ಹಮಾಸ್ ನಾಯಕನ ಹತ್ಯೆ | ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿ
ಗಾಝಾ : ಫೆಲೆಸ್ತೀನ್ ನ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಹತ್ಯೆ ನಂತರ ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿ ಸೃಷ್ಟಿಯಾಗಿದೆ. ಇರಾನ್ ಈಗಾಗಲೇ ಇಸ್ರೇಲ್ ಮೇಲೆ ದಾಳಿ ಮಾಡುವುದಾಗಿ ಬಹಿರಂಗವಾಗಿ ಘೋಷಿಸಿದೆ.
ಈ ಮಧ್ಯೆ ಈ ವಾರವೇ ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸಲು ಮುಂದಾಗಿದೆ ಎಂಬ ವರದಿ ಹೊರಬಂದಿದೆ. ಅಮೆರಿಕ ಈ ಬಗ್ಗೆ ಪಶ್ಚಿಮದ ದೇಶಗಳಿಗೆ ಎಚ್ಚರಿಕೆಯನ್ನೂ ನೀಡಿದೆ. ಪಶ್ಚಿಮ ದೇಶಗಳು ಇರಾನ್‌ನ ದೊಡ್ಡ ದಾಳಿಗಳಿನ್ನು ಎದುರಿಸಲು ಸಿದ್ಧವಾಗಿರಬೇಕು ಎಂದು ಶ್ವೇತ ಭವನ ಎಚ್ಚರಿಸಿದೆ.
ಇಸ್ರೇಲ್ ಮೇಲಿನ ಯಾವುದೇ ದಾಳಿ ನೀವು ಅಂದಾಜಿಸಿದ್ದಕ್ಕಿಂತ ದೊಡ್ಡ ಅನಾಹುತ ತರಲಿದೆ ಎಂದು ಅಮೆರಿಕ, ಬ್ರಿಟನ್ ಮತ್ತಿತರ ಪ್ರಭಾವೀ ದೇಶಗಳು ಇರಾನ್ ಗೆ ಹೇಳಿವೆ. ಯಾವುದೇ ಕಾರಣಕ್ಕೂ ಇಸ್ರೇಲ್ ಮೇಲೆ ದಾಳಿ ಮಾಡಬಾರದು ಎಂದು ಇರಾನ್ ಗೆ ಅಮೆರಿಕ ಹಾಗೂ ಬ್ರಿಟನ್ ಕರೆ ನೀಡಿವೆ. ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಇರಾನ್ ಅಧ್ಯಕ್ಷರಿಗೆ ಫೋನ್ ಮಾಡಿ ಇಸ್ರೇಲ್ ಮೇಲೆ ಯಾವುದೇ ದಾಳಿ ಮಾಡಬೇಡಿ ಎಂದು ಹೇಳಿದ್ದಾರೆ.
ಅದಾಗಲೇ ಪರೋಕ್ಷ ಯುದ್ಧ ಶುರು ಮಾಡಿರುವ ಇರಾನ್ ಹಿಜ್ಬುಲ್ಲಾ ಮೂಲಕ ಇಸ್ರೇಲ್ ಮೇಲೆ ದಾಳಿ ನಡೆಸುತ್ತಿದೆ. ಲೆಬನಾನ್ ಮೂಲದ ಹಿಜ್ಬುಲ್ಲಾ ಈಗಾಗಲೇ ಇಸ್ರೇಲ್ ಮೇಲೆ 10 ದಾಳಿಗಳನ್ನು ನಡೆಸಿದ್ದಾಗಿ ಘೋಷಿಸಿದೆ. ಇಸ್ರೇಲ್ ನ ಸೇನೆ IDFನ ಮೈಕೆಲ್ ಅಲೋನ್ ಬೇಸ್ ಮೇಲೆ ದಾಳಿ ನಡೆಸಿರುವುದಾಗಿ ಹಿಜ್ಬುಲ್ಲಾ ಹೇಳಿಕೊಂಡಿದೆ.
ಆ ಮೂಲಕ ಇಸ್ರೇಲ್ ಗೆ ಮೊದಲು ಪರೋಕ್ಷ ಪೆಟ್ಟು ಕೊಟ್ಟು ನಂತರ ನೇರವಾಗಿ ದಾಳಿ ಮಾಡುವ ಯೋಜನೆಯಲ್ಲಿ ಇರಾನ್ ಇದೆ ಎಂದು ವರದಿಗಳು ತಿಳಿಸುತ್ತಿವೆ. ಇಸ್ರೇಲ್ ಮೇಲೆ ಯಾವುದೇ ಕ್ಷಣದಲ್ಲಾದರೂ ದಾಳಿ ಮಾಡುವ ನಿರ್ಧಾರಗೊಂಡಿರುವ ಇರಾನ್ ತನ್ನ ನೂತನ ಸಚಿವ ಸಂಪುಟಕ್ಕೆ ಹಲವರ ನಾಮನಿರ್ದೇಶನ ಮಾಡಿರುವುದು ಸಂಚಲನ ಸೃಷ್ಟಿಸಿದೆ.
ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು F-14 ಟಾಮ್‌ಕ್ಯಾಟ್ ಪೈಲಟ್ ಜನರಲ್ ಅಝೀಝ್ ನಾಸಿರ್ ಝಾದೆ ಅವರನ್ನು ರಕ್ಷಣಾ ಸಚಿವರಾಗಿ ಹೆಸರಿಸಿದ್ದಾರೆ. ಅಝೀಝ್ 2018 ರಿಂದ 2021ರವರೆಗೆ ಇರಾನ್ ವಾಯುಪಡೆಯ ಮುಖ್ಯಸ್ಥರಾಗಿದ್ದರು. ಇರಾನ್ ನ ವಾಯುಪಡೆಯ ಸದಸ್ಯರೊಬ್ಬರು ಇಡೀ ರಕ್ಷಣಾ ಸಚಿವಾಲಯದ ಮುಖ್ಯಸ್ಥರಾಗಿರುವುದು ಇದೇ ಮೊದಲ ಬಾರಿಗೆ.
ತನ್ನ ನೌಕಾಪಡೆಯು ಸ್ಫೋಟಕ ಸಿಡಿತಲೆಗಳೊಂದಿಗೆ ಸುಸಜ್ಜಿತವಾದ ನೂತನ ಕ್ರೂಸ್ ಕ್ಷಿಪಣಿಗಳನ್ನು ಹೊಂದಿರುವುದಾಗಿ ಇರಾನಿಯನ್ ರೆವೆಲ್ಯೂಶನರಿ ಗಾರ್ಡ್ಸ್ ತಿಳಿಸಿದೆ.
ಶನಿವಾರ ಪೂರ್ವ ಗಾಝಾದ ವಸತಿ ಶಾಲೆಯ ಮೇಲೆ ಏಕಾಏಕಿ ಇಸ್ರೇಲ್, ದಾಳಿ ನಡೆಸಿದ ಘಟನೆಯಲ್ಲಿ 100ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಈ ಘಟನೆಗೂ ಒಂದು ವಾರ ಹಿಂದೆಯೂ ಇದೇ ರೀತಿ ಗಾಝಾದ ಮೂರು ಶಾಲೆಗಳ ಮೇಲೆ ಇಸ್ರೇಲ್ ಮಾರಕ ಹಲ್ಲೆ ನಡೆಸಿ, 300ಕ್ಕೂ ಅಧಿಕ ಜನರ ಪ್ರಾಣವನ್ನು ಕಸಿದುಕೊಂಡಿತ್ತು. ಇಸ್ರೇಲ್ ನ ಕ್ರೂರ ದಾಳಿಗಳು ನಡೆಯುತ್ತಿದ್ದಂತೆಯೇ ಇಸ್ರೇಲ್ ವಿರುದ್ಧ ಇರಾನ್ ಭಾರೀ ದಾಳಿ ನಡೆಸಲು ಸಜ್ಜಾಗಿದೆ ಎಂದು ಅಮೆರಿಕಾದ ಶ್ವೇತಭವನ ಮಾಹಿತಿ ಹಂಚಿಕೊಂಡಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಪಶ್ಚಿಮ ದೇಶಗಳ ನಾಯಕರನ್ನು ಕರೆದು ಇಸ್ರೇಲ್ ಮೇಲೆ ದಾಳಿ ಮಾಡುವ ಇರಾನ್ ಬೆದರಿಕೆ ಸೇರಿದಂತೆ ಪ್ರದೇಶದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಬ್ರಿಟನ್, ಫ್ರಾನ್ಸ್, ಜರ್ಮನಿ ಮತ್ತು ಇಟಲಿ ನಾಯಕರೊಂದಿಗೆ ಜೋ ಬೈಡನ್ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ ಎಂದು ಶ್ವೇತಭವನದ ವಕ್ತಾರ ಜಾನ್ ಕಿರ್ಬಿ ತಿಳಿಸಿದ್ದಾರೆ.
ಅಮೆರಿಕಾ ಇಸ್ರೇಲ್ ರಕ್ಷಣೆಗಾಗಿ ಪೂರ್ವ ಮೆಡಿಟರೇನಿಯನ್‌ಗೆ ನೌಕಾಪಡೆಯ ದಾಳಿ ಗುಂಪನ್ನು ನಿಯೋಜಿಸಿರುವುದಾಗಿಯೂ ವರದಿಗಳು ತಿಳಿಸಿವೆ. ಈ ನಡುವೆ ಯುನೈಟೆಡ್ ಕಿಂಗ್ ಡಮ್ ನ ನೂತನ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಮಧ್ಯ ಪ್ರಾಚ್ಯದ ಬೆಳವಣಿಗೆಗಳ ಕುರಿತು ಅಮೆರಿಕ, ಫ್ರಾನ್ಸ್, ಜರ್ಮನಿ ಹಾಗೂ ಇಟಲಿ ನಾಯಕರ ಜೊತೆ ಮಾತಾಡಿದ್ದೇನೆ. ಪರಿಸ್ಥಿತಿ ತಿಳಿಗೊಳಿಸಲು ಹಾಗೂ ಗಾಝಾದಲ್ಲಿ ಅಪಹೃತರ ಬಿಡುಗಡೆ ಹಾಗೂ ಕದನ ವಿರಾಮದ ಪ್ರಯತ್ನಗಳಿಗೆ ನನ್ನ ಸಂಪೂರ್ಣ ಬೆಂಬಲ ಇರುವುದಾಗಿ ತಿಳಿಸಿದ್ದೇನೆ ಎಂದು ಎಕ್ಸ್ ನಲ್ಲಿ ಹೇಳಿದ್ದಾರೆ.