ಕೆನಡಾ | ಖಾಲ್ಸಾ ದಿನಾಚರಣೆಯಲ್ಲಿ ಖಾಲಿಸ್ತಾನ್ ಧ್ವಜ ಪ್ರದರ್ಶನ
Update: 2024-05-13 22:47 IST

Photo Source - PTI | ಸಾಂದರ್ಭಿಕ ಚಿತ್ರ
ಒಟ್ಟಾವ : ಕೆನಡಾದ ಪ್ರಮುಖ ನಗರಗಳಲ್ಲಿ ನಡೆದ ವಾರ್ಷಿಕ ನಗರ ಕೀರ್ತನ ಪರೇಡ್(ಖಾಲ್ಸಾ ಪರೇಡ್) ಸಂದರ್ಭ ಸಿಖ್ ಸಮುದಾಯದ ಸದಸ್ಯರು ಖಾಲಿಸ್ತಾನ್ ಧ್ವಜಗಳನ್ನು ಪ್ರದರ್ಶಿಸಿ ಜಾಥಾ ನಡೆಸಿದ್ದಾರೆ ಎಂದು ವರದಿಯಾಗಿದೆ.
ಖಾಲಿಸ್ತಾನ್ ಪ್ರತ್ಯೇಕತಾವಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕ್ರಮದಲ್ಲಿ ಪೊಲೀಸರ ಉಪಸ್ಥಿತಿಯಲ್ಲೇ ಖಾಲಿಸ್ತಾನ್ ಪ್ರತ್ಯೇಕತಾವಾದಿಗಳು ಹಾಗೂ ಭಾರತ ವಿರೋಧಿ ಗುಂಪು ಖಾಲಿಸ್ತಾನ್ ಧ್ವಜಗಳನ್ನು ಪ್ರದರ್ಶಿಸಿದ್ದಾರೆ. ಇದೇ ಸಂದರ್ಭ ವಿಶೇಷ ನೇಮಕಾತಿ ಆಭಿಯಾನವನ್ನು ಕೆನಡಾ ಪೊಲೀಸರು ಹಮ್ಮಿಕೊಂಡಿದ್ದರು. `ಸಿಖ್ ಪರೇಡ್‍ನ ಸಂದರ್ಭ ಕೆನಡಾ ಪೊಲೀಸ್ ಇಲಾಖೆಯಲ್ಲಿನ 150ಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು. ಆಸಕ್ತರು ಕಾರ್ಯಕ್ರಮಕ್ಕೆ ಹಾಜರಾಗಿ ನೇಮಕಾತಿಯಲ್ಲಿ ಪಾಲ್ಗೊಳ್ಳಬಹುದು' ಎಂದು ಕೆನಡಾ ಪೊಲೀಸ್ ಇಲಾಖೆ ನೋಟೀಸ್‍ಗಳನ್ನು ಹಲವೆಡೆ ಅಂಟಿಸಿತ್ತು ಎಂದು ವರದಿಯಾಗಿದೆ.