ವ್ಯಾಪಾರ ಮಾತುಕತೆಗೆ ಬಾಗಿಲು ತೆರೆದಿದೆ: ಚೀನಾ

ಸಾಂದರ್ಭಿಕ ಚಿತ್ರ | PC : NDTV
ಬೀಜಿಂಗ್: ಚೀನಾದ ಮೇಲಿನ ಸುಂಕಗಳನ್ನು ಗಣನೀಯವಾಗಿ ಕಡಿಮೆಗೊಳಿಸುವ ಸಾಧ್ಯತೆಯಿದೆ ಎಂಬ ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಚೀನಾ `ಅಮೆರಿಕದ ಜೊತೆಗಿನ ವ್ಯಾಪಾರ ಮಾತುಕತೆಗೆ ಬಾಗಿಲು ವಿಶಾಲವಾಗಿ ತೆರೆದಿದೆ' ಎಂದು ಬುಧವಾರ ಹೇಳಿದೆ.
ಜನವರಿಯಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಟ್ರಂಪ್ ಚೀನಾದಿಂದ ಆಮದಾಗುವ ಹಲವು ಉತ್ಪನ್ನಗಳ ಮೇಲೆ 145% ಹೆಚ್ಚುವರಿ ಸುಂಕ ವಿಧಿಸಿದ್ದರು. ಪ್ರತೀಕಾರ ಕ್ರಮವಾಗಿ ಚೀನಾವೂ ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು 125%ಕ್ಕೆ ಹೆಚ್ಚಿಸಿತ್ತು.
`ಸುಂಕ ಯುದ್ಧ ಮತ್ತು ವ್ಯಾಪಾರ ಸಮರದಲ್ಲಿ ಯಾವುದೇ ವಿಜೇತರು ಇಲ್ಲ ಎಂದು ಚೀನಾ ಈಗಾಗಲೇ ಹೇಳಿದೆ. ವ್ಯಾಪಾರ ಮಾತುಕತೆಗೆ ಚೀನಾದ ಬಾಗಿಲು ವಿಶಾಲವಾಗಿ ತೆರೆದಿರುತ್ತದೆ' ಎಂದು ಚೀನಾ ವಿದೇಶಾಂಗ ಇಲಾಖೆಯ ವಕ್ತಾರ ಗುವೊ ಜಿಯಾಕುನ್ ಹೇಳಿದ್ದಾರೆ. ಇದಕ್ಕೂ ಮುನ್ನ ಬೀಜಿಂಗ್ ನಲ್ಲಿ ಅಝರ್ಬೈಝಾನ್ ಅಧ್ಯಕ್ಷರ ಜತೆ ಸಭೆ ನಡೆಸಿದ ಬಳಿಕ ಮಾತನಾಡಿದ್ದ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ` ಸುಂಕಗಳು ಬಹುರಾಷ್ಟ್ರೀಯ ವ್ಯಾಪಾರ ವ್ಯವಸ್ಥೆಗೆ ಹಾನಿಯುಂಟು ಮಾಡುತ್ತದೆ. ಸುಂಕ ಮತ್ತು ವ್ಯಾಪಾರ ಸಮರಗಳು ಎಲ್ಲಾ ರಾಷ್ಟ್ರಗಳ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಹಾಳು ಮಾಡುತ್ತವೆ. ಮತ್ತು ಜಾಗತಿಕ ಆರ್ಥಿಕ ಕ್ರಮದ ಮೇಲೆ ಪರಿಣಾಮ ಬೀರುತ್ತದೆ' ಎಂದು ಹೇಳಿರುವುದಾಗಿ ಸರ್ಕಾರಿ ಸ್ವಾಮ್ಯದ `ಕ್ಸಿನ್ಹುವಾ' ಸುದ್ದಿಸಂಸ್ಥೆ ವರದಿ ಮಾಡಿದೆ.