ಚಳಿಗೆ ನಡುಗಿದ ಚೀನಾದ ಬೀಜಿಂಗ್; ಶೂನ್ಯ ಡಿಗ್ರಿಗಿಂತ ಕೆಳಗಿಳಿದ ತಾಪಮಾನ

Update: 2023-12-25 17:20 GMT

Photo: PTI 

ಬೀಜಿಂಗ್: ಚೀನಾದ ರಾಜಧಾನಿ ಬೀಜಿಂಗ್ ನಲ್ಲಿ ಡಿಸೆಂಬರ್ 11ರಿಂದ ಡಿ.24ರವರೆಗೆ ತಾಪಮಾನ ಶೂನ್ಯ ಡಿಗ್ರಿಗಿಂತ ಕೆಳಮಟ್ಟದಲ್ಲಿದ್ದು ಇದು 1951ರಲ್ಲಿ ದಾಖಲೆಗಳು ಪ್ರಾರಂಭವಾದಂದಿನಿಂದ ಅತೀ ದೀರ್ಘಾವಧಿಯ ಶೀತ ಅಲೆಯಾಗಿದೆ ಎಂದು ಸಿಎನ್ಎನ್ ವರದಿ ಮಾಡಿದೆ.

ಡಿಸೆಂಬರ್ 11ರಂದು ಬೀಜಿಂಗ್ ನಲ್ಲಿ ತಾಪಮಾನ ಶೂನ್ಯ ಡಿಗ್ರಿಗಿಂತ ಕೆಳಗಿಳಿದಿತ್ತು. ಆ ಬಳಿಕ ಡಿಸೆಂಬರ್ 24ರಂದು ತಾಪಮಾನ ಶೂನ್ಯ ಡಿಗ್ರಿಗಿಂತ ಮೇಲೆ ಏರಿದ್ದನ್ನು ಬೀಜಿಂಗ್ನ ನಾಂಜಿಯಾವೊ ಹವಾಮಾನ ಕೇಂದ್ರ ದಾಖಲಿಸಿದೆ. ನಡುವಿನ ಸುಮಾರು 300 ಗಂಟೆಗಳ ಅವಧಿಯಲ್ಲಿ ರಾಜಧಾನಿ ಮೈಕೊರೆಯುವ ಚಳಿಯಲ್ಲಿ ನಡುಗಿದ್ದು ಇದು ಹೊಸ ದಾಖಲೆಯಾಗಿದೆ ಎಂದು ಸರಕಾರಿ ಸ್ವಾಮ್ಯದ ʼಬೀಜಿಂಗ್ ಡೈಲಿ' ವರದಿ ಮಾಡಿದೆ.

ಈ ತಿಂಗಳಿಡೀ ಚೀನಾದ ಬಹುತೇಕ ಪ್ರದೇಶಗಳಲ್ಲಿ ತೀವ್ರ ಚಳಿಗಾಳಿ ಬೀಸಿದ್ದು ಉತ್ತರ ಚೀನಾದ ಹಲವು ನಗರಗಳಲ್ಲಿ ಉಷ್ಣ (ಶಾಖ)ಸಾಮಥ್ರ್ಯ ಗರಿಷ್ಟ ಮಿತಿಯನ್ನು ತಲುಪಿದೆ. ಚೀನಾದ ಮಧ್ಯ ಹೆನಾನ್ ಪ್ರಾಂತದಲ್ಲಿ ಹಲವು ತಾಂತ್ರಿಕ ಅಡಚಣೆ ಕಾಣಿಸಿಕೊಂಡಿದೆ. ಜಿಯಾವೊಝವೊ ಪ್ರಾಂತದ ವಾನ್ಫಾಂಗ್ ವಿದ್ಯುತ್ ಸ್ಥಾವರದಲ್ಲಿ ಸಮಸ್ಯೆ ಕಾಣಿಸಿಕೊಂಡ ಬಳಿಕ ಶಾಖ ವ್ಯವಸ್ಥೆ (ಮನೆ, ಕಟ್ಟಡದ ಒಳಗೆ ಉಷ್ಣತೆ ಹೆಚ್ಚಿಸುವ ವ್ಯವಸ್ಥೆ)ಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪುಯಾಂಗ್ ಮತ್ತು ಪಿಂಗ್ಡಿಂಗ್ಷಾನ್ ನಗರಗಳಲ್ಲಿ ಬಹುತೇಕ ಸರಕಾರಿ ಕಟ್ಟಡಗಳಲ್ಲಿಯೂ ಈ ವ್ಯವಸ್ಥೆಯನ್ನು ಕಡಿತಗೊಳಿಸಿದ್ದು ಆಸ್ಪತ್ರೆ, ಶಾಲೆಗಳು ಹಾಗೂ ಜನವಸತಿ ಕಟ್ಟಡಗಳಿಗೆ ಆದ್ಯತೆ ನೀಡಲಾಗಿದೆ. ಬೀಜಿಂಗ್ನಲ್ಲಿ ಬೀಸುತ್ತಿರುವ ಶೀತ ಮಾರುತವು ನಗರದ ಮೆಟ್ರೋ ವ್ಯವಸ್ಥೆಗೆ ತೊಡಕಾಗಿದೆ. ಕೆಲ ದಿನಗಳ ಹಿಂದೆ ಮಂಜು ಮುಸುಕಿದ ವಾತಾವರಣದಿಂದಾಗಿ 2 ರೈಲುಗಳ ನಡುವೆ ಡಿಕ್ಕಿಯಾಗಿ ಹಲವರು ಗಾಯಗೊಂಡಿದ್ದಾರೆ. ತೀವ್ರ ಚಳಿಗಾಳಿಯು ಕೆಲ ದಿನಗಳ ಹಿಂದೆ ಗನ್ಸು ಪ್ರಾಂತದಲ್ಲಿ ಸಂಭವಿಸಿದ್ದ ಭೂಕಂಪದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News