ವಿದೇಶಿಗರಿಗೆ ನಿರ್ಬಂಧ ಬಿಗಿಗೊಳಿಸಿದ ಕೆನಡಾ: ಭಾರತೀಯ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಪರಿಣಾಮ ಸಾಧ್ಯತೆ
ಕೆನಡಾ: ಕೆನಡಾ ಸರಕಾರ ತಾತ್ಕಾಲಿಕ ನಿವಾಸಿಗಳಿಗೆ ಸಂಬಂಧಿಸಿ ನಿರ್ಬಂಧಗಳನ್ನು ಬಿಗಿಗೊಳಿಸಿದ್ದು, ವಿದೇಶಿ ವಿದ್ಯಾರ್ಥಿಗಳಿಗೆ ನೀಡುವ ಅಧ್ಯಯನ ಪರವಾನಿಗೆ ಸಂಖ್ಯೆಯಲ್ಲಿ ಕಡಿತಗೊಳಿಸಲು ಮುಂದಾಗಿದೆ. ಇದು ಹೆಚ್ಚಾಗಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ನಾವು ಈ ವರ್ಷ ಕಡಿಮೆ ಎಂದರೆ 35% ವಿದೇಶಿ ವಿದ್ಯಾರ್ಥಿಗಳಿಗೆ ಅವಕಾಶವನ್ನು ನೀಡುತ್ತಿದ್ದೇವೆ ಮತ್ತು ಮುಂದಿನ ವರ್ಷ ಮತ್ತೆ 10% ದಷ್ಟು ಕಡಿಮೆಯಾಗಲಿದೆ ಎಂದು ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ತಿಳಿಸಿದ್ದಾರೆ.
ಕೆನಡಾಕ್ಕೆ ಜನರು ವಲಸೆ ಬರುವುದರಿಂದ ನಮ್ಮ ಆರ್ಥಿಕತೆಗೆ ಪ್ರಯೋಜನ ನೀಡುವುದು ನಿಜ ಆದರೆ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಾಗ ಮತ್ತು ವಿದ್ಯಾರ್ಥಿಗಳ ಲಾಭವನ್ನು ಬೇರೆಯವರು ಪಡೆದುಕೊಂಡಾಗ ನಾವು ಅದನ್ನು ತಡೆಯುತ್ತೇವೆ ಎಂದು ಜಸ್ಟಿನ್ ಟ್ರುಡೊ ಹೇಳಿದ್ದಾರೆ.
ಮಾಹಿತಿಯ ಪ್ರಕಾರ, ಕೆನಡಾ 2023ರಲ್ಲಿ 5,09,390 ಮತ್ತು 2024ರ ಮೊದಲ ಏಳು ತಿಂಗಳಲ್ಲಿ 1,75,920 ಜನರಿಗೆ ಅವಕಾಶ ನೀಡಿದೆ. ಹೊಸ ಕ್ರಮವು ವಿದೇಶಿ ವಿದ್ಯಾರ್ಥಿಗಳಿಗೆ ನೀಡುವ ಅಧ್ಯಯನ ಪರವಾನಿಗೆಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಿಕೊಂಡಿದೆ.
ಮುಂದಿನ ವರ್ಷ ಕೆನಡಾದಲ್ಲಿ ಚುನಾವಣೆ ನಡೆಯಲಿದೆ. ಇದಕ್ಕೂ ಮೊದಲು ಮಹತ್ವದ ಹೆಜ್ಜೆ ತೆಗೆದುಕೊಳ್ಳಲು ಟ್ರುಡೊ ಸರಕಾರ ಮುಂದಾಗಿದ್ದು, ವಿದ್ಯಾರ್ಥಿಗಳು ಮತ್ತು ವಿದೇಶಿ ಕೆಲಸಗಾರರನ್ನು ಒಳಗೊಂಡಂತೆ ತಾತ್ಕಾಲಿಕ ನಿವಾಸಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕೆನಡಾ ಭಾರತೀಯ ವಿದ್ಯಾರ್ಥಿಗಳಿಗೆ ನೆಚ್ಚಿನ ತಾಣವಾಗಿದೆ. ಕಳೆದ ತಿಂಗಳು ಬಿಡುಗಡೆಯಾದ ಭಾರತ ಸರ್ಕಾರದ ಅಂಕಿಅಂಶಗಳ ಪ್ರಕಾರ, ಸುಮಾರು 13.35 ಲಕ್ಷ ಭಾರತೀಯ ವಿದ್ಯಾರ್ಥಿಗಳು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ, ಅದರಲ್ಲಿ ಸುಮಾರು 4.27 ಲಕ್ಷ ವಿದ್ಯಾರ್ಥಿಗಳು ಕೆನಡಾದಲ್ಲಿದ್ದಾರೆ.
ರಾಯಿಟರ್ಸ್ ವರದಿ ಪ್ರಕಾರ, ಕೆನಡಾದಲ್ಲಿರುವ ಸುಮಾರು 40 ಪ್ರತಿಶತದಷ್ಟು ಸಾಗರೋತ್ತರ ವಿದ್ಯಾರ್ಥಿಗಳು ಭಾರತೀಯರಾಗಿದ್ದಾರೆ.