ಮನೆಗೆಲಸದಾಕೆಗೆ 1.36 ಲಕ್ಷ ಡಾಲರ್ ಪರಿಹಾರ

Update: 2023-11-07 18:17 GMT

ಮೆಲ್ಬೋರ್ನ್: ಆಸ್ಟ್ರೇಲಿಯದಲ್ಲಿನ ಭಾರತದ ಮಾಜಿ ರಾಯಭಾರಿ ನವದೀಪ್ ಸಿಂಗ್ ಸೂರಿ ಅವರು ತಮ್ಮ ಮಾಜಿ ಮನೆಗೆಲಸದಾಕೆಗೆ ಸಾವಿರಾರು ಡಾಲರ್ ಪರಿಹಾರ ನೀಡಬೇಕೆಂದು ಆಸ್ಟ್ರೇಲಿಯನ್ ನ್ಯಾಯಾಲಯವೊಂದು ಸೋಮವಾರ ಆದೇಶಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಮಾಜಿ ರಾಯಭಾರಿ ಸೂರಿ ಅವರು ತನ್ನ ಮನೆಗೆಲಸದವಳಾಗಿದ್ದ ಸೀಮಾ ಶೆರ್ಗಿಲ್‌ಗೆ 1.36 ಲಕ್ಷ ಡಾಲರ್ ಹಾಗೂ ಬಡ್ಡಿಯನ್ನು 60 ದಿನಗಳೊಳಗೆ ನೀಡಬೇಕೆಂದು ಫೆಡರಲ್ ನ್ಯಾಯಾಧೀಶರಾದ ಎಲಿಝಬೆತ್ ರಾಪರ್ ಅವರು ಆದೇಶಿಸಿದ್ದಾರೆ. ತನ್ನ ಕೆಲಸದ ಪರಿಸ್ಥಿತಿ ಯೋಗ್ಯವಾಗಿರಲಿಲ್ಲ ಹಾಗೂ ತನಗೆ ತೀರಾ ಕಡಿಮೆ ವೇತನವನ್ನು ನೀಡಲಾಗುತ್ತಿತ್ತು ಎಂದು ಆಪಾದಿಸಿ ಸೀಮಾ ಶೆರ್ಗಿಲ್ ಆಸ್ಟ್ರೇಲಿಯ ನ್ಯಾಯಾಲಯದ ಮೆಟ್ಟಲೇರಿದ್ದರು.

ಶೆರ್ಗಿಲ್ ಅವರು 2015ರ ಏಪ್ರಿಲ್‌ನಲ್ಲಿ ಭಾರತದಿಂದ ಆಸ್ಟ್ರೇಲಿಯಕ್ಕೆ ತೆರಳಿದ್ದು, ಸೂರಿಯವರ ಕ್ಯಾನ್‌ಬೆರ್ರಾದ ನಿವಾಸದಲ್ಲಿ ಸುಮಾರು ಒಂದು ವರ್ಷ ಕಾಲ ಕೆಲಸ ಮಾಡಿದ್ದರು.

ಶೆರ್ಗಿಲ್ ಅವರು ಸರಕಾರಿ ಸೇವಾ ಸಿಬ್ಬಂದಿಯಾಗಿದ್ದು, ಸರಕಾರದ ನೀತಿಯಂತೆ ತಾನು ಆಕೆಗೆ ವೇತನವನ್ನು ಪಾವತಿಸಿರುವುದಾಗಿ ಸೂರಿ ನ್ಯಾಯಾಲಯದಲ್ಲಿ ವಾದಿಸಿದ್ದರು. ಭಾರತಕ್ಕೆ ವಾಪಾಸಾಗುವ ಬದ್ಧತೆಯನ್ನು ವ್ಯಕ್ತಪಡಿಸುವ ಮುಚ್ಚಳಿಕೆಗೆ ಆಕೆ ಸಹಿಹಾಕಲು ನಿರಾಕರಿಸಿದ್ದಳು ಹಾಗೂ ಆಕೆ ಯಾವುದೇ ನೋಟಿಸ್ ನೀಡದೆ ತನ್ನ ಮನೆಯಿಂದ ನಾಪತ್ತೆಯಾಗಿದ್ದಳೆಂದು ಸೂರಿ ಆಪಾದಿಸಿದ್ದಾರೆ.

ಆಸ್ಟ್ರೇಲಿಯ ನ್ಯಾಯಾಲಯದ ತೀರ್ಪು ಏಕಪಕ್ಷೀಯವಾಗಿದೆ ಹಾಗೂ ರಾಜತಾಂತ್ರಿಕ ಮಿಶನ್, ಸ್ಥಳೀಯ ನ್ಯಾಯಾಲಯದ ಕಾರ್ಯವ್ಯಾಪ್ತಿಗೆ ಒಳಪಡುವುದನ್ನು ಸಮ್ಮತಿಸಿದಂತಾಗಿದೆ. ಇದು ರಾಜತಾಂತ್ರಿ ಹಾಗೂ ದೂತವಾಸ ಸಂಬಂಧಗಳ ಕುರಿತ ವಿಯೆನ್ನಾ ಒಡಂಬಡಿಕೆಗಳ ಮೇಲೆ ಪರಿಣಾಮ ಬೀರಿದಂತಾಗಿದೆ. ಸೀಮಾ ಅವರು ತನ್ನ ಉದ್ಯೋಗವನ್ನು ತ್ಯಜಿಸಿದ್ದರು ಹಾಗೂ ಆಸ್ಟ್ರೇಲಿಯ ಅಧಿಕಾರಿಗಳು ಈ ವಿಷಯದಲ್ಲಿ ಏಕಪಕ್ಷೀಯ ನಿಲುವನ್ನು ಕೈಗೊಳ್ಳಕೂಡದು ಎಂದು ಭಾರತದ ರಾಯಭಾರಿ ಕಚೇರಿ ತಿಳಿಸಿದೆ.

ಸೂರಿ ಅವರ ಮನೆಕೆಲಕ್ಕೆ ನಿಯೋಜಿತರಾಗಿದ್ದ ಶೆರ್ಗಿಲ್ ಅವರನ್ನು 2016ರಲ್ಲಿ ಭಾರತಕ್ಕೆ ವಾಪಸಾಗುವಂತೆ ಸೂಚಿಸಲಾಗಿತ್ತು. ಆದರೆ ಸರಕಾರದ ಆದೇಶವನ್ನು ಆಕೆ ಉಲ್ಲಂಘಿಸಿದ್ದಳು. 2021ರಲ್ಲಿ ಆಸ್ಟ್ರೇಲಿಯ ಪೌರತ್ವವನ್ನು ಆಕೆ ಪಡೆದಿದ್ದಳು. ಆಸ್ಟ್ರೇಲಿಯದಲ್ಲಿ ಖಾಯಂ ಆಗಿ ಉಳಿಯುವ ಉದ್ದೇಶದಿಂದ ಆಕೆ ಮೊಕದ್ದಮೆ ಹೂಡಿದ್ದಳು ಎಂದು ಭಾರತೀಯ ರಾಜತಾಂತ್ರಿಕ ಮೂಲಗಳು ತಿಳಿಸಿವೆ.

ಶೆರ್ಗಿಲ್ ಅವರು ನ್ಯಾಯಾಲಯದಲ್ಲಿ ಹೂಡಿದ ದಾವೆಯಲ್ಲಿ, ತಾನು ದಿನಕ್ಕೆ 17.5 ತಾಸುಗಳಂತೆ ವಾರದಲ್ಲಿ ಏಳು ದಿನಗಳವರೆಗೂ ದುಡಿಯುತ್ತಿದ್ದೆ. ತನಗೆ ದಿನಕ್ಕೆ 7.80 ಡಾಲರ್‌ಗಳಂತೆ ವೇತನ ಪಾವತಿಸಲಾಗುತ್ತಿತ್ತು. ತಾನು ಈ ಬಗ್ಗೆ ದೂರು ನೀಡಿದ ಬಳಿಕ ತನ್ನ ವೇತನವನ್ನು ಸೂರಿ ಅವರು 9 ಡಾಲರ್‌ಗೆ ಹೆಚ್ಚಿಸಿದ್ದರು ಎಂದು ಆ ಆರೋಪಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News