ಬ್ರಿಟನ್ ಗುಪ್ತಚರ ಇಲಾಖೆಯ ಏಜೆಂಟ್ ಬಂಧನ: ಚೀನಾ

Update: 2024-01-08 17:48 GMT

ಬೀಜಿಂಗ್: ಬ್ರಿಟನ್ನ ವಿದೇಶಿ ಗುಪ್ತಚರ ಸಂಸ್ಥೆ ಎಂ16ರ ಪರವಾಗಿ ಚೀನಾ ಸರಕಾರದ ರಹಸ್ಯಗಳನ್ನು ಸಂಗ್ರಹಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವುದಾಗಿ ಚೀನಾದ ರಾಷ್ಟ್ರೀಯ ಭದ್ರತಾ ಇಲಾಖೆ ಹೇಳಿದೆ.

ತೃತೀಯ ದೇಶದ ಪ್ರಜೆಯಾಗಿರುವ ಹುವಾಂಗ್ ಎಂಬ ಉಪನಾಮ ಹೊಂದಿರುವ ಈ ವ್ಯಕ್ತಿ 2015ರಿಂದಲೂ ಬ್ರಿಟನ್ ಪರವಾಗಿ ಕೆಲಸ ಮಾಡುತ್ತಿದ್ದ. ರಹಸ್ಯ ಮಾಹಿತಿ ಸಂಗ್ರಹಿಸುವ ಬಗ್ಗೆ ಈತನಿಗೆ ತರಬೇತಿ ನೀಡಲಾಗಿತ್ತು ಮತ್ತು ಅಗತ್ಯವಿರುವ ಸಲಕರಣೆಗಳನ್ನೂ ಒದಗಿಸಲಾಗಿದೆ. ಹಲವು ಬಾರಿ ಚೀನಾಕ್ಕೆ ಭೇಟಿ ನೀಡಿದ್ದ ಈತ ಸರಕಾರದ ಹಲವು ರಹಸ್ಯ ಮಾಹಿತಿಗಳನ್ನು ಸಂಗ್ರಹಿಸಿದ್ದ ಎಂದು ಇಲಾಖೆ ಹೇಳಿದ್ದು ಹೆಚ್ಚಿನ ವಿವರವನ್ನು ಒದಗಿಸಿಲ್ಲ. ಚೀನಾದ ಅಪಾರದರ್ಶಕ ರಾಜಕೀಯ ಮತ್ತು ಕಾನೂನು ವ್ಯವಸ್ಥೆಯಡಿ ಸರಕಾರದ ರಹಸ್ಯಗಳ ಬಗ್ಗೆ ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿಲ್ಲ. ಸಾಮಾನ್ಯವಾಗಿ ಸಾರ್ವಜನಿಕ ದಾಖಲೆಯಲ್ಲಿರುವ ಅಂಕಿಅಂಶಗಳನ್ನು ವಿದೇಶಿ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುವುದನ್ನೂ ತನಿಖೆ ನಡೆಸಲಾಗುತ್ತದೆ.

ಚೀನಾ ಅಧಿಕಾರಿಗಳ ಹೇಳಿಕೆ ಬಗ್ಗೆ ಬ್ರಿಟನ್ ಸರಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಂಕಾಂಗ್ ನಲ್ಲಿ ರಾಜಕೀಯ ಹಕ್ಕುಗಳನ್ನು ಚೀನಾ ದಮನಿಸುತ್ತಿದೆ ಎಂದು ಬ್ರಿಟನ್ ಟೀಕಿಸಿದ ಬಳಿಕ ಚೀನಾ-ಬ್ರಿಟನ್ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಡುತ್ತಿದೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News