ಎಐ ತಂತ್ರಜ್ಞಾನದಿಂದ ಮಾನವಕುಲಕ್ಕೆ ವಿನಾಶಕಾರಿ ಅಪಾಯ | ಅಮೆರಿಕ ಸರಕಾರದ ವರದಿ ಎಚ್ಚರಿಕೆ
ವಾಶಿಂಗ್ಟನ್ : ಅತ್ಯಂತ ಮುಂದುವರಿದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (ಎಐ) ವು ಅಣ್ವಸ್ತ್ರಗಳಿಗೆ ಸರಿಸಮಾನವಾಗಿ ಜಾಗತಿಕ ಭದ್ರತೆಯನ್ನು ಅಸ್ಥಿರಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಮೆರಿಕ ಸರಕಾರದ ವರದಿಯೊಂದು ಎಚ್ಚರಿಕೆ ನೀಡಿದೆ.
ಮುಂದಿನ ಐದು ವರ್ಷಗಳಲ್ಲಿ ಅಥವಾ ಅದಕ್ಕಿಂತ ಶೀಘ್ರದಲ್ಲೇ ಕೃತಕ ಬುದ್ದಿಮತ್ತೆಯು ಮಾನವನಿಗೆ ಸರಿಸಮವಾಗಿ ಇಲ್ಲವೇ ಆತನನ್ನು ಮೀರಿಸುವಂತಹ ಕೆಲಸಗಳನ್ನು ಮಾಡುವ ಸಾಮರ್ಥ್ಯವನ್ನು ಪಡೆಯಲಿದೆಯೆಂದು ಅದು ಹೇಳಿದೆ. ಎಐ ತಂತ್ರಜ್ಞಾನವು ಮಾನವಕುಲವನ್ನೇ ನಾಶಪಡಿಸಬಲ್ಲದು ಎಂದು ಗ್ಲ್ಯಾಡ್ಸ್ಟೋನ್ ಎಐ ಪ್ರಕಟಿಸಿದ ವರದಿ ತಿಳಿಸಿದೆ. ಅಮೆರಿಕ ಸರಕಾರವು 2022ರಂದು ಈ ವರದಿಯನ್ನು ಸಿದ್ಧಪಡಿಸಲು ಗ್ಲ್ಯಾಡ್ಸ್ಟೋನ್ ಎಐ ಸಂಸ್ಥೆಯನ್ನು ನಿಯೋಜಿಸಿತ್ತು.
ರಾಷ್ಟ್ರೀಯ ಭದ್ರತೆಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಹೆಚ್ಚುತ್ತಿರುವ ಅಪಾಯವನ್ನು ತಡೆಗಟ್ಟಲು ಕ್ಷಿಪ್ರ ಹಾಗೂ ನಿರ್ಣಾಯಕ ಕ್ರಮವನ್ನು ಕೈಗೊಳ್ಳುವಂತೆಯೂ ವರದಿಯು ಅಮೆರಿಕ ಸರಕಾರವನ್ನು ಆಗ್ರಹಿಸಿದೆ.
ಎಐ ತಂತ್ರಜ್ಞಾನದ ಮಾದರಿಗಳನ್ನು ಬಹಿರಂಗಪಡಿಸುವುದಕ್ಕೆ ಸಂಬಂಧಿಸಿದ ಕಾನೂನು ಉಲ್ಲಂಘನೆಗಳಿಗೆ ಜೈಲು ಶಿಕ್ಷೆ ಸೇರಿದಂತೆ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸುವಂತೆಯೂ ವರದಿ ಶಿಫಾರಸು ಮಾಡಿದೆ.
ಕೃತಕ ಬುದ್ಧಿಮತ್ತೆ ಕ್ಷೇತ್ರದ ಮೂವರು ಸಂಶೋಧಕರು ಈ ವರದಿಯನ್ನು ಸಿದ್ಧಪಡಿಸಿದ್ದು, ಸರಕಾರಿ ಅಧಿಕಾರಿಗಳು ಸೇರಿದಂತೆ 200ಕ್ಕೂ ಅಧಿಕ ಮಂದಿ ತಜ್ಞರು, ಓಪನ್ ಎಐ, ಗೂಗಲ್ ಡೀಪ್ ಮೈಂಡ್, ಆಂಥ್ರೊಪಿಕ್ ಹಾಗೂ ಮೆಟಾದಂತಹ ಪ್ರಮುಖ ಕೃತಕ ಬುದ್ಧಿಮತ್ತೆ ಕಂಪೆನಿಗಳ ಉದ್ಯೋಗಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದರು.