ರಫಾದಲ್ಲಿ ವಿಶ್ವಸಂಸ್ಥೆ ಸಿಬ್ಬಂದಿ ಮೇಲೆ ದಾಳಿ | ಟ್ಯಾಂಕ್‍ನಿಂದ ಸಿಡಿದ ಮಾರಕಾಸ್ತ್ರ ವಾಹನಕ್ಕೆ ಅಪ್ಪಳಿಸಿದೆ: ವಿಶ್ವಸಂಸ್ಥೆ
ಗಾಝಾ : ಸೋಮವಾರ ಗಾಝಾದಲ್ಲಿ ವಿಶ್ವಸಂಸ್ಥೆಯ ಸಿಬ್ಬಂದಿಗಳು ಪ್ರಯಾಣಿಸುತ್ತಿದ್ದ ವಾಹನಕ್ಕೆ ಅಪ್ಪಳಿಸಿದ ಮಾರಕಾಸ್ತ್ರವು, ಆ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದ ಟ್ಯಾಂಕ್‍ನಿಂದ ಸಿಡಿದಿರುವುದು ಸ್ಪಷ್ಟವಾಗಿದೆ ಎಂದು ವಿಶ್ವಸಂಸ್ಥೆಯ ಅಧಿಕಾರಿ ಫರ್ಹಾನ್ ಹಕ್ ಹೇಳಿದ್ದಾರೆ.
ವಿಶ್ವಸಂಸ್ಥೆಯ ಸಿಬ್ಬಂದಿಗಳು ಪ್ರಯಾಣಿಸುತ್ತಿದ್ದ ಬಿಳಿಬಣ್ಣದ ಕಾರಿನ ಹಿಂಭಾಗಕ್ಕೆ ಮಾರಕಾಸ್ತ್ರ ಅಪ್ಪಳಿಸಿದೆ. ಭಾರತೀಯ ಮೂಲದ ಅಧಿಕಾರಿ ವೈಭವ್ ಕಾಳೆ ಮೃತಪಟ್ಟರೆ ಮಹಿಳಾ ಸಿಬ್ಬಂದಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹಕ್ ಸುದ್ದಿಗೋಷ್ಠಿಯಲ್ಲಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಈ ವಲಯದಲ್ಲಿ ಇಸ್ರೇಲ್ ಟ್ಯಾಂಕ್‍ಗಳು ಮಾತ್ರ ಇದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಹಕ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. `ಇದು ಸುರಕ್ಷಿತ ಊಹೆ ಎಂದು ಭಾವಿಸುತ್ತೇನೆ. ಈ ಹಂತದಲ್ಲಿ ಹೊಡೆತ ಎಲ್ಲಿಂದ ಬಂದಿವೆ, ಯಾವ ಸನ್ನಿವೇಶ ಇತ್ಯಾದಿಗಳ ಬಗ್ಗೆ ನಮಗೆ ಸಂದೇಹವಿಲ್ಲ. ಈ ಘಟನೆ ಹೇಗೆ ಸಂಭವಿಸಿತು ಮತ್ತು ಅದರ ಸ್ವರೂಪವನ್ನು ನಿಖರವಾಗಿ ನಿರ್ಧರಿಸಲು ನಾವು ಇಸ್ರೇಲ್‍ನೊಂದಿಗೆ ಚರ್ಚೆ ನಡೆಸುತ್ತಿದ್ದೇವೆ. ಪ್ರಕರಣದ ತನಿಖೆಗೆ ವಿಶ್ವಸಂಸ್ಥೆಯ ಸತ್ಯಶೋಧನಾ ಸಮಿತಿಯನ್ನು ರಚಿಸಿದೆ' ಎಂದವರು ಹೇಳಿದ್ದಾರೆ.
ಈ ಮಧ್ಯೆ, ಇಸ್ರೇಲ್ ಮಿಲಿಟರಿ ನಡೆಸಿದ ಪ್ರಾಥಮಿಕ ತನಿಖೆಯ ವರದಿಯಲ್ಲಿ `ಸಕ್ರಿಯ ಸಂಘರ್ಷ ವಲಯವೆಂದು ಘೋಷಿಸಲಾದ ಪ್ರದೇಶದಲ್ಲಿ ವಾಹನವಿತ್ತು. ವಾಹನ ಸಾಗುವ ಮಾರ್ಗದ ಬಗ್ಗೆ ಇಸ್ರೇಲ್ ಭದ್ರತಾ ಪಡೆ(ಐಡಿಎಫ್)ಗೆ ಮಾಹಿತಿ ಇರಲಿಲ್ಲ' ಎಂದು ತಿಳಿಸಿದ್ದು ದಾಳಿಯ ಹೊಣೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ' ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.