ಚೀನಾದ ಹೋಟೆಲ್ನಲ್ಲಿ ಸ್ಫೋಟ ಇಬ್ಬರು ಮೃತ್ಯು; 26 ಮಂದಿಗೆ ಗಾಯ
ಬೀಜಿಂಗ್, ಮಾ.13: ಉತ್ತರ ಚೀನಾದ ಹೋಟೆಲ್ನಲ್ಲಿ ಬುಧವಾರ ನಡೆದ ಪ್ರಬಲ ಸ್ಫೋಟದಲ್ಲಿ ಕನಿಷ್ಟ 2 ಮಂದಿ ಮೃತಪಟ್ಟಿದ್ದು ಇತರ 26 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಹೆಬೆಯ್ ಪ್ರಾಂತದ ಸಾಹ್ನೆ ನಗರದಲ್ಲಿರುವ ಹೋಟೆಲ್ ಬಳಿಯ ಹುರಿದ ಕೋಳಿ ಮಾಂಸ(ಚಿಕನ್ ಫ್ರೈ)ದ ಅಂಗಡಿಯಲ್ಲಿ ಗ್ಯಾಸ್ ಸೋರಿಕೆಯಿಂದ ಸ್ಫೋಟ ಸಂಭವಿಸಿದ್ದು ಕಟ್ಟಡಕ್ಕೆ ತೀವ್ರ ಹಾನಿಯಾಗಿದೆ. ಆ ಸಂದರ್ಭ ಹೋಟೆಲ್ನಲ್ಲಿ ಹೆಚ್ಚಿನ ಸಂಖ್ಯೆಯ ಗ್ರಾಹಕರಿದ್ದರು. ಇಬ್ಬರು ಸಾವನ್ನಪ್ಪಿದ್ದು ಇತರ 26 ಮಂದಿ ಗಾಯಗೊಂಡಿದ್ದಾರೆ. ಬೆಂಕಿಯನ್ನು ನಿಯಂತ್ರಿಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ಸ್ಫೋಟದ ತೀವ್ರತೆಗೆ ಕಟ್ಟಡ ಕುಸಿದು ಬೀಳುತ್ತಿರುವ, ಹೋಟೆಲ್ ಎದುರು ನಿಲ್ಲಿಸಿರುವ ಹಲವು ವಾಹನಗಳಿಗೆ ಹಾನಿಯಾಗಿರುವ ಮತ್ತು ಕಟ್ಟಡದ ಅವಶೇಷಗಳು ರಸ್ತೆಯ ಮೇಲೆ ಹಾರಿ ಬೀಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬೆಂಕಿಯನ್ನು ನಂದಿಸಲು 36 ಅಗ್ನಿಶಾಮಕ ವಾಹನಗಳು ಹಾಗೂ 154 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.