ಸಹಕಾರ ಒಪ್ಪಂದಕ್ಕೆ ಭೂತಾನ್, ಚೀನಾ ಸಹಿ
ಬೀಜಿಂಗ್: ಚೀನಾ ಮತ್ತು ಭೂತಾನ್ ನಡುವಿನ 25ನೇ ಸುತ್ತಿನ ಗಡಿಮಾತುಕತೆಯ ಬಳಿಕ ಉಭಯ ದೇಶಗಳ ನಡುವಿನ ಗಡಿಯನ್ನು ಗುರುತಿಸುವ ಮತ್ತು ನಿರ್ಧರಿಸುವ ಕುರಿತು ಜಂಟಿ ತಾಂತ್ರಿಕ ಸಮಿತಿ(ಜೆಟಿಟಿ)ಯ ಜವಾಬ್ದಾರಿ ಮತ್ತು ಕಾರ್ಯವನ್ನು ರೂಪಿಸುವ ನಿಟ್ಟಿನಲ್ಲಿ ಸಹಕಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ವರದಿಯಾಗಿದೆ.
ಭೂತಾನ್ನ ವಿದೇಶಾಂಗ ಸಚಿವ ಡಾ. ತಾಂದಿ ದೋರ್ಜಿ ಹಾಗೂ ಚೀನಾದ ಸಹಾಯಕ ವಿದೇಶಾಂಗ ಸಚಿವ ಸುನ್ ವೀಡಾಂಗ್ ನಡುವೆ ಬೀಜಿಂಗ್ನಲ್ಲಿ ಸೋಮವಾರ ಮತ್ತು ಮಂಗಳವಾರ ನಡೆದ 25ನೇ ಸುತ್ತಿನ ಗಡಿ ಮಾತುಕತೆಯಲ್ಲಿ ಸಹಕಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಸಭೆಯ ನೇಪಥ್ಯದಲ್ಲಿ ದೋರ್ಜಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಜತೆಯೂ ಮಾತುಕತೆ ನಡೆಸಿದ್ದರು. ಚೀನಾ ಜತೆಗಿನ ರಾಜತಾಂತ್ರಿಕ ಸಂಬಂಧವನ್ನು ಸ್ಥಾಪಿಸುವಂತೆ ಮತ್ತು ಉಭಯ ದೇಶಗಳ ನಡುವಿನ ಗಡಿ ಸಮಸ್ಯೆಯನ್ನು ಸಾಧ್ಯವಾದಷ್ಟು ಬೇಗ ಇತ್ಯರ್ಥಪಡಿಸಿಕೊಳ್ಳುವಂತೆ ವಾಂಗ್ ಯಿ ಭೂತಾನ್ ಸಚಿವರನ್ನು ಆಗ್ರಹಿಸಿದರು ಎಂದು ವರದಿಯಾಗಿದೆ.
ಗಡಿ ಮಾತುಕತೆಗಳ ತೀರ್ಮಾನ ಮತ್ತು ಚೀನಾ ಮತ್ತು ಭೂತಾನ್ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯು ಉಭಯ ದೇಶಗಳ ನಡುವಿನ ದೀರ್ಘಾವಧಿಯ ಮತ್ತು ಮೂಲಭೂತ ಹಿತಾಸಕ್ತಿಗಳನ್ನು ಸ್ಥಾಪಿಸುತ್ತದೆ ಎಂದು ಚೀನಾದ ಮೂಲಗಳು ಹೇಳಿವೆ.