ರಾಖೈನ್‍ ನಲ್ಲಿ ಮ್ಯಾನ್ಮಾರ್ ಮಿಲಿಟರಿಯ ಬಾಂಬ್ ದಾಳಿ : 40ಕ್ಕೂ ಅಧಿಕ ಮೃತ್ಯು

Update: 2025-01-11 15:12 GMT

PC : aljazeera.com 

ಯಾಂಗಾನ್ : ಮ್ಯಾನ್ಮಾರ್‍ ನ ರಾಖೈನ್ ರಾಜ್ಯದಲ್ಲಿ ಮಿಲಿಟರಿ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 40 ಮಂದಿ ಮೃತಪಟ್ಟಿದ್ದು 500ಕ್ಕೂ ಅಧಿಕ ಮನೆಗಳು ನಾಶಗೊಂಡಿವೆ ಎಂದು ವಿಶ್ವಸಂಸ್ಥೆ ಹೇಳಿದೆ.

ಮಿಲಿಟರಿ ಸರಕಾರದ ಪಡೆಗಳು ರಾಮ್ರೀ ದ್ವೀಪದ ಕಯುಕ್ ನಿಮಾವ್ ಗ್ರಾಮದ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ 40ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು ಕನಿಷ್ಟ 12 ಮಂದಿ ಗಾಯಗೊಂಡಿದ್ದಾರೆ. 500ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ ಎಂದು ವಿಶ್ವಸಂಸ್ಥೆಯ ಹೇಳಿಕೆ ತಿಳಿಸಿದೆ. 2021ರಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಚುನಾಯಿತಗೊಂಡಿದ್ದ ಆಂಗ್ ಸಾನ್ ಸೂಕಿ ನೇತೃತ್ವದ ಸರಕಾರವನ್ನು ಕ್ಷಿಪ್ರದಂಗೆಯ ಮೂಲಕ ಪದಚ್ಯುತಗೊಳಿಸಿದ್ದ ಸೇನೆ ಅಧಿಕಾರವನ್ನು ವಶಪಡಿಸಿಕೊಂಡಿದೆ. ಬಳಿಕ ಸೇನಾಡಳಿತದ ವಿರುದ್ಧ ಆರಂಭಗೊಂಡ ವ್ಯಾಪಕ ಪ್ರತಿಭಟನೆ ಗಡಿಭಾಗಗಳಲ್ಲಿ ಸಶಸ್ತ್ರ ಬಂಡಾಯ ಚಟುವಟಿಕೆಯಾಗಿ ಮಾರ್ಪಟ್ಟಿದ್ದು ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ.

ಇತ್ತೀಚಿನ ದಿನಗಳಲ್ಲಿ ರಾಖೈನ್‍ನಲ್ಲಿ ಸಂಘರ್ಷ ಉಲ್ಬಣಗೊಂಡಿದ್ದು ಇದಕ್ಕೆ ನಾಗರಿಕರು ಹೆಚ್ಚಿನ ಬೆಲೆ ತೆರಬೇಕಿದೆ. ರಾಖೈನ್‍ ನಲ್ಲಿ ಹತರಾದವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ತೀವ್ರ ಆಹಾರದ ಅಭದ್ರತೆ ಮತ್ತು ನಿರ್ಣಾಯಕ ಸಾರ್ವಜನಿಕ ಸೇವೆಗಳ ಸಂಪೂರ್ಣ ಕುಸಿತದಿಂದಾಗಿ ನಾಗರಿಕರು ತೀವ್ರ ಅಪಾಯಗಳನ್ನು ಎದುರಿಸುತ್ತಿದ್ದಾರೆ ಎಂದು ಮ್ಯಾನ್ಮಾರ್‍ನಲ್ಲಿರುವ ವಿಶ್ವಸಂಸ್ಥೆ ಮಾನವೀಯ ಕಾರ್ಯಗಳ ಸಂಯೋಜಕರು ವರದಿ ಮಾಡಿದ್ದಾರೆ.

ಸಂಬಂಧಿಸಿದ ಎಲ್ಲರೂ ಅಂತರಾಷ್ಟ್ರೀಯ ಮಾನವೀಯ ಕಾನೂನಿನಡಿ ತಮ್ಮ ಜವಾಬ್ದಾರಿಗಳಿಗೆ ಬದ್ಧವಾಗಿರಬೇಕು.

ಅತ್ಯಂತ ದುರ್ಬಲರಿಗೆ ಸಹಾಯವನ್ನು ತಲುಪಿಸಲು ಅಡೆತಡೆಯಿಲ್ಲದೆ ಮಾನವೀಯ ಪ್ರವೇಶವನ್ನು ಖಾತರಿ ಪಡಿಸಬೇಕು ಎಂದು ವಿಶ್ವಸಂಸ್ಥೆ ಆಗ್ರಹಿಸಿದೆ.

ಈ ಮಧ್ಯೆ, ಮಿಲಿಟರಿ ಸರಕಾರಕ್ಕೆ ಆದಾಯದ ಮೂಲಗಳನ್ನು ಕಡಿತಗೊಳಿಸಲು ಕಾರ್ಯನಿರ್ವಹಿಸುವ `ದಿ ಬ್ಲಡ್ ಮನಿ ಕ್ಯಾಂಪೇನ್' ಎಂಬ ಮಾನವ ಹಕ್ಕುಗಳ ಕಾರ್ಯಕರ್ತರ ಸಂಘಟನೆಯು ಸರಕಾರಕ್ಕೆ ವೈಮಾನಿಕ ತೈಲ ಸರಬರಾಜು ಮಾಡುತ್ತಿರುವ ಸಂಸ್ಥೆಗಳನ್ನು ನಿರ್ಬಂಧಿಸುವಂತೆ ಅಂತರಾಷ್ಟ್ರೀಯ ಸರಕಾರಗಳನ್ನು ಆಗ್ರಹಿಸಿದೆ. ಸೇನಾಡಳಿತಕ್ಕೆ ವೈಮಾನಿಕ ತೈಲ ಸರಬರಾಜು ಸ್ಥಗಿತಗೊಂಡರೆ ಮಾತ್ರ ಬಾಂಬ್ ದಾಳಿ ಕೊನೆಗೊಳ್ಳುತ್ತದೆ ಎಂದು ಸಂಘಟನೆಯ ವಕ್ತಾರರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಮ್ಯಾನ್ಮಾರ್‍ನಲ್ಲಿ ಮುಂದುವರಿದಿರುವ ಸಂಘರ್ಷದಿಂದ 3.5 ದಶಲಕ್ಷಕ್ಕೂ ಅಧಿಕ ಮಂದಿ ಸ್ಥಳಾಂತರಗೊಂಡಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಇದು 1.5 ದಶಲಕ್ಷದಷ್ಟು ಅಧಿಕವಾಗಿದೆ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ.

ತನ್ನ ಪಡೆಗಳು ನಾಗರಿಕರ ವಿರುದ್ಧ ದೌರ್ಜನ್ಯ ಎಸಗುತ್ತಿವೆ ಎಂಬ ಆರೋಪವನ್ನು ಸರಕಾರ ತಿರಸ್ಕರಿಸಿದ್ದು, ಭಯೋತ್ಪಾದಕರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳುತ್ತಿರುವುದಾಗಿ ಪ್ರತಿಪಾದಿಸಿದೆ. ಮ್ಯಾನ್ಮಾರ್‍ ನ ಗಡಿಭಾಗದ ಹಲವು ಪ್ರದೇಶಗಳನ್ನು `ಅರಾಕನ್ ಆರ್ಮಿ(ಎಎ), ಕರೆನ್ ನ್ಯಾಷನಲ್ ಯೂನಿಯನ್ ಮತ್ತು ಕಚಿನ್ ಇಂಡಿಪೆಂಡೆನ್ಸ್ ಆರ್ಮಿ' ಸೇರಿದಂತೆ ವಿವಿಧ ಬಂಡುಗೋರ ಗುಂಪುಗಳು ವಶಪಡಿಸಿಕೊಂಡಿದೆ.

* ರಾಖೈನ್ ರಾಜ್ಯದಲ್ಲಿ ಅರಾಕನ್ ಆರ್ಮಿಯ ಪ್ರಾಬಲ್ಯ

ಮ್ಯಾನ್ಮಾರ್‍ನ ಪಶ್ಚಿಮದ ರಾಖೈನ್ ರಾಜ್ಯದಲ್ಲಿ ಹೊಸ ಸಶಸ್ತ್ರ ಬುಡಕಟ್ಟು ಹೋರಾಟಗಾರರ ಗುಂಪು ಅರಾಕನ್ ಆರ್ಮಿ(ಎಎ) ಪ್ರಾಬಲ್ಯ ಸಾಧಿಸಿದ್ದು 15 ನಗರಗಳನ್ನು ವಶಕ್ಕೆ ಪಡೆದಿದೆ. ಮಧ್ಯ ರಾಖೈನ್‍ನ ಆ್ಯನ್ ಪಟ್ಟಣದಲ್ಲಿರುವ ಮ್ಯಾನ್ಮಾರ್ ಮಿಲಿಟರಿಯ ಪಶ್ಚಿಮ ಪ್ರಾದೇಶಿಕ ಕಮಾಂಡ್ ಪ್ರಧಾನ ಕಚೇರಿಯೂ ಎಎ ನಿಯಂತ್ರಣಕ್ಕೆ ಬಂದಿದ್ದು ಸೇನಾಡಳಿತಕ್ಕೆ ತೀವ್ರ ಹಿನ್ನಡೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News