ಕೆನಡಾ ಚುನಾವಣೆ : ಲಿಬರಲ್ ಪಕ್ಷಕ್ಕೆ ಭಾರೀ ಮುನ್ನಡೆ ನಿರೀಕ್ಷೆ

PC | timesofindia
ಒಟ್ಟಾವ : ಅಮೆರಿಕದ 51ನೇ ರಾಜ್ಯವಾಗಿ ಕೆನಡಾ ಅಮೆರಿಕದಲ್ಲಿ ಸೇರಿಕೊಳ್ಳಬೇಕು ಎಂದು ಬಹಿರಂಗ ಹೇಳಿಕೆ ನೀಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಸ್ತಕ್ಷೇಪದಲ್ಲಿ ನಡೆದ ಕೆನಡಾ ಚುನಾವಣೆಯಲ್ಲಿ ಮತದಾನ ಮುಕ್ತಾಯವಾಗಿದ್ದು, ಲಿಬರಲ್ ಪಕ್ಷ ಭಾರೀ ಮುನ್ನಡೆ ಸಾಧಿಸಿದೆ.
ಕೆನಡಾ 51ನೇ ರಾಜ್ಯವಾದಲ್ಲಿ ಶೂನ್ಯ ಸುಂಕ ವಿಧಿಸುವ ಭರವಸೆಯನ್ನು ಟ್ರಂಪ್ ಜಾಲತಾಣಗಳಲ್ಲಿ ಪ್ರಕಟಿಸುವರೆಗೂ ಕನ್ಸರ್ವೇಟಿವ್ ಪಕ್ಷದ ಮುಖಂಡ ಪೀರ್ ಪೊಯ್ಲಿವ್ರ್, ಹೊಸದಾಗಿ ಪ್ರಧಾನಿಯಾದ ಮಾರ್ಕ್ ಕಾರ್ನಿ ಅವರನ್ನು ಸೋಲಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಟ್ರಂಪ್ ಹೇಳಿಕೆ ನಾಟಕೀಯ ಬದಲಾವಣೆಗೆ ಕಾರಣಾಗಿದ್ದು, ಕಾರ್ನಿ ಅವರು ಮತ್ತೆ ಪ್ರಧಾನಿಯಾಗುವ ಸಾಧ್ಯತೆ ನಿಚ್ಚಳವಾಗಿದೆ.
ಸಿಬಿಸಿ ಡಿಸಿಷನ್ ಡೆಸ್ಕ್‍ನ ಅಂದಾಜಿನಂತೆ ಆಡಳಿತಾರೂಢ ಲಿಬರಲ್ ಪಕ್ಷ ಅವಲಾನ್, ಅಕಾಡಿ ಬಥ್ರಸ್ಟ್, ಕೇಪ್ ಸ್ಪೇರ್ ಮತ್ತು ಬಿಯಾಸಜೋರ್ ನಲ್ಲಿ ಮುನ್ನಡೆ ಸಾಧಿಸುವ ನಿರೀಕ್ಷೆ ಇದ್ದು, ಕೇಂದ್ರ ನ್ಯೂಫೌಂಡ್‍ಲ್ಯಾಂಡ್ ಪ್ರಾಂತ್ಯ ಕನ್ಸರ್ವೇಟಿವ್ ಪಕ್ಷದ ಪಾಲಾಗುವ ಸಾಧ್ಯತೆ ಇದೆ.
ಪೂರ್ವ ಪ್ರಾಂತ್ಯಗಳಲ್ಲಿ ಲಿಬರಲ್ ಪಕ್ಷ ಭರ್ಜರಿ ಮುನ್ನಡೆ ಸಾಧಿಸಿದ್ದು, ನ್ಯೂಫೌಂಡ್‍ಲ್ಯಾಂಡ್ ಮತ್ತು ಲ್ಯಾಬ್ರಡಾರ್ ನಲ್ಲಿ ಆರು ಜಿಲ್ಲೆಗಳು ಲಿಬರಲ್ ಪಕ್ಷದ ಪಾಲಾಗಿವೆ. ಕನ್ಸರ್ವೇಟಿವ್ ಪಕ್ಷ ಒಂದು ಜಿಲ್ಲೆಗೆ ತೃಪ್ತಿಪಟ್ಟುಕೊಂಡಿದೆ. ನೋವಾ ಸ್ಕೋಟಿಯಾದಲ್ಲಿ ಲಿಬರಲ್ ಪಕ್ಷ ಎಂಟು ಸ್ಥಾನಗಳನ್ನು ಗೆದ್ದಿದ್ದರೆ ಕನ್ಸರ್ವೇಟಿವ್ ಮೂರು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ನ್ಯೂ ಬನ್ರ್ಸ್‍ವಿಕ್‍ನಲ್ಲಿ ಲಿಬರಲ್ ಪಕ್ಷ ಆರು ಹಾಗೂ ಕನ್ಸರ್ವೇಟಿವ್ ಪಕ್ಷ ನಾಲ್ಕು ಸ್ಥಾನಗಳನ್ನು ಪಡೆದಿವೆ. ಕಳೆದ ಚುನಾವಣೆಯಲ್ಲಿ ಇತರ ಯಾವ ಪಕ್ಷಗಳೂ ಈ ಪ್ರಾಂತ್ಯಗಳಲ್ಲಿ ಯಾವ ಸ್ಥಾನಗಳನ್ನೂ ಗೆದ್ದಿರಲಿಲ್ಲ.
ನ್ಯೂಫೌಂಡ್‍ಲ್ಯಾಂಡ್‍ನ ಲಾಂಗ್ ರೇಂಜ್ ಮೌಂಟೈನ್ ರೈಡಿಂಗ್‍ನಲ್ಲಿ ಕನ್ಸರ್ವೇಟಿವ್ ಪಕ್ಷ ಗೆಲ್ಲುವ ಸಾಧ್ಯತೆ ಇದೆ ಎಂದು ಸಿಬಿಸಿ ಅಂದಾಜಿಸಿದೆ. ಈ ಪ್ರದೇಶ ಈ ಮೊದಲು ಲಿಬರಲ್ ವಶದಲ್ಲಿತ್ತು.
ಇದೇ ಪ್ರವೃತ್ತಿ ಮುಂದುವರಿದರೆ ಒಂದು ದಶಕದಿಂದ ಇದ್ದ ಲಿಬರಲ್ ಪಕ್ಷದ ಅಧಿಕಾರ ಮತ್ತೆ ವಿಸ್ತರಣೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಲಿಬರಲ್ ಪಕ್ಷ ಬಹುಮತ ಸಾಧಿಸಲಿದೆ ಎಂದು ಮಾಜಿ ಪ್ರಧಾನಿ ಜೀನ್ ಕ್ರೆಟಿನ್ ಅಂದಾಜಿಸಿದ್ದಾರೆ. ಕೇಂದ್ರ ಒಟ್ಟಾವದಲ್ಲಿ ಲಿಬರಲ್ ಪಕ್ಷದ ಯಾಸಿರ್ ನಕ್ವಿ ಪರವಾಗಿ ನಡೆದ ರ್ಯಾಲಿಯಲ್ಲಿ ಮಾತನಾಡಿದ 91 ವರ್ಷ ವಯಸ್ಸಿನ ಕ್ರೆಟಿನ್, ಲಿಬರ್ ಪಕ್ಷ ಬಹುಮತ ಸಾಧಿಸಿ ಸರ್ಕಾರ ರಚಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.