ಭಾರತದ ಡಾರ್ನಿಯರ್ ವಿಮಾನದಲ್ಲಿ ಪ್ರಯಾಣಿಸಲು ಬಾಲಕನಿಗೆ ಅನುಮತಿ ನಿರಾಕರಿಸಿದ ಮಾಲ್ಡೀವ್ಸ್ ಅಧ್ಯಕ್ಷ; ಬಾಲಕ ಮೃತ್ಯು
ಮಾಲೆ: ಭಾರತೀಯ ಡಾರ್ನಿಯರ್ ವಿಮಾನದ ಬಳಕೆಗೆ ಮಾಲ್ಡೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝ್ಝು ನಿರಾಕರಿಸಿದ್ದರಿಂದ ಜೀವ ಉಳಿಯಬಹುದಾಗಿದ್ದ 14 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ ಎಂದು ndtv.com ವರದಿ ಮಾಡಿದೆ.
ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ ತಯಾರಿಸಿರುವ ಹಾಗೂ ಭಾರತವು ಕೊಡುಗೆ ನೀಡಿರುವ ಡಾರ್ನಿಯರ್ ವಿಮಾನವನ್ನು ದ್ವೀಪರಾಷ್ಟ್ರದಲ್ಲಿ ಮಾನವೀಯ ನೆರವಿನ ಕೆಲಸಗಳಿಗಾಗಿ ವ್ಯಾಪಕವಾಗಿ ಬಳಕೆ ಮಾಡುತ್ತಾ ಬರಲಾಗುತ್ತಿದೆ.
ಮಿದುಳು ಗಡ್ಡೆ ಹಾಗೂ ಪಾರ್ಶ‍್ವವಾಯುವಿನಿಂದ ಬಳಲುತ್ತಿದ್ದ ಬಾಲಕನನ್ನು ಗಾಫ್ ಅಲೀಫ್ ವಿಲ್ಲಿಂಗಿಲಿಯ ವಿಲ್ಮಿಂಗ್ಟನ್ ದ್ವೀಪದಿಂದ ಮಾಲ್ಡೀವ್ಸ್ ರಾಜಧಾನಿ ಮಾಲೆಗೆ ಸಾಗಿಸಲು ಏರ್ ಆ್ಯಂಬುಲೆನ್ಸ್ ನೆರವಿಗಾಗಿ ಬಾಲಕನ ಕುಟುಂಬದ ಸದಸ್ಯರು ಎದುರು ನೋಡುತ್ತಿದ್ದರು. ಮಾಲೆಯಲ್ಲಿ ಬಾಲಕನಿಗಾಗಿ ಸುಧಾರಿತ ಚಿಕಿತ್ಸೆಯು ಏರ್ಪಾಡಾಗಿತ್ತು ಎಂದು ವರದಿಯಾಗಿದೆ.
ಬುಧವಾರ ರಾತ್ರಿ ಬಾಲಕನ ಪರಿಸ್ಥಿತಿಯು ಪಾರ್ಶ್ವವಾಯುವಿನೊಂದಿಗೆ ಮತ್ತಷ್ಟು ಉಲ್ಬಣಗೊಂಡಿದ್ದು, ಆತನನ್ನು ರಾಜಧಾನಿ ಮಾಲೆಗೆ ವಾಯು ಮಾರ್ಗದ ಮೂಲಕ ಸ್ಥಳಾಂತರಿಸಲು ಕುಟುಂಬದ ಸದಸ್ಯರು ಮನವಿ ಮಾಡಿದ್ದಾರೆ. ಆದರೆ, ಈ ಯಾತನಾಮಯ ಕರೆಗೆ ಗುರುವಾರ ದೇಶದ ವಾಯು ಯಾನ ಪ್ರಾಧಿಕಾರಗಳು ಪ್ರತಿಕ್ರಿಯಿಸುವವರೆಗೂ ಯಾವುದೇ ಉತ್ತರ ದೊರೆತಿಲ್ಲ. ಈ 16 ಗಂಟೆಗಳ ಕಾಲದ ವಿಳಂಬದಿಂದ ಆಕ್ರೋಶಗೊಂಡ ಸ್ಥಳೀಯ ಸಮುದಾಯವು, ಗಾಫ್ ಅಲೀಫ್ ವಿಲ್ಲಿಂಗಿಲಿಯಲ್ಲಿನ ಆಸ್ಪತ್ರೆಯ ಬಳಿ ಪ್ರತಿಭಟನೆ ನಡೆಸಿ, ವಿಳಂಬದ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಈ ಕುರಿತು ಸ್ಥಳೀಯ ಮಾಧ್ಯಮ ಸಂಸ್ಥೆ ಅಧಹುವಿನೊಂದಿಗೆ ಮಾತನಾಡಿರುವ ಮೃತ ಬಾಲಕನ ದುಃಖಭರಿತ ತಂದೆಯು, “ನಾವು ದ್ವೀಪ ಸಮೂಹದ ವಾಯು ಯಾನ ಪ್ರಾಧಿಕಾರಕ್ಕೆ ಕರೆ ಮಾಡಿ, ನಮ್ಮ ಪುತ್ರನನ್ನು ಕೂಡಲೇ ಮಾಲೆಗೆ ಸ್ಥಳಾಂತರಿಸಬೇಕು ಎಂದು ಮನವಿ ಮಾಡಿದೆವಾದರೂ, ಅವರು ನಮ್ಮ ಕರೆಗಳಿಗೆ ಉತ್ತರಿಸಲಿಲ್ಲ. ಅವರು ನಮ್ಮ ಕರೆಗೆ ಗುರುವಾರ ಬೆಳಗ್ಗೆ 8.30 ಗಂಟೆಗೆ ಪ್ರತಿಕ್ರಿಯಿಸಿದರು. ಇಂತಹ ಪ್ರಕರಣಗಳಲ್ಲಿ ಏರ್ ಆ್ಯಂಬುಲೆನ್ಸ್ ಅನ್ನು ಬಳಸಬೇಕು ಎಂದು ಸಲಹೆ ನೀಡಿದರು” ಎಂದು ಪ್ರಾಮಾಣಿಕ ಪ್ರತಿಕ್ರಿಯೆ ದೊರೆಯದ ಕುರಿತು ವಿಷಾದಿಸಿದ್ದಾರೆ.
ಇದರ ಬೆನ್ನಿಗೇ ಬಾಲಕನನ್ನು ಮಾಲೆಗೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾದರೂ, ಬಾಲಕನ ಆರೋಗ್ಯ ತ್ವರಿತವಾಗಿ ಕ್ಷೀಣಿಸಿದ್ದರಿಂದ ಯಾವುದೇ ಪ್ರಯೋಜನವಾಗಿಲ್ಲ. ಮಾಲೆಗೆ ಧಾವಿಸುತ್ತಿದ್ದಂತೆಯೆ ಬಾಲಕನನ್ನು ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು.
ಈ ಕುರಿತು ವೈದ್ಯಕೀಯ ಸ್ಥಳಾಂತರದ ಹೊಣೆಗಾರಿಕೆ ಹೊಂದಿರುವ ಆಸಂಧಾ ಕಂಪನಿ ಲಿಮಿಟೆಡ್ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಮನವಿ ಸ್ವೀಕರಿಸುತ್ತಿದ್ದಂತೆಯೆ ನಾವು ಸ್ಥಳಾಂತರ ಪ್ರಕ್ರಿಯೆಗೆ ಪ್ರಾಮಾಣಿಕ ಪ್ರಯತ್ನ ನಡೆಸಿದೆವು. ಆದರೆ, ಕೊನೆ ಕ್ಷಣದಲ್ಲಿ ಉಂಟಾದ ತಾಂತ್ರಿಕ ಅಡಚಣೆಯಿಂದಾಗಿ ಸ್ಥಳಾಂತರ ಕಾರ್ಯಾಚರಣೆಯು ವಿಳಂಬವಾಯಿತು” ಎಂದು ಸ್ಪಷ್ಟೀಕರಣ ನೀಡಿದೆ.
“ಜನವರಿ 18ರಂದು ಗಾಫ್ ಅಲೀಫ್ ವಿಲ್ಲಿಂಗಿಲಿಯಿಂದ ನಡೆದಿದ್ದ ತುರ್ತು ವೈದ್ಯಕೀಯ ಸ್ಥಳಾಂತರ ಕಾರ್ಯಾಚರಣೆಯ ಸಂದರ್ಭದಲ್ಲಿ ಬಾಲಕನು ಮೃತಪಟ್ಟಿರುವುದನ್ನು ದೃಢಪಡಿಸಲು ನಾವು ವಿಷಾದಿಸುತ್ತೇವೆ. ದುಃಖತಪ್ತ ಕುಟುಂಬಕ್ಕೆ ನಮ್ಮ ಆಸಂದ ಕಂಪನಿ ವ್ಯವಸ್ಥಾಪಕ ಮಂಡಳಿ ಹಾಗೂ ಎಲ್ಲ ಸಿಬ್ಬಂದಿಗಳು ಸಂತಾಪ ವ್ಯಕ್ತಪಡಿಸುತ್ತೇವೆ” ಎಂದು ಕಂಪನಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ನಡುವೆ, ಬಾಲಕನು ಮೃತಪಟ್ಟ ಆಸ್ಪತ್ರೆಯ ಮುಂದೆ ಪ್ರತಿಭಟನೆಗಳು ನಡೆಯುತ್ತಿವೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಮಾಲ್ಡೀವ್ಸ್ ಸಂಸದ ಮೀಕೈಲ್ ನಸೀಮ್, “ಭಾರತದೆಡೆಗಿನ ಅಧ್ಯಕ್ಷರ ವೈರತ್ವವನ್ನು ತಣಿಸಲು ಜನರು ತಮ್ಮ ಪ್ರಾಣ ತ್ಯಾಗ ಮಾಡಬೇಕಿಲ್ಲ” ಎಂದು ಕಿಡಿ ಕಾರಿದ್ದಾರೆ.
ಭಾರತ ಮತ್ತು ಮಾಲ್ಡೀವ್ಸ್ ನಡುವೆ ಹದಗೆಟ್ಟಿರುವ ರಾಜತಾಂತ್ರಿಕ ಸಂಬಂಧಗಳ ಬೆನ್ನಿಗೇ ಈ ಘಟನೆಯು ನಡೆದಿದೆ.