ಸೌದಿ-ಇಸ್ರೇಲ್ ಮಾತುಕತೆಗೆ ಧಕ್ಕೆ ತರಲು ಹಮಾಸ್ ದಾಳಿ ನಡೆಸಿದೆ: ಬೈಡೆನ್ ಆರೋಪ

Biden says Hamas attack on Israel aimed at disrupting Israel-Saudi thaw

Update: 2023-10-21 18:10 GMT

Photo: PTI 

ವಾಶಿಂಗ್ಟನ್: ಎರಡು ವಾರಗಳ ಹಿಂದೆ ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಭೀಕರ ದಾಳಿಯು, ಇಸ್ರೇಲ್ ಹಾಗೂ ಸೌದಿ ಆರೇಬಿಯ ನಡುವೆ ಬಾಂಧವ್ಯಗಳ ಬೆಸೆಯುವುದನ್ನು ತಡೆಯುವ ಉದ್ದೇಶದಿಂದ ಕೂಡಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಶುಕ್ರವಾರ ಆಪಾದಿಸಿದ್ದಾರೆ.

ವಾಶಿಂಗ್ಟನ್‌ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಗಾಗಿ ಡೆಮಾಕ್ರಾಟ್ ಪಕ್ಷದ ನಿಧಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘‘ಸೌದಿ ಜೊತೆಗೆ ಇಸ್ರೇಲ್ ಸಂಧಾನ ಮಾತುಕತೆ ನಡೆಸುವುದನ್ನು ತಡೆಯುವುದು ಹಮಾಸ್ ಈ ಕೃತ್ಯವನ್ನು ನಡೆಸಲು ಇರುವ ಒಂದು ಕಾರಣವಾಗಿದೆ’’ ಎಂದು ಬೈಡೆನ್ ಹೇಳಿದ್ದಾರೆ.

ಸೌದಿ ಆರೇಬಿಯವು ಇಸ್ರೇಲ್‌ಗೆ ಮಾನ್ಯತೆ ನೀಡಲು ಬಯಸಿತ್ತು, ಆ ಮೂಲಕ ಮಧ್ಯಪ್ರಾಚ್ಯವನ್ನು ಒಗ್ಗೂಡಿಸಲು ಆಶಿಸಿತ್ತು ಎಂದವರು ಹೇಳಿದರು.

ಗಾಝಾದ ಮೇಲೆ ಇಸ್ರೇಲ್‌ನ ಭೀಕರ ಬಾಂಬ್ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರು ಈ ತಿಂಗಳ 14ರಂದು ರಿಯಾದ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸೌದಿ ಅಧಿಕಾರಿಗಳು ಹೇಳಿಕೆಯೊಂದನ್ನು ನೀಡಿ ಇಸ್ರೇಲ್ ಜೊತೆಗೆ ಬಾಂಧವ್ಯಗಳನ್ನು ಸಹಜಗೊಳಿಸುವ ಕುರಿತಾದ ಮಾತುಕತೆಗಳನ್ನು ಅಮಾನತಿನಲ್ಲಿಡಲಾಗುವುದೆಂದು ಘೋಷಿಸಿದ್ದರು.

ಸೌದಿ ಆರೇಬಿಯವು ಈವರೆಗೆ ಇಸ್ರೇಲ್‌ಗೆ ಮಾನ್ಯತೆಯನ್ನು ನೀಡಿರಲಿಲ್ಲ ಹಾಗೂ ಅಮೆರಿಕ ಮಧ್ಯಸ್ಥಿಕೆಯಲ್ಲಿ ನಡೆದ 2020ರ ಅಬ್ರಹಾಂ ಒಡಂಬಡಿಕೆಗೂ ಸೇರ್ಪಡೆಗೊಂಡಿರಲಿಲ್ಲ. ಆದರೆ ಈ ಒಡಂಬಡಿಕೆಗೆ ನೆರೆಹೊರೆಯ ರಾಷ್ಟ್ರಗಳಾದ ಬಹರೈನ್ ಹಾಗೂ ಯುಎಇ ಮತ್ತು ಮೊರಾಕ್ಕೊ ರಾಷ್ಟ್ರಗಳು ಸಹಿಹಾಕಿದ್ದವು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News