ರಾಜತಾಂತ್ರಿಕ ಸಂಘರ್ಷ: ಬ್ರಿಟನ್ ನೆರವು ಯಾಚಿಸಿದ ಕೆನಡಾ
ಲಂಡನ್: ಭಾರತದ ಜತೆಗಿನ ಸಂಬಂಧ ಹಳಸಿರುವ ಬೆನ್ನಲ್ಲೇ, ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಅವರು ಹಳೆಯ ಹಾಗೂ ಆಪ್ತ ಮಿತ್ರರಾಷ್ಟ್ರವಾದ ಬ್ರಿಟನ್ ನ ಬೆಂಬಲ ಯಾಚಿಸಿದ್ದಾರೆ.
ಕೆನಡಾದ ಪ್ರಮುಖ ಐದು ಮಿತ್ರರಾಷ್ಟ್ರಗಳ ಪೈಕಿ ಬ್ರಿಟನ್ ಒಂದಾಗಿದ್ದು, ಇಲ್ಲಿನ ಪ್ರಧಾನಿ ಕೀರ್ ಸ್ಟ್ರಾಮರ್ ಜತೆಗೆ ಸಂಜೆ ದೂರವಾಣಿ ಸಂಭಾಷಣೆ ನಡೆಸಿದ ಕೆನಡಾ ಪ್ರಧಾನಿ ಪ್ರಸಕ್ತ ಉದ್ಭವಿಸಿರುವ ರಾಜತಾಂತ್ರಿಕ ಸಂಘರ್ಷವನ್ನು, "ಭಾರತ ಸರ್ಕಾರಕ್ಕೆ ಸಂಬಂಧ ಇರುವ ಏಜೆಂಟರು ಕೆನಡಾ ನಾಗರಿಕರನ್ನು ಗುರಿ ಮಾಡುತ್ತಿರುವ ಅಭಿಯಾನ" ಎಂದರು.
ಕೆನಡಾ ನಾಗರಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಾತರಿಪಡಿಸುವ ಅಗತ್ಯವನ್ನು ಉಭಯ ನಾಯಕರು ಚರ್ಚಿಸಿದ್ದು, ಕಾನೂನನ್ನು ಗೌರವಿಸುವ ಮತ್ತು ಅದಕ್ಕೆ ಮಹತ್ವ ನೀಡುವ ಅಗತ್ಯತೆಯ ಬಗ್ಗೆಯೂ ಮಾತುಕತೆ ನಡೆಸಿದರು. ಭಾರತದ ಜತೆಗೆ ಸಹಕರಿಸುವ ಆಸಕ್ತಿಯನ್ನು ಕೆನಡಾ ಮುಂದುವರಿಸಲಿದೆ ಎಂಬ ಅಂಶವನ್ನು ಟ್ರೂಡೊ ಒತ್ತಿ ಹೇಳಿದರು ಎಂದು ಉನ್ನತ ಮೂಲಗಳು ಹೇಳಿವೆ.
ಈ ಮಧ್ಯೆ ಬ್ರಿಟನ್ ನ ಖಲಿಸ್ತಾನ ಸಿಕ್ಖ್ ಫೆಡರೇಷನ್ ರಾಜಕೀಯ ವಿಭಾಗದ ಮುಖ್ಯಸ್ಥ ದಬೀಂದರ್ ಜೀತ್ ಸಿಂಗ್ ಹೇಳಿಕೆ ನೀಡಿ, ಭಾರತದ ವಿರುದ್ಧದ ಆರೋಪಗಳು ಬ್ರಿಟನ್ ಸರ್ಕಾರಕ್ಕೆ ಮತ್ತು ಇತರ ಐದು ದೇಶಗಳಿಗೆ ಹಾಗೂ ವಿಸ್ತೃತವಾಗಿ ಇಡೀ ಜಗತ್ತಿಗೆ ಎಚ್ಚರಿಕೆಯ ಗಂಟೆ. ಎಲ್ಲ ದೇಶಗಳು ಕೆನಡಾ ಜತೆ ಹೆಗಲಿಗೆ ಹೆಗಲು ಕೊಡುವ ಧೈರ್ಯ ಹಾಗೂ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು ಎಂದು ಕರೆ ನೀಡಿದ್ದಾರೆ.