ಆಸ್ಟ್ರೇಲಿಯಾ | ವಲಸಿಗರ ನಿರ್ಬಂಧ ಕಾನೂನು ರದ್ದುಗೊಳಿಸಿದ ಹೈಕೋರ್ಟ್

Update: 2024-11-06 21:39 IST
Photo of Australia High Court

ಆಸ್ಟ್ರೇಲಿಯಾದ ಹೈಕೋರ್ಟ್ | PC:  hcourt.gov.au/ 

  • whatsapp icon

ಮೆಲ್ಬೋರ್ನ್: ವಲಸಿಗರು ಇಲೆಕ್ಟ್ರಾನಿಕ್ಸ್ ಟ್ರ್ಯಾಕಿಂಗ್ ಬ್ರೇಸ್‍ಲೆಟ್‍ಗಳನ್ನು ಧರಿಸುವುದನ್ನು ಕಡ್ಡಾಯಗೊಳಿಸುವ ಕಾನೂನನ್ನು ಆಸ್ಟ್ರೇಲಿಯಾದ ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ.

ವಲಸಿಗರ ಚಲನವಲನದ ಮೇಲೆ ನಿಗಾ ಇರಿಸಲು ಟ್ರ್ಯಾಕಿಂಗ್ ಬ್ರೇಸ್‍ಲೆಟ್ ಧರಿಸುವಂತೆ ಅಥವಾ ಕಫ್ರ್ಯೂಗಳನ್ನು ಅನುಸರಿಸುವಂತೆ ಕಾನೂನುಗಳಿಂದ ಬಲವಂತಪಡಿಸಲಾಗದು ಎಂದು ಹೈಕೋರ್ಟ್ ತೀರ್ಪು ನೀಡಿದೆ.

ಈ ತೀರ್ಪು ಸರಕಾರಕ್ಕೆ ದೊಡ್ಡ ಹಿನ್ನಡೆಯಾಗಿದೆ. ಕಫ್ರ್ಯೂಗಳನ್ನು ಹೇರುವ ಮತ್ತು ಟ್ರ್ಯಾಕಿಂಗ್ ತಂತ್ರಜ್ಞಾನವು ಸಮುದಾಯವನ್ನು ರಕ್ಷಿಸಲು ಅಗತ್ಯವಾಗಿದೆ ಎಂಬ ಸರಕಾರದ ಪರ ವಕೀಲರ ವಾದವನ್ನು ಹೈಕೋರ್ಟ್‍ನ 7 ಸದಸ್ಯರ ನ್ಯಾಯಪೀಠ ತಳ್ಳಿಹಾಕಿದೆ. ಕ್ರಿಮಿನಲ್ ಹಿನ್ನೆಲೆಯ ಕಾರಣಕ್ಕೆ 100ಕ್ಕೂ ಅಧಿಕ ವಲಸಿಗರ ಮೇಲೆ ವಿಧಿಸಿರುವ ಕಠಿಣ ನಿರ್ಬಂಧಗಳು ಅಸಾಂವಿಧಾನಿಕವಾಗಿದೆ. ಏಕೆಂದರೆ ಷರತ್ತುಗಳು ಶಿಕ್ಷೆಗೆ ಸಮವಾಗಿವೆ ಎಂದು ನ್ಯಾಯಪೀಠದ ಐವರು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

ಗಡೀಪಾರು ಮಾಡುವಿಕೆಗೆ ಪರ್ಯಾಯವಾಗಿ ನಾಗರಿಕಲ್ಲದವರನ್ನು ಅನಿರ್ದಿಷ್ಟ ಅವಧಿಗೆ ಬಂಧಿಸಲು ಸಾಧ್ಯವಿಲ್ಲ ಎಂದು ಕಳೆದ ಡಿಸೆಂಬರ್ ನಲ್ಲಿ ಹೈಕೋರ್ಟ್ ತೀರ್ಪು ನೀಡಿದ ಬಳಿಕ ವಲಸಿಗರನ್ನು ನಿರ್ಬಂಧಿಸುವ ಕಾನೂನನ್ನು ಸರಕಾರ ತರಾತುರಿಯಲ್ಲಿ ಅಂಗೀಕರಿಸಿತ್ತು. ಇದೀಗ ಬುಧವಾರದ ಹೈಕೋರ್ಟ್ ತೀರ್ಪಿನಂತೆ, ಕ್ರಿಮಿನಲ್ ಹಿನ್ನೆಲೆಯಿರುವ 200ಕ್ಕೂ ಅಧಿಕ ವಲಸಿಗರ ಚಲನವಲನದ ಮೇಲೆ ಇಲೆಕ್ಟ್ರಾನಿಕ್ಸ್ ಸಾಧನಗಳ ಮೂಲಕ ಸರಕಾರ ನಿಗಾ ವಹಿಸುವಂತಿಲ್ಲ. ಹೈಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ವ್ಯವಹಾರಗಳ ಸಚಿವ ಟೋನಿ ಬೂರ್ಕ್ `ಟ್ರ್ಯಾಕಿಂಗ್ ಸಾಧನಗಳು ಮತ್ತು ಕಫ್ರ್ಯೂಗಳನ್ನು ಬಳಸಲು ಸಾಧ್ಯವಾಗಿಸುವ ಕೆಲವು ತಿದ್ದುಪಡಿಗಳೊಂದಿಗೆ ಶಾಸನವನ್ನು ಗುರುವಾರ ಸಂಸತ್‍ನಲ್ಲಿ ಮಂಡಿಸಲಾಗುವುದು' ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News