ಚೀನಾಕ್ಕೆ ಆಂಟನಿ ಬ್ಲಿಂಕೆನ್ ಭೇಟಿ | ಅಮೆರಿಕ-ಚೀನಾ ಪಾಲುದಾರರಾಗಬೇಕು, ಸ್ಪರ್ಧಿಗಳಲ್ಲ: ಕ್ಸಿ ಜಿಂಪಿಂಗ್

Update: 2024-04-26 17:02 GMT

ಬೀಜಿಂಗ್: ವಿಶ್ವದ ಎರಡು ಬೃಹತ್ ಆರ್ಥಿಕತೆಗಳಾದ ಅಮೆರಿಕ ಮತ್ತು ಚೀನಾಗಳು ಪಾಲುದಾರರಾಗಬೇಕು, ಸ್ಪರ್ಧಿಗಳಲ್ಲ ಎಂದು ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್ ಶುಕ್ರವಾರ ಹೇಳಿದ್ದಾರೆ.

ಚೀನಾಕ್ಕೆ ಭೇಟಿ ನೀಡಿರುವ ಅಮೆರಿಕದ ವಿದೇಶಾಂಗ ಸಚಿವ ಆಂಟನಿ ಬ್ಲಿಂಕೆನ್‍ರನ್ನು ಬೀಜಿಂಗ್‍ನ `ಗ್ರೇಟ್ ಹಾಲ್ ಆಫ್ ದಿ ಪೀಪಲ್'ನಲ್ಲಿ ಭೇಟಿಯಾದ ಕ್ಸಿಜಿಂಪಿಂಗ್, ಕಳೆದ ನವೆಂಬರ್‍ನಲ್ಲಿ ತಾನು ಸ್ಯಾನ್‍ಪ್ರಾನ್ಸಿಸ್ಕೋದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್‍ರನ್ನು ಭೇಟಿಯಾದ ಬಳಿಕ ಎರಡೂ ದೇಶಗಳು ಕೆಲವು ಧನಾತ್ಮಕ ಪ್ರಗತಿ ಸಾಧಿಸಿವೆ. ಆದರೂ ಉಭಯ ದೇಶಗಳ ನಡುವಿನ ಸಂಬಂಧದ ಕುರಿತ ಹಲವು ಸಮಸ್ಯೆಗಳು ಪರಿಹಾರವಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಲು ಈಗಲೂ ಅವಕಾಶವಿದೆ ಎಂದರು.

ಚೀನಾದ ಅಭಿವೃದ್ಧಿ, ಬೆಳವಣಿಗೆಯ ಬಗ್ಗೆ ಅಮೆರಿಕ ಧನಾತ್ಮಕ ಧೋರಣೆ ವಹಿಸುವುದಾಗಿ ತಾನು ನಿರೀಕ್ಷಿಸುತ್ತೇನೆ. ಮೂಲಭೂತ ಸಮಸ್ಯೆ ಪರಿಹಾರವಾದರೆ ಆಗ ಸಂಬಂಧಗಳು ದೃಢಗೊಳ್ಳಬಹುದು ಮತ್ತು ಉತ್ತಮವಾಗಬಹುದು ಹಾಗೂ ಪ್ರಗತಿ ಸಾಧಿಸಬಹುದು ಎಂದು ಕ್ಸಿಜಿಂಪಿಂಗ್ ಇದೇ ಸಂದರ್ಭ ಒತ್ತಿಹೇಳಿರುವುದಾಗಿ ಉನ್ನತ ಮೂಲಗಳನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ ಸಿಸಿಟಿವಿ ವರದಿ ಮಾಡಿದೆ.

ಒಂದು ವರ್ಷದೊಳಗೆ ಎರಡನೇ ಬಾರಿಗೆ ಚೀನಾಕ್ಕೆ ಭೇಟಿ ನೀಡಿರುವ ಬ್ಲಿಂಕೆನ್ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಜತೆ ಸಭೆ ನಡೆಸಿದರು. ಈ ಸಭೆ ರಚನಾತ್ಮಕವಾಗಿತ್ತು . ರಶ್ಯ, ತೈವಾನ್ ಹಾಗೂ ವ್ಯಾಪಾರ ಸಂಬಂಧಗಳ ಬಗ್ಗೆ ಉಭಯ ಮುಖಂಡರು ವಿಸ್ತøತ ಚರ್ಚೆ ನಡೆಸಿರುವುದಾಗಿ ವರದಿಯಾಗಿದೆ. ಸಭೆಯ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, ಕಳೆದ ವರ್ಷ ಬೈಡನ್ ಮತ್ತು ಜಿಂಪಿಂಗ್ ನಡುವೆ ನಡೆದ ಸಭೆಯ ಬಳಿಕ ಎರಡೂ ದೇಶಗಳ ಸಂಬಂಧ ಸ್ಥಿರಗೊಳ್ಳಲು ಆರಂಭಿಸಿದೆ. ಆದರೆ ಇದೇ ವೇಳೆ, ದ್ವಿಪಕ್ಷೀಯ ಸಂಬಂಧಗಳಲ್ಲಿ ಕೆಲವು ನಕಾರಾತ್ಮಕ ವಿಷಯಗಳು ಈಗಲೂ ಹೆಚ್ಚುತ್ತಿವೆ. ಅಭಿವೃದ್ಧಿ ಹೊಂದುವ ಚೀನಾದ ನ್ಯಾಯಸಮ್ಮತ ಹಕ್ಕುಗಳನ್ನು ಕಾರಣವಿಲ್ಲದೆ ನಿಗ್ರಹಿಸಲು ಪ್ರಯತ್ನಿಸಲಾಗುತ್ತಿದೆ ಮತ್ತು ನಮ್ಮ ಪ್ರಮುಖ ಹಿತಾಸಕ್ತಿಗಳಿಗೆ ಸವಾಲು ಹೆಚ್ಚಿದೆ ಎಂದರು. ಉಭಯ ದೇಶಗಳೂ ಪರಸ್ಪರರ ಪ್ರಮುಖ ಹಿತಾಸಕ್ತಿಗಳನ್ನು ಗೌರವಿಸಲು ಆದ್ಯತೆ ನೀಡಬೇಕು ಎಂದು ಇದೇ ಸಂದರ್ಭ ವಾಂಗ್ ಯಿ ಆಗ್ರಹಿಸಿದರು ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News