ಸುಡಾನ್ | ಮಸೀದಿಯ ಮೇಲೆ ವೈಮಾನಿಕ ದಾಳಿ ; 7 ಮಂದಿ ಮೃತ್ಯು
Update: 2024-12-07 14:42 GMT
ಖಾರ್ಟೂಮ್ : ಸುಡಾನ್ ರಾಜಧಾನಿ ಖಾರ್ಟೂಮ್‍ನ ಶಾಂಬತ್ ಜಿಲ್ಲೆಯಲ್ಲಿ ಶುಕ್ರವಾರ ಮಸೀದಿಯ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ 7 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಉತ್ತರ ಖಾರ್ಟೂಮ್ ನಗರದ ಮಸೀದಿಯಲ್ಲಿ ಶುಕ್ರವಾರ ಮಧ್ಯಾಹ್ನದ ಪ್ರಾರ್ಥನೆ ಮುಗಿಸಿ ಹೊರಬರುತ್ತಿದ್ದ ಸಂದರ್ಭದಲ್ಲಿ ಸುಡಾನ್‍ನ ಸಶಸ್ತ್ರ ಪಡೆ ವೈಮಾನಿಕ ದಾಳಿ ನಡೆಸಿದೆ ಎಂದು ಸುಡಾನ್‍ನಲ್ಲಿ ಸಶಸ್ತ್ರ ಪಡೆ ಮತ್ತು ಅರೆ ಸೇನಾಪಡೆಯ ನಡುವೆ 19 ತಿಂಗಳಿಂದ ಮುಂದುವರಿದಿರುವ ಸಂಘರ್ಷದ ಸಂದರ್ಭ ಮಾನವ ಹಕ್ಕುಗಳ ಉಲ್ಲಂಘನೆಯ ದಾಖಲೆ ಸಂಗ್ರಹಿಸುತ್ತಿರುವ ವಕೀಲರ ಗುಂಪು ಹೇಳಿದೆ.
ಸುಡಾನ್ ಮಿಲಿಟರಿಯ ಯುದ್ಧವಿಮಾನ ಪ್ರಯೋಗಿಸಿದ ಕ್ಷಿಪಣಿ ಮಸೀದಿಗೆ ಅಪ್ಪಳಿಸಿದ್ದು ಮಸೀದಿಯ ಒಂದು ಭಾಗಕ್ಕೆ ಹಾನಿಯಾಗಿದೆ. ದಾಳಿಯಲ್ಲಿ ಹಲವರು ಗಾಯಗೊಂಡಿದ್ದು ಇದು ಮಾನವೀಯತೆಯ ವಿರುದ್ಧದ ಅಪರಾಧ ಮತ್ತು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿಕೆ ತಿಳಿಸಿದೆ.