ಕೆನಡಾ: ಬೆಂಬಲ ಹಿಂಪಡೆದ ಎನ್‍ಡಿಪಿ; ಬಹುಮತ ಕಳಕೊಂಡ ಜಸ್ಟಿನ್ ಟ್ರೂಡೊ ಸರಕಾರ

Update: 2024-09-05 17:10 GMT

ಜಸ್ಟಿನ್ ಟ್ರೂಡೊ | PC : PTI

ಟೊರಂಟೊ: ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ನೇತೃತ್ವದ ಸರಕಾರಕ್ಕೆ ಬುಧವಾರ ಅನಿರೀಕ್ಷಿತ ಆಘಾತ ಎದುರಾಗಿದ್ದು ಮೈತ್ರಿಕೂಟದ ಪಾಲುದಾರ `ನ್ಯೂ ಡೆಮಾಕ್ರಟಿಕ್ ಪಾರ್ಟಿ(ಎನ್‍ಡಿಪಿ) ತನ್ನ ಬೆಂಬಲವನ್ನು ಹಿಂದಕ್ಕೆ ಪಡೆದ ಬಳಿಕ ಟ್ರೂಡೊ ಸರಕಾರ ಬಹುಮತ ಕಳೆದುಕೊಂಡಿದೆ.

ಟ್ರೂಡೊ ಅವರ ಲಿಬರಲ್ ಪಕ್ಷ ಅತ್ಯಂತ ದುರ್ಬಲ, ಸ್ವಾರ್ಥಿ ಹಾಗೂ ಕಾರ್ಪೋರೇಟ್ ಹಿತಾಸಕ್ತಿಗಳಿಗೆ ಬದ್ಧವಾಗಿದೆ. ಕಾರ್ಪೋರೇಟ್‍ಗಳ ಪರವಾಗಿರುವುದಾಗಿ ಟ್ರೂಡೊ ಪದೇ ಪದೇ ಸಾಬೀತುಪಡಿಸಿದ್ದಾರೆ' ಎಂದು ಎನ್‍ಡಿಪಿ ಮುಖಂಡ ಜಗ್‍ಮೀತ್ ಸಿಂಗ್ ಆರೋಪಿಸಿದ್ದಾರೆ. ಎನ್‍ಡಿಪಿ ಹಾಗೂ ಲಿಬರಲ್ ಪಕ್ಷ 2022ರ ಮಾರ್ಚ್‍ನಲ್ಲಿ ಮೈತ್ರಿ ಮಾಡಿಕೊಂಡಿವೆ. ಎರಡು ಪಕ್ಷಗಳ ನಡುವಿನ ಒಪ್ಪಂದದಂತೆ ಎನ್‍ಡಿಪಿ ಪಕ್ಷದ ಆದ್ಯತೆಗಳಿಗೆ ಶಾಸಕಾಂಗ ಪಕ್ಷ ಬದ್ಧವಾಗಿರಬೇಕು. ಇದಕ್ಕೆ ಪ್ರತಿಯಾಗಿ ವಿಶ್ವಾಸಮತದ ಸಂದರ್ಭ ಲಿಬರಲ್ ನೇತೃತ್ವದ ಸರಕಾರವನ್ನು ಎನ್‍ಡಿಪಿ ಬೆಂಬಲಿಸುತ್ತದೆ.

ಲಿಬರಲ್ ಪಕ್ಷ ಜನರನ್ನು ನಿರಾಶೆಗೊಳಿಸಿದೆ. ಅವರು ಕೆನಡಾ ಜನರಿಂದ ಮತ್ತೊಂದು ಅವಕಾಶಕ್ಕೆ ಅರ್ಹರಲ್ಲ ಎಂದು ಜಗ್‍ಮೀತ್ ಸಿಂಗ್ ಹೇಳಿದ್ದು ಎನ್‍ಡಿಪಿ ಚುನಾವಣೆಗೆ ಸಿದ್ಧವಿದೆ ಮತ್ತು ಅವಿಶ್ವಾಸ ನಿರ್ಣಯ ಮಂಡಿಸುವ ಆಯ್ಕೆಯೂ ನಮ್ಮ ಎದುರಿಗಿದೆ ಎಂದಿದ್ದಾರೆ. ಎನ್‍ಡಿಪಿ ಬೆಂಬಲ ಹಿಂಪಡೆದ ಬಳಿಕ ಮಾಧ್ಯಮದವರ ಎದುರು ಮಾತನಾಡಿದ ಟ್ರೂಡೊ , ಅವಧಿಗೂ ಮುನ್ನ ಚುನಾವಣೆ ನಡೆಸುವುದನ್ನು ತಾನು ಬಯಸುತ್ತಿಲ್ಲ ಎಂದಿದ್ದಾರೆ. ಅಲ್ಲದೆ ಹಿಂದಿನ ಪಾಲುದಾರ ಪಕ್ಷದ ಜತೆ ಮತ್ತೆ ಮೈತ್ರಿ ಮಾಡಿಕೊಳ್ಳುವ ಸೂಚನೆ ನೀಡಿದ್ದಾರೆ.

ಕೆನಡಾದಲ್ಲಿ ಫೆಡರಲ್ ಚುನಾವಣೆ 2025ರ ಅಕ್ಟೋಬರ್‍ಗೆ ನಿಗದಿಯಾಗಿದೆ. ಆದರೆ 338 ಸದಸ್ಯ ಬಲದ ಸದನದಲ್ಲಿ ಟ್ರೂಡೊ ಅವರ ಲಿಬರಲ್ ಪಕ್ಷ ಕೇವಲ 154 ಸಂಸದರನ್ನು ಹೊಂದಿದೆ. ಎನ್‍ಡಿಪಿಯ 25 ಸಂಸದರ ಬೆಂಬಲದಿಂದ ಸರಕಾರ ರಚಿಸಿದ್ದ ಟ್ರೂಡೊಗೆ ಈಗ ಸಂಕಷ್ಟ ಎದುರಾಗಿದೆ. ಪ್ರಮುಖ ವಿರೋಧ ಪಕ್ಷ ಕನ್ಸರ್ವೇಟಿವ್ ಪಕ್ಷ ಅವಧಿಗೂ ಮುನ್ನ ಚುನಾವಣೆಯನ್ನು ಆಗ್ರಹಿಸುತ್ತಿದ್ದು ಸೆಪ್ಟಂಬರ್ 18ರಂದು ನಡೆಯುವ ಸಂಸತ್ ಅಧಿವೇಶನದಲ್ಲಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ನಿರೀಕ್ಷೆಯಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News