ಗೂಢಚರ್ಯೆ ಆರೋಪ: ರಶ್ಯ ಮೂಲದ ದಂಪತಿ ಆಸ್ಟ್ರೇಲಿಯಾದಲ್ಲಿ ಬಂಧನ

Update: 2024-07-13 16:27 GMT

PC : X 

ಕ್ಯಾನ್‍ಬೆರಾ: ರಶ್ಯದಲ್ಲಿ ಜನಿಸಿ ಈಗ ಆಸ್ಟ್ರೇಲಿಯಾದ ಪೌರತ್ವ ಪಡೆದಿರುವ ದಂಪತಿಯನ್ನು ಬೇಹುಗಾರಿಕೆ ಆರೋಪದಲ್ಲಿ ಬಂಧಿಸಲಾಗಿದೆ. ಇವರು ಆಸ್ಟ್ರೇಲಿಯಾದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಪಡೆದುಕೊಳ್ಳಲು ಪ್ರಯತ್ನ ನಡೆಸುತ್ತಿದ್ದರು ಎಂದು ಆಸ್ಟ್ರೇಲಿಯಾದ ಅಧಿಕಾರಿಗಳು ಹೇಳಿದ್ದಾರೆ.

ಈ ಪ್ರಕರಣದ ಮೂಲಕ ಆಸ್ಟ್ರೇಲಿಯಾವು ರಶ್ಯ ವಿರೋಧಿ ಮತಿವಿಕಲ್ಪವನ್ನು ಪ್ರದರ್ಶಿಸಿದೆ ಎಂದು ರಶ್ಯ ಖಂಡಿಸಿದೆ. ರಶ್ಯ ವಿರೋಧಿ ಮತಿವಿಕಲ್ಪವನ್ನು ಹರಡುವುದು ಮತ್ತು ಆಡಳಿತಾರೂಢ ಲೇಬರ್ ಪಕ್ಷದ ವೈಫಲ್ಯಗಳಿಂದ ಆಸ್ಟ್ರೇಲಿಯನ್ನರ ಗಮನವನ್ನು ಬೇರೆಡೆಗೆ ತಿರುಗಿಸುವುದು ಈ ಅಭಿಯಾನದ ಸ್ಪಷ್ಟ ಉದ್ದೇಶವಾಗಿದೆ ಎಂದು ರಶ್ಯ ದೂತಾವಾಸದ ಹೇಳಿಕೆಯನ್ನು ಉಲ್ಲೇಖಿಸಿ ರಶ್ಯದ ಸುದ್ದಿಸಂಸ್ಥೆ ವರದಿ ಮಾಡಿದೆ.

ರಶ್ಯ ಮತ್ತು ಆಸ್ಟ್ರೇಲಿಯಾದ ಪೌರತ್ವ ಹೊಂದಿರುವ ಕಿರಾ ಮತ್ತು ಇಗೋರ್ ಕೊರೊಲೆವ್‍ರನ್ನು ಬ್ರಿಸ್ಬೇನ್‍ನಲ್ಲಿ ಬಂಧಿಸಲಾಗಿದೆ. ಆಸ್ಟ್ರೇಲಿಯಾ ಸೇನೆಯಲ್ಲಿ ಮಾಹಿತಿ ವ್ಯವಸ್ಥೆಗಳ ತಂತ್ರಜ್ಞೆ ಆಗಿರುವ ಕಿರಾ ರಶ್ಯಕ್ಕೆ ತೆರಳಿದ್ದರು ಮತ್ತು ತನ್ನ ಅಧಿಕೃತ ಆನ್‍ಲೈನ್ ಖಾತೆಯನ್ನು ಪ್ರವೇಶಿಸಿ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯುವಂತೆ ಆಸ್ಟ್ರೇಲಿಯಾದಲ್ಲಿದ್ದ ಪತಿಗೆ ಸೂಚಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಇತರ ಸಾರ್ವಭೌಮ ದೇಶಗಳ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸುವುದನ್ನು ರಶ್ಯ ನಿಲ್ಲಿಸಬೇಕು. ರಶ್ಯ ಪರ ಕೆಲಸ ಮಾಡುತ್ತಿದ್ದ ಗೂಢಚಾರರನ್ನು ಬಂಧಿಸುವ ಮೂಲಕ ರಶ್ಯಕ್ಕೆ ಸ್ಪಷ್ಟ ಸಂದೇಶ ರವಾನಿಸಲಾಗಿದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬಾನೆಸ್ ಶನಿವಾರ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ದಂಪತಿಯ ಪರಿಸ್ಥಿತಿಯ ಬಗ್ಗೆ ಲಿಖಿತ ಮಾಹಿತಿ ನೀಡುವಂತೆ ಆಸ್ಟ್ರೇಲಿಯಾ ಅಧಿಕಾರಿಗಳನ್ನು ಕೋರಿದ್ದು ಬಂಧಿತರಿಗೆ ಸೂಕ್ತ ರೀತಿಯ ಕಾನ್ಸುಲರ್ ನೆರವು ಒದಗಿಸಲು ನಿರ್ಧರಿಸಲಾಗಿದೆ ಎಂದು ರಶ್ಯ ಹೇಳಿದೆ. ಆಸ್ಟ್ರೇಲಿಯಾದ ಕಾಯ್ದೆ ಪ್ರಕಾರ ಗೂಡಚರ್ಯೆ ಆರೋಪ ಸಾಬೀತಾದರೆ 15 ವರ್ಷದವರೆಗೆ ಜೈಲುಶಿಕ್ಷೆ ವಿಧಿಸಬಹುದು. ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸದ ಕಾರಣ ಮುಂದಿನ ವಿಚಾರಣೆ ನಡೆಯುವ ಸೆಪ್ಟಂಬರ್ 20ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News