ಕದನ ವಿರಾಮ: ಹಮಾಸ್ ಹೊಸ ಪ್ರಸ್ತಾವನೆ
ಜೆರುಸಲೇಮ್ : ಗಾಝಾದಲ್ಲಿ ಹಮಾಸ್ ವಶದಲ್ಲಿರುವ ಒತ್ತೆಯಾಳುಗಳ ಬಿಡುಗಡೆಗೆ ಅನುವು ಮಾಡಿಕೊಡುವ ಕದನ ವಿರಾಮದ ಕುರಿತು ಮಧ್ಯಸ್ಥಿಕೆದಾರರ ಜತೆ ಮಾತುಕತೆ ನಡೆಸಲು ತಕ್ಷಣ ಖತರ್ ಗೆ ತೆರಳುವಂತೆ ಇಸ್ರೇಲ್ ನ ಗುಪ್ತಚರ ಇಲಾಖೆ ಮೊಸ್ಸಾದ್ ನ ಮುಖ್ಯಸ್ಥರಿಗೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶುಕ್ರವಾರ ಆದೇಶಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಹಮಾಸ್ನ ಕ್ರಮವನ್ನು ಸ್ವಾಗತಿಸುವುದಾಗಿ ಅದರ ಮಿತ್ರ ಹಿಜ್ಬುಲ್ಲಾ ಹೇಳಿದೆ.
ಕದನ ವಿರಾಮದ ಮಾತುಕತೆಯಲ್ಲಿ ಸಂಭಾವ್ಯ ಪ್ರಗತಿಯ ಬಗ್ಗೆ ಆಶಾವಾದದ ನಡುವೆ, ಖತರ್ ಮತ್ತು ಈಜಿಪ್ಟ್ ಮಧ್ಯಸ್ಥಿಕೆದಾರರ ಮೂಲಕ ಹಮಾಸ್ ರವಾನಿಸಿರುವ ಹೊಸ ಪ್ರಸ್ತಾವನೆಯ ಬಗ್ಗೆ ಚರ್ಚಿಸಲು ನೆತನ್ಯಾಹು ತನ್ನ ಭದ್ರತಾ ಸಂಪುಟದ ತುರ್ತು ಸಭೆಯನ್ನು ಕರೆದಿದ್ದಾರೆ ಎಂದು ವರದಿಯಾಗಿದೆ. ಗಾಝಾದಲ್ಲಿ ಹಲವು ಒತ್ತೆಯಾಳುಗಳು ಇನ್ನೂ ಜೀವಂತವಾಗಿರುವ ವಿಶ್ವಾಸವಿದೆ ಎಂದು ನೆತನ್ಯಾಹು ಹೇಳಿದ್ದಾರೆ. ಯುದ್ಧದಿಂದ ಜರ್ಝರಿತಗೊಂಡಿರುವ ಫೆಲೆಸ್ತೀನ್ ಪ್ರದೇಶದಲ್ಲಿ ಸಾವು-ನೋವಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕದನ ವಿರಾಮ ಒಪ್ಪಂದಕ್ಕೆ ಎರಡೂ ಕಡೆಯ ಮೇಲೆ ಅಂತರಾಷ್ಟ್ರೀಯ ಒತ್ತಡ ಹೆಚ್ಚುತ್ತಿದೆ.
ಇಸ್ರೇಲ್-ಹಮಾಸ್ ನಿಯೋಗವನ್ನು ಸಂಧಾನ ಮಾತುಕತೆಯಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನ ಮುಂದುವರಿಸಿರುವ ಖತರ್ಗೆ ಮೊಸ್ಸಾದ್ ಮುಖ್ಯಸ್ಥ ಡೇವಿಡ್ ಬರ್ನಿಯಾ ನೇತೃತ್ವದ ಇಸ್ರೇಲ್ ನಿಯೋಗ ತೆರಳಲಿದೆ. ಅವರು ಖತರ್ ಪ್ರಧಾನಿ ಮುಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಅಲ್ಥಾನಿಯನ್ನು ಭೇಟಿಯಾಗಿ, ಗಾಝಾ ಒಪ್ಪಂದ ಅಂತಿಮಗೊಳಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಮೊಸ್ಸಾದ್ ಮುಖ್ಯಸ್ಥರ ನಿಯೋಗವನ್ನು ಖತರ್ಗೆ ರವಾನಿಸುವ ಇಸ್ರೇಲ್ ನಿರ್ಧಾರವನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸ್ವಾಗತಿಸಿದ್ದಾರೆ. ಒಪ್ಪಂದ ಅಂತಿಮಗೊಳಿಸಲು ಇದು ಪ್ರಾಮಾಣಿಕ ಪ್ರಯತ್ನವಾಗಲಿದೆ ಎಂದು ಬೈಡನ್ ಶ್ಲಾಘಿಸಿರುವುದಾಗಿ ಶ್ವೇತಭವನದ ಹೇಳಿಕೆ ತಿಳಿಸಿದೆ. ಹಮಾಸ್ನ ಪ್ರಸ್ತಾವನೆಯಿಂದ ಕದನ ವಿರಾಮ ಒಪ್ಪಂದ ಪ್ರಕ್ರಿಯೆ ಮುಂದಕ್ಕೆ ಚಲಿಸಿದೆ ಮತ್ತು ಒಪ್ಪಂದ ಅಂತಿಮಗೊಳಿಸಲು ವೇದಿಕೆ ಒದಗಿಸಿದೆ. ಆದರೆ ಇನ್ನೂ ಸಾಕಷ್ಟು ಕಾರ್ಯಗಳು ಬಾಕಿಯುಳಿದಿರುವುದರಿಂದ ತಕ್ಷಣ ಕದನ ವಿರಾಮ ಜಾರಿಯಾಗಲಿದೆ ಎಂದು ಭಾವಿಸುವಂತಿಲ್ಲ ಎಂದು ಅಮೆರಿಕ ಹೇಳಿದೆ. ಗಾಝಾದಿಂದ ಇಸ್ರೇಲ್ ಪಡೆ ಹಿಂದಕ್ಕೆ ಸರಿದರೆ ಮಾತ್ರ ಒತ್ತೆಯಾಳು ಬಿಡುಗಡೆ ಒಪ್ಪಂದಕ್ಕೆ ಸಮ್ಮತಿಸುವುದಾಗಿ ಹಮಾಸ್ ಷರತ್ತು ಒಡ್ಡಿದೆ. ಆದರೆ ಒತ್ತೆಯಾಳುಗಳ ಬಿಡುಗಡೆಯಾಗದೆ ಯುದ್ಧ ಅಂತ್ಯಗೊಳ್ಳದು ಎಂದು ಇಸ್ರೇಲ್ ಪಟ್ಟುಹಿಡಿದಿದೆ. ಹಮಾಸ್ನ ಮಿಲಿಟರಿ ಮತ್ತು ಆಡಳಿತ ಸಾಮಥ್ರ್ಯವನ್ನು ನಾಶಗೊಳಿಸದೆ ಗಾಝಾ ಕಾರ್ಯಾಚರಣೆ ಅಂತ್ಯಗೊಳ್ಳುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಪದೇ ಪದೇ ಹೇಳಿದ್ದಾರೆ.
ಈ ಮಧ್ಯೆ, ಸಂಭಾವ್ಯ ಒಪ್ಪಂದಕ್ಕಾಗಿ ಹೊಸ ಪ್ರಸ್ತಾವನೆಯನ್ನು ರವಾನಿಸಿರುವುದಾಗಿ ಹಮಾಸ್ ಹೇಳಿದ್ದು ಇದನ್ನು ಪರಿಶೀಲಿಸುತ್ತಿರುವುದಾಗಿ ಇಸ್ರೇಲ್ ಸರಕಾರ ಗುರುವಾರ ಹೇಳಿತ್ತು. ಎರಡೂ ಕಡೆಯ ನಡುವೆ ಖತರ್, ಈಜಿಪ್ಟ್ ಮತ್ತು ಅಮೆರಿಕ ಮಧ್ಯಸ್ಥಿಕೆ ವಹಿಸಿದ್ದು ಹಲವು ತಿಂಗಳ ಪ್ರಯತ್ನಗಳ ಬಳಿಕ ಹೊಸ ನಿರೀಕ್ಷೆ ಮೂಡಿದೆ ಎಂದು ಮೂಲಗಳು ಹೇಳಿವೆ.