ಭಾರತದ ಜೊತೆ ವ್ಯಾಪಾರ ಒಪ್ಪಂದ ರದ್ದು: ಪಾಕಿಸ್ತಾನದಲ್ಲಿ ಔಷಧಿಗಳಿಗೆ ತತ್ವಾರ

Update: 2025-04-27 07:45 IST
ಭಾರತದ ಜೊತೆ ವ್ಯಾಪಾರ ಒಪ್ಪಂದ ರದ್ದು: ಪಾಕಿಸ್ತಾನದಲ್ಲಿ ಔಷಧಿಗಳಿಗೆ ತತ್ವಾರ

ಸಾಂಖದರ್ಭಿಕ ಚಿತ್ರ PC: freepik

  • whatsapp icon

ಇಸ್ಲಾಮಾಬಾದ್: ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ಜೊತೆಗಿನ ಸಿಂಧೂ ಜಲ ಒಪ್ಪಂದವನ್ನು ಭಾರತ ಅಮಾನತುಗೊಳಿಸಿದ ಬೆನ್ನಲ್ಲೇ, ಭಾರತದ ಜೊತೆಗಿನ ಎಲ್ಲ ವ್ಯಾಪಾರ ಒಪ್ಪಂದಗಳನ್ನು ಪಾಕಿಸ್ತಾನ ಕಡಿದುಕೊಂಡಿದೆ. ಇದರಿಂದಾಗಿ ಆರ್ಥಿಕ ಸಂಕಷ್ಟದಿಂದ ಜರ್ಜರಿತವಾಗಿರುವ ದೇಶದಲ್ಲಿ ಔಷಧಿಗಳ ಪೂರೈಕೆ ವ್ಯತ್ಯಯವಾಗಿದೆ.

ಭಾರತದ ಜತೆಗೆ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿದ ಕ್ರಮದಿಂದಾಗಿ ಪಾಕಿಸ್ತಾನದಲ್ಲಿ ಔಷಧೀಯ ಅಗತ್ಯತೆಗಳ ಪೂರೈಕೆಗೆ ಪಾಕಿಸ್ತಾನ ತುರ್ತು ಕ್ರಮಗಳನ್ನು ಕೈಗೊಂಡಿದೆ. ಆರೋಗ್ಯ ಅಧಿಕಾರಿಗಳು ಔಷಧಿಗಳನ್ನು ಪಡೆದುಕೊಳ್ಳಲು ತುರ್ತು ಸರ್ವಸನ್ನದ್ಧತೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಜಿಯೊ ನ್ಯೂಸ್ ವರದಿ ಮಾಡಿದೆ.

ವ್ಯಾಪಾರ ವಹಿವಾಟು ಸ್ಥಗಿತದಿಂದ ಔಷಧ ಉದ್ಯಮದ ಮೇಲೆ ಉಂಟಾಗಿರುವ ನೇರ ಪರಿಣಾಮದ ಬಗ್ಗೆ ಯಾವುದೇ ಅಧಿಕೃತ ಅಧಿಸೂಚನೆ ಇಲ್ಲ; ಆದರೆ ತುರ್ತು ಯೋಜನೆಗಳು ಈಗಾಗಲೇ ಜಾರಿಯಲ್ಲಿವೆ ಎಂದು ಪಾಕಿಸ್ತಾನದ ಔಷಧ ನಿಯಂತ್ರಣ ಪ್ರಾಧಿಕಾರ ದೃಢಪಡಿಸಿದೆ.

2019ರ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂತಹ ತುರ್ತು ಸನ್ನಿವೇಶಗಳಿಗಾಗಿ ನಾವು ಸಜ್ಜಾಗಿದ್ದೇವೆ. ನಮ್ಮ ಔಷಧಿ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸಕ್ರಿಯರಾಗಿದ್ದೇವೆ ಎಂದು ಡಿಆರ್ಎಪಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಎಪಿಐ (ಆ್ಯಕ್ಟಿವ್ ಫಾರ್ಮಸ್ಯೂಟಿಕಲ್ ಇಂಗ್ರೀಡಿಯೆಂಟ್ಸ್) ಮತ್ತು ವಿವಿಧ ಅತ್ಯಾಧುನಿಕ ಚಿಕಿತ್ಸಾ ಉತ್ಪನ್ನಗಳು ಸೇರಿದಂತೆ ಪಾಕಿಸ್ತಾನದ ಔಷಧೀಯ ಕಚ್ಚಾವಸ್ತುಗಳ ಪೈಕಿ ಶೇಕಡ 30 ರಿಂದ 40ರಷ್ಟು ಪಾಲು ಭಾರತದಿಂದ ಪೂರೈಕೆಯಾಗುತ್ತಿದೆ. ಆದರೆ ಈ ಪೂರೈಕೆ ಸರಣಿ ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ ಡಿಆರ್ಎಪಿ, ಚೀನಾ, ರಷ್ಯಾ ಮತ್ತು ಇತರ ಹಲವು ಯೂರೋಪಿಯನ್ ದೇಶಗಳಿಂದ ಪರ್ಯಾಯ ಮೂಲಗಳ ಹುಡುಕಾಟದಲ್ಲಿದೆ.

ರೇಬಿಸ್ ತಡೆ ಲಸಿಕೆ, ಹಾವಿನ ವಿಷ, ಕ್ಯಾನ್ಸರ್ ಚಿಕಿತ್ಸೆ, ಮೊನೊಕ್ಲೊನಾಲ್ ಆಂಟಿಬಾಡಿಗಳು ಮತ್ತು ಇತರ ಪ್ರಮುಖ ಜೈವಿಕ ಉತ್ಪನ್ನಗಳು ಸೇರಿದಂತೆ ಅಗತ್ಯ ವೈದ್ಯಕೀಯ ಪೂರೈಕೆಯ ಲಭ್ಯತೆಯ ನಿರಂತರತೆಯನ್ನು ಕಾಪಾಡಿಕೊಳ್ಳಲು ಏಜೆನ್ಸಿ ಪ್ರಯತ್ನ ನಡೆಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News