆ ಗಡಿಭಾಗದ ಸನಿಹದಲ್ಲಿರುವ ಕಸ್ರ್ಕ್ ಪ್ರಾಂತದಲ್ಲಿ ಉಕ್ರೇನ್ ಪಡೆ ಅನಿರೀಕ್ಷಿತ ಆಕ್ರಮಣ ನಡೆಸಿದ ಹಿನ್ನೆಲೆಯಲ್ಲಿ ಈ ಪ್ರಾಂತದಿಂದ ತನ್ನ ಪಡೆಗಳನ್ನು ರಶ್ಯ ಹಿಂದಕ್ಕೆ ಕರೆಸಿಕೊಂಡಿತ್ತು. ಬಳಿಕ ಕಸ್ರ್ಕ್ ಪ್ರಾಂತಕ್ಕೆ ಉತ್ತರ ಕೊರಿಯಾದ ಸಾವಿರಾರು ಯೋಧರನ್ನು ನಿಯೋಜಿಸಿದೆ.
ರಶ್ಯದ ಕಸ್ರ್ಕ್ ಪ್ರಾಂತದ ಪ್ಲೆಖೋವೊ, ವೊರೊಝ್‍ಬ, ಮಾರ್ಟಿನೋವ್ಕ ಗ್ರಾಮಗಳಲ್ಲಿ ಡಿಸೆಂಬರ್ 14 ಮತ್ತು 15ರಂದು ಉತ್ತರ ಕೊರಿಯಾದ ಪಡೆಗೆ ಭಾರೀ ನಷ್ಟವಾಗಿದ್ದು ಕನಿಷ್ಟ 30 ಯೋಧರು ಮೃತಪಟ್ಟಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ಉಕ್ರೇನ್‍ನ ಮಿಲಿಟರಿ ಗುಪ್ತಚರ ಇಲಾಖೆ ಹೇಳಿದೆ. ರಶ್ಯಕ್ಕೆ ಉತ್ತರ ಕೊರಿಯಾ ಸುಮಾರು 10,000 ಯೋಧರ ತುಕಡಿಯನ್ನು ರವಾನಿಸಿರುವುದಾಗಿ ಪಾಶ್ಚಿಮಾತ್ಯ ದೇಶಗಳು ಅಂದಾಜಿಸಿವೆ. ಕೀವ್ ಪ್ರಾಂತದ ಕೆಲವು ಗ್ರಾಮಗಳನ್ನು ತಮ್ಮ ಪಡೆ ಮರು ವಶಪಡಿಸಿಕೊಂಡಿರುವುದಾಗಿ ರಶ್ಯದ ರಕ್ಷಣಾ ಇಲಾಖೆ ಕಳೆದ ವಾರ ಹೇಳಿತ್ತು.